Advertisement

ಸ್ವಚ್ಛತೆ-ತ್ಯಾಜ್ಯ ವಿಲೇವಾರಿಯದ್ದೇ ಸಮಸ್ಯೆ

10:44 AM Jul 29, 2019 | Naveen |

ಸಿಂಧನೂರು: ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ. ಹೂಳು ತುಂಬಿದ ಚರಂಡಿಗಳು. ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ.

Advertisement

ಇದು ಭತ್ತದ ನಾಡು ಎಂದೇ ಖ್ಯಾತಿಯಾದ ಸಿಂಧನೂರು ನಗರದ ದುಸ್ಥಿತಿ. ನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಇದ್ದರೂ, ಚರಂಡಿಗಳಲ್ಲಿ ಹೂಳು ತುಂಬಿದ್ದರೂ ನಗರಸಭೆ ಸ್ವಚ್ಛತೆಗೆ ಮುಂದಾಗುತ್ತಿಲ್ಲ. ನಗರಸಭೆ ನಿರ್ಲಕ್ಷ್ಯಕ್ಕೆ ನಗರವಾಸಿಗಳು ಹಿಡಿಶಾಪ ಹಾಕುತ್ತ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.

ಸಿಂಧನೂರು ನಗರದಲ್ಲಿ 31 ವಾರ್ಡ್‌ಗಳಿವೆ. ನಗರ ಬೆಳೆಯುತ್ತಿದೆ. ಹೊಸ-ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಆದರೆ ಬೆಳೆಯುತ್ತಿರುವ ನಗರ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ನಗರಸಭೆಯಲ್ಲಿ ಪೌರ ಕಾರ್ಮಿಕರಿಲ್ಲ. 29 ಜನ ಪೌರ ಕಾರ್ಮಿಕರು, 64 ಜನ ದಿನಗೂಲಿ ನೌಕರರಿದ್ದಾರೆ. ಇರುವ ಇಷ್ಟು ಸಿಬ್ಬಂದಿಯಲ್ಲಿ ನಗರ ಸ್ವಚ್ಛತೆ ಕಾಪಾಡಲು ಆಗುತ್ತಿಲ್ಲ ಎನ್ನಲಾಗಿದೆ. ನಗರದ ಜನಸಂಖ್ಯೆಗೆ ಅನುಸಾರವಾಗಿ ಕನಿಷ್ಠ 150 ಜನ ಪೌರ ಕಾರ್ಮಿಕರ ಅಗತ್ಯವಿದೆ ಎನ್ನಲಾಗುತ್ತಿದೆ.

ನಗರದ ವಿವಿಧ ವಾರ್ಡ್‌ಗಳಲ್ಲಿ ನಿರ್ಮಿಸಲಾದ ಬಹುತೇಕ ಮನೆಗಳ ಶೌಚಾಲಯದ ಕೊಳಚೆ ನೀರನ್ನು ನೇರವಾಗಿ ಚರಂಡಿಗೆ ಬಿಡಲಾಗುತ್ತಿದೆ. ಕ್ರಮ ಕೈಗೊಳ್ಳಬೇಕಾದ ನಗರಸಭೆ ಅಧಿಕಾರಿಗಳು ಸದಸ್ಯರ ಮುಲಾಜಿಗೆ ಒಳಗಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ.

ನಗರದಲ್ಲಿ ನಿತ್ಯ ಸುಮಾರು 25ರಿಂದ 40 ಟನ್‌ ತ್ಯಾಜ್ಯ ಸಂಗ್ರಹವಾಗುತ್ತದೆ. ನಗರಸಭೆಯಿಂದ ಕೋರ್ಟ್‌ ಹಿಂದೆ, ಆಕ್ಸಿಸ್‌ ಬ್ಯಾಂಕ್‌ ಹತ್ತಿರ, ತಹಶೀಲ್ದಾರ್‌ ಕಚೇರಿ ಮುಂದೆ, ಪೊಲೀಸ್‌ ಕ್ವಾಟರ್ಸ್‌ ಬಳಿ, ದೇವರಾಜ ಅರಸು ಮಾರುಕಟ್ಟೆ, ಸುಬ್ಬರಾವ್‌ ಆಸ್ಪತ್ರೆ, ಕೂಡಲಸಂಗಮೇಶ್ವರ ಟಾಕೀಜ್‌, ಬಸವೇಶ್ವರ ವೃತ್ತ ಸೇರಿ ಸುಮಾರು 18 ಕಡೆ ಕಸ ಹಾಕಲು ಕಬ್ಬಿಣದ ಕಂಟೇನರ್‌ ಇಡಲಾಗಿದೆ. ಆದರೆ ಬಹುತೇಕ ಕಡೆ ಕಂಟೇನರ್‌ಗಳು ಕಣ್ಮರೆಯಾಗಿವೆ. ರಸ್ತೆ ಪಕ್ಕವೇ ಜನರು, ವ್ಯಾಪಾರಸ್ಥರು ಕಸ ಹಾಕುತ್ತಿದ್ದು, ನಾಯಿ, ಹಂದಿ, ಬಿಡಾಡಿ ದನಗಳ ಹಾವಳಿಗೆ ಕಸ ರಸ್ತೆಗೆ ಬರುತ್ತಿದೆ. ಕನಿಷ್ಠ ಪಕ್ಷ ವಾರಕ್ಕೊಮ್ಮೆಯೂ ನಗರಸಭೆ ತ್ಯಾಜ್ಯ ವಿಲೇವಾರಿಗೆ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Advertisement

ನಗರದ ಚರಂಡಿಗಳಲ್ಲಿ ಹೂಳು ತುಂಬಿದೆ. ಸರಾಗವಾಗಿ ನೀರು ಹರಿಯುತ್ತಿಲ್ಲ. ಮಳೆ ಬಂದರೆ ಚರಂಡಿಗಳು ತುಂಬಿ ಕೊಳಚೆ ನೀರು, ಚರಂಡಿಯಲ್ಲಿನ ತ್ಯಾಜ್ಯ ರಸ್ತೆ ಮೇಲೆ ಹರಿಯುತ್ತದೆ. ಮುಖ್ಯವಾಗಿ ಹಳೆ ಬಜಾರ, ನಗರಸಭೆ ಬಳಿ, ಪಿಡಬ್ಲ್ಯೂಡಿ ಕ್ಯಾಂಪ್‌ ಬಳಿ ಅವ್ಯವಸ್ಥೆ ಹೇಳತೀರದು. ಕೊಳಚೆ ಪ್ರದೇಶಗಳು ಎಂದೇ ಗುರುತಿಸಲ್ಪಟ್ಟ ಗಂಗಾನಗರ, ಎ.ಕೆ. ಗೋಪಾಲನಗರ, ಅಂಬೇಡ್ಕರ್‌ ನಗರ, ಮಹಿಬೂಬಿಯಾ ಕಾಲೋನಿ, ಇಂದಿರಾ ನಗರಗಳಲ್ಲಿ ಚರಂಡಿ ಸ್ವಚ್ಛತೆ ಮಾಡುವುದೇ ಅಪರೂಪವಾಗಿದೆ. ಕೆಲವೆಡೆ ಚರಂಡಿ ಸೌಲಭ್ಯ ಇಲ್ಲದ್ದರಿಂದ ಮನೆ ಬಳಕೆ ನೀರು ರಸ್ತೆಯಲ್ಲೇ ಹರಿದು ಇಡೀ ಪರಿಸರ ಹಾಳಾಗಿದೆ.

ಅಂಗಡಿ ತ್ಯಾಜ್ಯ ರಸ್ತೆಗೆಳ ಪೌರ ಕಾರ್ಮಿಕರು ಬೆಳಗ್ಗೆ 6:00ಕ್ಕೆ ಹಳೆ ಬಜಾರ್‌, ಮುಖ್ಯ ರಸ್ತೆಯಲ್ಲಿ ಸ್ವಚ್ಛತೆ ಮಾಡುತ್ತಾರೆ. 9-10:00ರ ಸುಮಾರಿಗೆ ಅಂಗಡಿ ತೆರೆಯುವ ವರ್ತಕರು ಅಂಗಡಿಯಲ್ಲಿನ ಕಸ, ಕೊಳೆತ ತರಕಾರಿ, ತ್ಯಾಜವನ್ನು ರಸ್ತೆಗೆ ತಂದು ಸುರಿಯುತ್ತಾರೆ. ಕೆಲ ಸಣ್ಣಪುಟ್ಟ ಹೊಟೇಲ್ನವರು, ಮಾಂಸದಂಗಡಿಯವರು ರಸ್ತೆಗೆ ತ್ಯಾಜ್ಯ ಸುರಿಯುತ್ತಾರೆ.

ನಿತ್ಯ ನಾಲ್ಕು ಟ್ರ್ಯಾಕ್ಟರ್‌ಗಳಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಆದರ್ಶ, ವೆಂಕಟೇಶ್ವರ, ಖದರಿಯಾ ಕಾಲೋನಿ ಹಾಗೂ ಮಹಿಬೂಬಿಯಾ ಕಾಲೋನಿಗಳಲ್ಲಿ ಅತಿ ಹೆಚ್ಚು ತ್ಯಾಜ್ಯ ಸಂಗ್ರಹವಾಗುತ್ತದೆ. ನಗರದಲ್ಲಿ ಸಂಗ್ರಹವಾದ ತ್ಯಾಜವನ್ನು ಮಲ್ಲಾಪುರ ಗ್ರಾಮದ ಬಳಿ ನಗರಸಭೆ ಖರೀದಿಸಿದ 12 ಎಕರೆ ಜಮೀನಿನಲ್ಲಿ ವಿಲೇವಾರಿ ಮಾಡಲಾಗುತ್ತಿದೆ.

ಇನ್ನು ದಿನಗೂಲಿ ಪೌರ ಕಾರ್ಮಿಕರಿಗೆ ಕೇವಲ 220 ರೂ. ಕೂಲಿ ನೀಡಲಾಗುತ್ತಿದೆ. ಹೀಗಾಗಿ ಯಾರೂ ಕೆಲಸಕ್ಕೆ ಬರುತ್ತಿಲ್ಲ. ನಗರಸಭೆಯಲ್ಲಿ ಮೂವರು ಹಿರಿಯ, ಮೂವರು ಕಿರಿಯ ಆರೋಗ್ಯ ನಿರೀಕ್ಷಕರು ಬೇಕು. ನಗರದ ಜನರು ಕೂಡ ತಮ್ಮ ಹೊಣೆ ಅರಿತು ಸ್ವಚ್ಛತೆ ಕಾಪಾಡಬೇಕು. ಬಾರ್‌, ಹೋಟೆಲ್, ರೆಸ್ಟೋರೆಂಟ್, ವಸತಿಗೃಹಗಳ ಮಾಲೀಕರು ತ್ಯಾಜ್ಯವನ್ನು ನಗರಸಭೆ ಸಿಬ್ಬಂದಿ ತರುವ ತಳ್ಳುವ ಗಾಡಿಗಳಲ್ಲಿ ಹಾಕಬೇಕು. ಈ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ ಎನ್ನುತ್ತಾರೆ ನಗರಸಭೆ ಅಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next