Advertisement

ಅಧಿಕಾರಿಗಳ ವಿರುದ್ಧ ಸಚಿವರು ಗರಂ

04:26 PM May 18, 2019 | Team Udayavani |

ಸಿಂಧನೂರು: ನಗರದಲ್ಲಿ ಕಳೆದ 7 ವರ್ಷದಿಂದ ಆರಂಭವಾದ 24×7 ಕುಡಿಯುವ ನೀರು, ಯುಜಿಡಿ ಹಾಗೂ ನಗರೋತ್ಥಾನ ರಸ್ತೆಗಳ ಕಾಮಗಾರಿಗಳು ಇಲ್ಲಿವರೆಗೂ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಮಾಡುವ ಹಲ್ಕಾ ಕೆಲಸಕ್ಕೆ ನಮಗೆ ಮರ್ಯಾದೆ ಇಲ್ಲದಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಹರಿಹಾಯ್ದರು

Advertisement

ನಗರದ ನಗರಸಭೆ ಕಚೇರಿಯಲ್ಲಿ ಶುಕ್ರವಾರ ನಡೆದ 24×7 ಕುಡಿಯುವ ಕಾಮಗಾರಿ ಹಾಗೂ ನಗರೋತ್ಥಾನ ಯುಜಿಡಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನಾನು ಹಿಂದೆ ಶಾಸಕನಾಗಿದ್ದಾಗ ಆರಂಭವಾದ ಕೆಲಸಗಳು ಇಲ್ಲಿವರೆಗೂ ಒಂದು ಪೂರ್ಣಗೊಂಡಿಲ್ಲ. ನಗರದಲ್ಲಿ ಸಾರ್ವಜನಿಕರಿಗೆ ಮುಖ ತೋರಿಸಲು ನಮ್ಮಿಂದ ಆಗುತ್ತಿಲ್ಲ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಹೆಚ್ಚು ಕಾಣುತ್ತಿದೆ. ಬೇಸಿಗೆ ಕಾಲದಲ್ಲೂ ಕುಡಿಯಲು ನೀರು ಸರಿಯಾಗಿ ಸಾರ್ವಜನಿಕರಿಗೆ ಕೊಡದೆ ಇದ್ದರೆ ಹೇಗೆ? ಕೆಲಸ ಮಾಡಲು ಇಷ್ಟ ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ. ಆ ಕೆಲಸಕ್ಕೆ ಬೇರೆಯವರನ್ನು ಹಾಕಿಸಿಕೊಂಡು ಬರುತ್ತೇನೆ ಎಂದು ಹೇಳಿದರು

ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಬಿಡುವ ವ್ಯವಸ್ಥೆಯಿದೆ. ಸ್ವತಃ ನನ್ನ ಕ್ಷೇತ್ರದಲ್ಲಿ 6 ದಿನಕ್ಕೆ ಒಂದು ಸಲ ನೀರು ಪೂರೈಸಲಾಗುತ್ತಿದೆ. ಹೀಗಿದ್ದಾಗ ನನ್ನ ಮರ್ಯಾದೆ ಏನಾಗಬೇಕು ಎಂದು ಪ್ರಶ್ನಿಸಿದರು.

ಅಧಿಕಾರಿಗಳನ್ನು ನೋಡಿದರೆ ನಾಚಿಕೆಯಾಗುತ್ತದೆ. ಬೇಜಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ಸಸ್ಪೆಂಡ್‌ ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ರಾಯಚೂರು ನಗರದಲ್ಲಿ ಕುಡಿಯುವ ನೀರಿನ ಕೆಲಸ ಸರಿಯಾಗಿ ಮಾಡಿಲ್ಲ. ಇದೇ ರೀತಿ ಮುಂದುವರಿದರೆ ಇನ್ನುಳಿದ ಹಣ ಬಿಡುಗಡೆ ಮಾಡುವುದಿಲ್ಲ. ಇದನ್ನು ಸಿಎಂ ಗಮನಕ್ಕೆ ತರಲಾಗುತ್ತದೆ ಹಾಗೂ ಸಂಬಂಧಿಸಿದ ಸಚಿವರಿಗೂ ತಿಳಿಸಲಾಗುವುದು ಎಂದು ಹೇಳಿದರು.

Advertisement

2011ರಲ್ಲಿ ಎಲ್ಲ ಕೆಲಸಗಳು ಪ್ರಾರಂಭವಾಗಿವೆ. ಅದರಲ್ಲೂ 4 ಸಲ ಸಮಯ ಹೆಚ್ಚಿಗೆ ತೆಗೆದುಕೊಂಡಿದ್ದರೂ ಯಾವುದೊಂದು ಕೆಲಸವೂ ಪೂರ್ಣಗೊಂಡಿಲ್ಲ. ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಸಭೆ ಆಯೋಜಿಸಿದ್ದರು ಗೈರಾಗುತ್ತಾರೆ. ಈ ಬಾರಿ ಕೊನೆ ಅವಧಿ ನೀಡುತ್ತೇವೆ. ಶೀಘ್ರದಲ್ಲಿ ಕೆಲಸ ಮುಗಿಸದೇ ಹೋದರೆ ಎಲ್ಲರನ್ನೂ ಸಸ್ಪೆಂಡ್‌ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ನಗರಸಭೆ ಪೌರಾಯುಕ್ತ ವಿರೂಪಾಕ್ಷ‌ ಮೂರ್ತಿ ಮಾತನಾಡಿ, ನಗರದಲ್ಲಿ ಒಟ್ಟು 13,944 ನಳಗಳಿವೆ. ಆದರೂ 24×7 ಕಾಮಗಾರಿ ನನೆಗುದಿಗೆ ಬಿದ್ದಿದೆ. ಸಾರ್ವಜನಿಕರಿಗೆ ಸರಿಯಾಗಿ ನೀರು ಮುಟ್ಟಿಸಲು ಆಗುತ್ತಿಲ್ಲ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕೆಲಸಗಳು ಆಗುತ್ತಿಲ್ಲ. ಇದೇ ರೀತಿ ಮುಂದುವರಿದರೆ ನಗರಸಭೆಗೆ ಸಾರ್ವಜನಿಕರು ಮುತ್ತಿಗೆ ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೂಡಲೇ ಕೆಲಸ ಸರಿಪಡಿಸಬೇಕು ಎಂದು ಹೇಳಿದರು.

ನಿರಂತರ ಕುಡಿಯುವ ನೀರಿನ ಯೋಜನೆ(24×7) ಅಧಿಕಾರಿ ವಿಶ್ವೇಶ್ವರಯ್ಯ ಮಾತನಾಡಿ, ಈಗಾಗಲೇ ಕೆಲ ವಾರ್ಡ್‌ಗಳಲ್ಲಿ ನಮ್ಮ ಕೆಲಸ ಪೂರ್ಣಗೊಂಡಿದೆ. ಇನ್ನುಳಿದ ವಾರ್ಡ್‌ಗಳಲ್ಲಿ ಕೆಲಸಗಳ ಬಗ್ಗೆ ನಮ್ಮ ಸಿಬ್ಬಂದಿಗೆ ಸೂಚಿಸಲಾಗಿದೆ. ಶೀಘ್ರದಲ್ಲಿ ನೀರು ಕೊಡುವ ವ್ಯವಸ್ಥೆ ಮಾಡುತ್ತೇವೆ. ನಗರದ 1, .23, 27, 22 ವಾರ್ಡ್‌ಗಳಲ್ಲಿ ಪೂರ್ಣ ಪ್ರಮಾಣದ ಕೆಲಸವಾಗಿದೆ ಹಾಗೂ ಜೂನ್‌ 6ರಂದು ಬರುವ ಎಲ್ಲ ವಾರ್ಡ್‌ಗಳಿಗೆ ನೀರು ಬಿಡುವ ವ್ಯವಸ್ಥೆ ಮಾಡುತ್ತೇವೆ. ನಮಗೆ ಆಗಸ್ಟ್‌ ವರೆಗೆ ಸಮಯ ಕೊಟ್ಟರೆ ಎಲ್ಲ ಕೆಲಸವನ್ನೂ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ವಿಜಯಕುಮಾರ ಪಾಟೀಲ, ನಿರತಂರ ಕುಡಿಯುವ ಯೋಜನೆ ಗುತ್ತೇದಾರ ದಿವಾಕರ, ಶರಣಬಸವ, ಜೆಇ ಶಾಂತಕುಮಾರ ಇದ್ದರು.

ಉದಯವಾಣಿ ವರದಿ ಪ್ರಸ್ತಾಪ
ನಗರದಲ್ಲಿ 24×7 ಹಾಗೂ ಯುಜಿಡಿ ನಗರೋತ್ಥಾನ ಕಾಮಗಾರಿಗಳ ಬಗ್ಗೆ ಸಿಂಧನೂರು ಜನರ ನರಕಯಾತನೆ ಮುಕ್ತಿ ಯಾವಾಗ? ಎಂಬ ವರದಿ ಉದಯವಾಣಿಯಲ್ಲಿ ಪ್ರಕಟವಾಗಿತ್ತು. ಸಭೆ ವರದಿ ಪ್ರಸ್ತಾಪಿಸಿದ ಸಚಿವರು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅಧಿಕಾರಿಗಳು ನಮ್ಮ ಮರ್ಯಾದೆ ಹಾಳು ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next