Advertisement

ದುರಸ್ತಿ ಕಾಣದ ಕುಡಿವ ನೀರ ಕೆರೆ

04:52 PM Feb 07, 2020 | Naveen |

ಸಿಂಧನೂರು: ನಗರದ ಜನರ ದಾಹ ತಣಿಸುವ ಮೂಲವಾದ ನಗರದ ಹೊರವಲಯದ ಕುಷ್ಟಗಿ ರಸ್ತೆಯಲ್ಲಿರುವ ಕುಡಿಯುವ ನೀರಿನ ದೊಡ್ಡ ಕೆರೆ ದಂಡೆ ಅಲ್ಲಲ್ಲಿ ಕುಸಿದು ಹಲವು ತಿಂಗಳುಗಳೇ ಗತಿಸಿದರೂ ಪುರಸಭೆ ಈವರೆಗೆ ದುರಸ್ತಿಗೆ ಮುಂದಾಗಿಲ್ಲ.

Advertisement

ನಗರದಲ್ಲಿ ಜನಸಂಖ್ಯೆ ಸುಮಾರು 75 ಸಾವಿರದ ಗಡಿ ದಾಟಿದೆ. ನಗರದ 31 ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಕುಷ್ಟಗಿ ರಸ್ತೆಯಲ್ಲಿ 15 ಎಕರೆ ಜಾಗೆಯಲ್ಲಿ ಕೆರೆ ನಿರ್ಮಿಸಿದ್ದು, 7.5 ಮೀಟರ್‌ ನೀರು ಸಂಗ್ರಹ ಸಾಮರ್ಥ್ಯವಿದೆ. ಆದರೆ ಅಲ್ಲಲ್ಲಿ ಕೆರೆಯ ಸುತ್ತಲಿನ ಗೋಡೆ ಕುಸಿದಿದ್ದರಿಂದ ಹೆಚ್ಚು ನೀರು ಸಂಗ್ರಹಿಸಿದರೆ ಅಪಾಯ ಎದುರಾಗಬಹುದೆಂಬ ಹಿನ್ನೆಲೆಯಲ್ಲಿ ಸದ್ಯ 5 ಮೀಟರ್‌ನಷ್ಟು ಮಾತ್ರ ಕೆರೆಯಲ್ಲಿ ನೀರು ಸಂಗ್ರಹಿಸಲಾಗಿದೆ. ಹೀಗಾಗಿ ಮುಂಬರುವ ಬೇಸಿಗೆಯಲ್ಲಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಬಹುದೆಂಬ ಆತಂಕ ಜನತೆಯನ್ನು ಕಾಡುತ್ತಿದೆ. ಕೆರೆ ದುರಸ್ತಿಗಾಗಿ 6 ತಿಂಗಳ ಹಿಂದೆ ತಜ್ಞರ ತಂಡವನ್ನು ಕರೆಸಲು ನಗರಸಭೆ ಅಧಿಕಾರಿಗಳು ಮುಂದಾಗಿದ್ದರು. ಆದರೆ ಈವರೆಗೆ ಈ ಕೆಲಸವಾಗಿಲ್ಲ. ಕೆರೆ ದುರಸ್ತಿಗೂ ಮುಂದಾಗಿಲ್ಲ. ಕೆರೆ ಸುತ್ತಲಿನ ದಂಡೆ ದುರಸ್ತಿಗೊಳಿಸಬೇಕು. ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೊಸ ಕೆರೆ: ಕುಷ್ಟಗಿ ರಸ್ತೆಯಲ್ಲಿರುವ ಕೆರೆಯಲ್ಲಿ ನೀರು ಸಂಗ್ರಹಿಸಿದರೆ 4-5 ತಿಂಗಳು ಮಾತ್ರ ಕುಡಿಯುವ ನೀರು ಪೂರೈಸಬಹುದಾಗಿದೆ. ಉಳಿದ ದಿನಗಳಲ್ಲಿ ಎದುರಾಗುವ ನೀರಿನ ಅಭಾವ ತಡೆಗಾಗಿ, ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ತುರುವಿಹಾಳ ಬಳಿ 142 ಎಕರೆಯಲ್ಲಿ ಕೆರೆ ನಿರ್ಮಿಸಲಾಗಿದೆ. ಇದರಲ್ಲಿ 8.5 ಮೀಟರ್‌ನಷ್ಟು ನೀರು ಸಂಗ್ರಹಿಸಲಾಗಿದೆ.

ಜಾಲರಿ ಇಲ್ಲ: ನಗರದ ಸಾರ್ವಜನಿಕರು ವಾಯು ವಿಹಾರಕ್ಕಾಗಿ ಕುಷ್ಟಗಿ ರಸ್ತೆಯಲ್ಲಿರುವ ಕೆರೆಗೆ ಹೋಗುತ್ತಾರೆ. ಕೆರೆ ದಂಡೆಯ ಮೇಲೆ ವಾಕಿಂಗ್‌ ಮಾಡುತ್ತಾರೆ. ಆದರೆ ಕೆರೆಯಲ್ಲಿ ಕಸಕಡ್ಡಿ ಎಸೆಯದಂತೆ ಸುರಕ್ಷತೆಗಾಗಿ ಸುತ್ತಲೂ ಜಾಲರಿ ಅಳವಡಿಸಿಲ್ಲ. ಜಾಲರಿ ಹಾಕದ್ದರಿಂದ ಈಗಾಗಲೇ ಈ ಹಿಂದೆ ಇಬ್ಬರು ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಇನ್ನಾದರೂ ಕೆರೆ ಸುತ್ತ ಜಾಲರಿ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವರ್ಷ ಕಳೆದರೂ ಕುಡಿಯುವ ನೀರಿನ ಕೆರೆ ದುರಸ್ತಿಯಾಗಿಲ್ಲ. ಇದರಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಬಹುದೆಂಬ ಜನರಲ್ಲಿ ಆತಂಕ ಮೂಡುತ್ತಿದೆ. ಕೂಡಲೇ ಸಂಬಂಧಿಸಿದ ಇಲಾಖೆ ಅಧಿ ಕಾರಿಗಳು ಕೆರೆ ದುರಸ್ತಿಗೆ ಮುಂದಾಗಬೇಕು.
ವೀರೇಶ ಭಾವಿಮನಿ,
ಅಧ್ಯಕ್ಷರು, ಕರವೇ ಪ್ರವೀಣಶೆಟ್ಟಿ
ಬಣ, ಸಿಂಧನೂರು

Advertisement

ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈಗಾಗಲೇ ಕೆರೆ ದುರಸ್ತಿಗೆ ಹಣ ಮಂಜೂರಾಗಿದೆ. ಶೀಘ್ರದಲ್ಲೆ ಕೆರೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಬೇಸಿಗೆಯಲ್ಲಿ ನಗರದ ಜನತೆಗೆ ಸಮರ್ಪಕ ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು.
ಆರ್‌.ವಿರುಪಾಕ್ಷಮೂರ್ತಿ,
ನಗರಸಭೆ ಪೌರಾಯುಕ್ತ,
ಸಿಂಧನೂರು.

„ಚಂದ್ರಶೇಖರ ಯರದಿಹಾಳ

Advertisement

Udayavani is now on Telegram. Click here to join our channel and stay updated with the latest news.

Next