Advertisement

ಸಿಂಧನೂರು: ವಿದ್ಯಾರ್ಥಿಗಳಿಗೆ ಪ್ರಯಾಣ ವೆಚ್ಚದ ಹೊರೆ

05:15 PM Jan 12, 2021 | Team Udayavani |

ಸಿಂಧನೂರು: ಕೋವಿಡ್‌ ಹಿನ್ನೆಲೆಯಲ್ಲಿ ತಡವಾಗಿಯಾದರೂ ಕಾಲೇಜುಗಳು ಆರಂಭವಾದ ಸಂತಸ ಒಂದೆಡೆಯಾದರೆ, ಪಾಲಕರಿಗೆ ನಿತ್ಯವೂ ಪ್ರಯಾಣದ ವೆಚ್ಚ ಭರಿಸಬೇಕಾದ ಅನಿವಾರ್ಯತೆ ಸಂಕಷ್ಟಕ್ಕೆ ದೂಡಿದೆ. ಸರಕಾರ ಅನುಮತಿ ನೀಡಿದ ಬಳಿಕ ಜ.1ರಿಂದಲೇ ಪಿಯುಸಿ, ಪದವಿ ವಿದ್ಯಾರ್ಥಿಗಳು ಕಾಲೇಜಿಗೆ ಬರಲಾರಂಭಿಸಿದ್ದಾರೆ. ಆದರೆ, ಸಾರಿಗೆ ಬಸ್‌ ಸೇವೆ ದೊರೆಯದಿದ್ದರಿಂದ ಪ್ರತಿ ದಿನ 50, 100 ರೂ.ಗಳನ್ನು ಖಾಸಗಿ ವಾಹನಗಳ ಪ್ರಯಾಣದ ವೆಚ್ಚಕ್ಕೆ
ವ್ಯಯಿಸುವಂತಾಗಿದೆ. ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳು ಉತ್ಸಾಹದಿಂದಲೇ ಆಗಮಿಸುತ್ತಿದ್ದರೂ ಕಳೆದ 11 ದಿನಗಳಿಂದ ಸಾರಿಗೆ ಸಮಸ್ಯೆ ಕಾಡಲಾರಂಭಿಸಿದೆ.

Advertisement

ತಾಲೂಕಿನ 180 ಹಳ್ಳಿಯ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಅರಸಿ ನಗರಕ್ಕೆ ಆಗಮಿಸುತ್ತಾರೆ. ಅವರಿಗೆ ಸಾರಿಗೆ ಬಸ್‌ ಸೌಲಭ್ಯ ದೊರೆಯದಿದ್ದರಿಂದ
ಕಾಲೇಜು ಆರಂಭದ ದಿನಗಳಲ್ಲೇ ತೊಂದರೆ ಎದುರಾಗಿದೆ.

ಹೊರೆಯಾದ ಶಿಕ್ಷಣ: ನಗರದಲ್ಲಿ 16 ಪದವಿ ಕಾಲೇಜುಗಳಿದ್ದರೆ, 38 ಪದವೀ ಪೂರ್ವ ಕಾಲೇಜುಗಳಿವೆ. ವಳಬಳ್ಳಾರಿ ಮಾರ್ಗದ ಹತ್ತಾರು ಹಳ್ಳಿ, ಬಪೂ³ರು,
ಶಾಂತಿನಗರ, ಸಿಂಗಾಪುರ, ಮಸ್ಕಿ ಸೇರಿದಂತೆ ವಿವಿಧ ಮಾರ್ಗದ ಹಲವು ಹಳ್ಳಿಗಳಿಂದ ವಿದ್ಯಾರ್ಥಿಗಳು ನಗರಕ್ಕೆ ಆಗಮಿಸಬೇಕಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 4ರ ವರೆಗೆ ಸರಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಪದವಿ, ಪಿಯು ತರಗತಿಗಳನ್ನು ನಡೆಸಲಾಗುತ್ತಿದೆ.

ಮನೆಯಲ್ಲೇ ಕುಳಿತು ಬೇಸತ್ತಿದ್ದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜುಗಳಿಗೆ ತಪ್ಪದೇ ಆಗಮಿಸುತ್ತಿದ್ದಾರೆ. ಉಚಿತ ಬಸ್‌ ಪಾಸ್‌ ಸೌಕರ್ಯವಿದ್ದರೂ ಸಾರಿಗೆ ಬಸ್‌ಗಳ ಸೌಲಭ್ಯ ಇಲ್ಲವಾಗಿದೆ. ಈ ಹಿಂದೆ ಓಡಾಡುತ್ತಿದ್ದ ಬಸ್‌ಗಳ ಸಂಚಾರ ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತವಾದ ನಂತರ ಮರು ಆರಂಭವಾಗಿಲ್ಲ. ಬಂದರೆ ಬಂತು; ಇಲ್ಲವಾದರೆ ಇಲ್ಲ ಎಂಬಂತೆ ಬಸ್‌ಗಳ ಓಡಾಟವಿದೆ. ಆದರೆ, ವಿದ್ಯಾರ್ಥಿಗಳು ದೂರದ ಹಳ್ಳಿಯಿಂದ ಆಗಮಿಸುವುದರಿಂದ ನಿತ್ಯ 50 ರೂ.ನಿಂದ 100 ರೂ.ಗಳನ್ನು ಪಾಲಕರಿಂದ ಪಡೆದೇ ಕಾಲೇಜುಗಳಿಗೆ ಆಗಮಿಸುವಂತಾಗಿದೆ. ಪ್ರಯಾಣ ವೆಚ್ಚ ಭರಿಸಿ ಬೇಸತ್ತಿರುವ ಪಾಲಕರು, ಆರ್ಥಿಕ ಹೊರೆಯಿಂದ
ನಲುಗುವಂತಾಗಿದೆ.

ಪರೀಕ್ಷೆಯ ಆತಂಕ: ಮೇ ಮೊದಲ ವಾರದಲ್ಲಿ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಸುವುದಾಗಿ ಈಗಾಗಲೇ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ. ಏಪ್ರಿಲ್‌ -ಮೇ ಮಧ್ಯೆ ಪದವಿ ಪರೀಕ್ಷೆಗಳು ನಡೆಯಲಿವೆ. ಸದ್ಯ ಲಭ್ಯ ಇರುವ ಕಡಿಮೆ ಅವ ಧಿಯಲ್ಲೇ ವಿದ್ಯಾರ್ಥಿಗಳು ಪರೀಕ್ಷೆಗೆ ಅಣಿಯಾಗಬೇಕಿದೆ.  ಆತಂಕಕ್ಕೆ ಸಿಲುಕಿರುವ ವಿದ್ಯಾರ್ಥಿಗಳು ನಿತ್ಯವೂ ತಪ್ಪದೇ ತರಗತಿಗಳಿಗೆ ಹಾಜರಾಗಲು ಆಸಕ್ತಿ ತೋರುತ್ತಿದ್ದಾರೆ. ತರಗತಿಗಳನ್ನು ತಪ್ಪಿಸಿಕೊಂಡರೆ ಉತ್ತಮ ಫಲಿತಾಂಶ ಪಡೆಯುವುದು ಕಷ್ಟವೆಂದು ಪಾಲಕರ ದುಂಬಾಲು ಬಿದ್ದು, ಪ್ರಯಾಣದ ವೆಚ್ಚಕ್ಕಾಗಿ ಹಣ ಪಡದು ಕಾಲೇಜುಗಳಿಗೆ ಬರುತ್ತಿದ್ದಾರೆ. ಸಾರಿಗೆ ಬಸ್‌ ಬಿಡಿಸುವಂತೆ  ಖಾಸಗಿ ಶಾಲೆ ಆಡಳಿತ ಮಂಡಳಿಗಳ ಮೇಲೂ ವಿದ್ಯಾರ್ಥಿಗಳು ಒತ್ತಡ ಹೇರುತ್ತಿದ್ದಾರೆ. ವಿದ್ಯಾರ್ಥಿಗಳ ಸಂಕಟ ಈಶಾನ್ಯ ಸಾರಿಗೆ ಸಂಸ್ಥೆಗೆ ಅರ್ಥವಾಗದ್ದರಿಂದ ವಿದ್ಯಾರ್ಥಿಗಳು ಸಾರಿಗೆ ಬಸ್‌ ಬರುವ ನಿರೀಕ್ಷೆಯಲ್ಲಿ ಬಸ್‌ ನಿಲ್ದಾಣ ಕಾಯುವಂತಾಗಿದೆ.

Advertisement

ಸರಕಾರದ ಮಾರ್ಗಸೂಚಿ ಪ್ರಕಾರ ನಾವು ಕಾಲೇಜುಗಳಲ್ಲಿ ತರಗತಿ ನಡೆಸುತ್ತಿದ್ದೇವೆ. ಗ್ರಾಮೀಣ ಭಾಗದಿಂದ ನಮ್ಮ ಸಂಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಸಂಬಂಧಿ ಸಿದವರು ಅವರಿಗೆ ಬಸ್‌ ಸೌಲಭ್ಯ ಕಲ್ಪಿಸಬೇಕಿದೆ.
*ಎಸ್‌.ಎನ್‌.ಶ್ರೇಷ್ಠಿ, ಅಧ್ಯಕ್ಷ, ಆಕ್ಸ್‌ಫರ್ಡ್‌ ಶಿಕ್ಷಣ ಸಂಸ್ಥೆ, ಸಿಂಧನೂರು

ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಕಾಲೇಜುಗಳಿಗೆ ಆಗಮಿಸುತ್ತಿದ್ದು, ಅವರಿಗೆ ತೊಂದರೆಯಾಗಿದೆ. ಪರೀಕ್ಷೆಗಳು ಹತ್ತಿರವಾಗುತ್ತಿರುವುದರಿಂದ ಅವರಿಗೆ ಸಮಸ್ಯೆಯಾಗದಂತೆ ಈಶಾನ್ಯ ಸಾರಿಗೆ ಸಂಸ್ಥೆ ನೆರವಿಗೆ ಧಾವಿಸಬೇಕು.
*ಪರಶುರಾಮ ಮಲ್ಲಾಪುರ, ಅಧ್ಯಕ್ಷರು, ನೋಬೆಲ್‌ ಶಿಕ್ಷಣ ಸಂಸ್ಥೆ, ಸಿಂಧನೂರು

ಕಾಲೇಜಿಗೆ ಬೆಳಗ್ಗೆ 8ಗಂಟೆಗೆ ಹಾಜರಾಗಬೇಕು. ದಿನಾಲೂ ಬಸ್‌ ನಿಲ್ದಾಣಕ್ಕೆ ಬಂದು ನಿಂತರೂ ಬಸ್‌ಗಳು ಬರುವುದಿಲ್ಲ. ಖಾಸಗಿ ವಾಹನಗಳು ಜನ ಸೇರಿದಾಗಲೇ ಕರೆದೊಯ್ಯುತ್ತವೆ. ಹೀಗಾಗಿ, ನಿತ್ಯ ತೊಂದರೆ ಅನುಭವಿಸುತ್ತಿದ್ದು, ಸಾರಿಗೆ ಬಸ್‌ ಬಿಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
* ರಾಜು, ದ್ವಿತೀಯ ಪಿಯುಸಿ ವಿದ್ಯಾರ್ಥಿ, ಬಂಗಾರಿ ಕ್ಯಾಂಪ್‌

*ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next