ಸಿಂಧನೂರು: ರೈತರ ಅನುಕೂಲಕ್ಕಾಗಿ ನಗರ ಹಾಗೂ ಹೋಬಳಿ ಕೇಂದ್ರಗಳಲ್ಲಿ ಜೋಳ ಖರೀದಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಿಷ್ಠ ಬೆಂಬಲ ಯೋಜನೆಯಡಿ 1 ಲಕ್ಷ ಕ್ವಿಂಟಲ್ ಬಿಳಿ ಜೋಳ ಖರೀದಿ ಮಾಡಲು ಸರಕಾರದಿಂದ ಅನುಮತಿ ಪಡೆಯಲಾಗಿದೆ. ಪ್ರತಿ ಕ್ವಿಂಟಲ್‌ಗೆ 2500ರಂತೆ ದರ ನಿಗದಿ ಮಾಡಲಾಗಿದೆ. ರೈತರು ಖರೀದಿ ಕೇಂದ್ರಗಳ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಅಕಾಲಿಕ ಮಳೆಯಿಂದ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಗಳು ಹಾಳಾಗಿದೆ. ಸಿಂಧನೂರು ತಾಲೂಕಿನಲ್ಲಿಯೇ ಸರ್ವೇ ಕಾರ್ಯ ಆರಂಭವಾಗಿದೆ. ಅಂದಾಜು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಬೆಳೆ ನಷ್ಟ ಆಗಿರುವ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಲಾಗಿದೆ. ಸರಕಾರದಿಂದ ಭತ್ತದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿಸಿದರು.
ಕೃಷಿ ಬೆಲೆ ಆಯೋಗದ ರಾಜ್ಯಾಧ್ಯಕ್ಷ ಹನಮನಗೌಡ ಬೆಳಗುರ್ಕಿ ಮಾತನಾಡಿ, ಕೃಷಿಕರಿಗೆ ಹಾಗೂ ಕೃಷಿಯೇತರ ಬೆಳೆ ಹೊಂದಿರುವ ರೈತರಿಗೆ ಸರ್ಕಾರ ಯಾವುದೇ ನಿಬಂಧನೆ ಹೇರುವುದಿಲ್ಲ. ರೈತರ ಪರವಾಗಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಭತ್ತ ಖರೀದಿ ಮಾಡಿಕೊಳ್ಳುವ ಅಂಗಡಿ ಮಾಲೀಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ತಾಲೂಕಿನ ಅನೇಕ ಗ್ರಾಮಗಳಲ್ಲಿ ಬೆಳೆ ನಷ್ಟ ಹೊಂದಿರುವ ಕುಟುಂಬಗಳಿಗೆ ಶೀಘ್ರವೇ ಪರಿಹಾರ ನೀಡಲು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಜೋಳ ಖರೀದಿಗೆ ಅಗತ್ಯ ಜಿಪಿಎಸ್ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಪಂಚಾಯತ ಅಧ್ಯಕ್ಷೆ ಹಾದಿಮನಿ ವೀರಲಕ್ಷ್ಮೀ ,ಕಾಡಾ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ, ಜಿಪಂ ಸದಸ್ಯರಾದ ಎನ್. ಶಿವನಗೌಡ, ಅಮರೇಗೌಡ ವಿರುಪಾಪುರ, ತಹಶೀಲ್ದಾರ್ ಮಂಜುನಾಥ ಭೋಗಾವತಿ, ಡಿಎಸ್‌ಪಿ ವಿಶ್ವನಾಥ ಕುಲಕರ್ಣಿ ಇದ್ದರು.