Advertisement

ಸಿಂಧನೂರು: ಕೈಗೆ ಆಸೆ, ಕಮಲಕ್ಕೆ ಕನವರಿಕೆ!

03:23 PM May 03, 2019 | Suhan S |
ಕೊಪ್ಪಳ: ಕಳೆದ ಬಾರಿ ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಲೀಡ್‌ ಕೊಟ್ಟಿದ್ದ ಸಿಂಧನೂರು ಕ್ಷೇತ್ರದಲ್ಲಿ ಈ ಬಾರಿ ಲೋಕ ಸಮರದ ಚಿತ್ರಣವೇ ಬೇರೆಯಾಗಿದೆ. ತೆಲುಗು ಭಾಷಿಕರ ಮತ ಸೆಳೆಯಲು ಕಾಂಗ್ರೆಸ್‌ ಈ ಬಾರಿ ಆಂಧ್ರ ಸಿಎಂ ಮೂಲಕ ಮತಬಾಣ ಬಿಡಿಸಿದೆ. ಇನ್ನೂ ಕೈಗೊಳಗಿದ್ದ ಟಿಕೆಟ್ ಕಗ್ಗಂಟು ಕಮಲಕ್ಕೆ ಮತ್ತೆ ಪ್ಲಸ್‌ ಆದರೂ ಅಚ್ಚರಿ ಪಡಬೇಕಿಲ್ಲ.

ಕಳೆದ 2014ರ ಚುನಾವಣೆ ವೇಳೆ ಮೋದಿ ಅಲೆ ದೇಶದ ತುಂಬೆಲ್ಲ ಹರಡಿದ್ದರಿಂದ ಎಲ್ಲಡೆಯೂ ಮೋದಿ ಮಾತಾಗಿತ್ತು. ಅದರಲ್ಲೂ 2013ರಲ್ಲಿ ಕೊಪ್ಪಳ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಸಂಗಣ್ಣ ಕರಡಿ 2014ರಲ್ಲಿ ಎಂಪಿ ಟಿಕೆಟ್ ಪಡೆಯಬೇಕೆಂಬ ಹಂಬಲದಿಂದ ಕಮಲದಿಂದ ಛಿದ್ರವಾಗಿದ್ದ ಹಲವು ನಾಯಕರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದರು.

Advertisement

ಬಿಜೆಪಿಗೆ ಹೆಚ್ಚಿದ ಮತ ಪ್ರಮಾಣ: ಕೈಪಾಳೆಯದಲ್ಲಿ ಸಿಡಿದೆದ್ದಿದ್ದ ವರನ್ನು ಕಮಲ ಪಾಳೆಯಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಆಗ ಸಿಂಧನೂರು ಕುರುಬ ನಾಯಕ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಅವರು ಕಮಲಕ್ಕೆ ಸೇರಿದ್ದು, ಕಮಲದ ಭತ್ತಳಿಕೆಗೆ ಮತಗಳ ಪ್ರಮಾಣ ಹೆಚ್ಚಾಗಿತ್ತು. ಆಗ ನಡೆದ ಲೋಕ ಸಮರದಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಗೆ ಈ ಕ್ಷೇತ್ರದಲ್ಲಿ 69,752 ಮತಗಳು ಬಂದಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಹಿಟ್ನಾಳಗೆ 49,660 ಮತಗಳು ಬಂದಿದ್ದವು. ಕರಡಿ ಬರೊಬ್ಬರಿ 20,092 ಮತಗಳನ್ನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಕರಡಿ ಕುಣಿತಕ್ಕೆ ಬ್ರೇಕ್‌?: ಪ್ರಸಕ್ತ ಚುನಾವಣೆ ರಾಜಕೀಯ ಚಿತ್ರಣವೇ ಬದಲಾಗಿದೆ. ಕಮಲದಲ್ಲಿದ್ದ ಕೆ. ವಿರುಪಾಕ್ಷಪ್ಪ ಬಿಜೆಪಿಯಲ್ಲಿನ ಆಂತರಿಕ ವ್ಯವಸ್ಥೆಯಿಂದ ಸಿಡಿದೆದ್ದು ಮತ್ತೆ ಕಾಂಗ್ರೆಸ್‌ ಸೇರಿದ್ದಾರೆ. ಇದು ಕರಡಿ ಕುಣಿತಕ್ಕೆ ಬ್ರೇಕ್‌ ಹಾಕುವ ಸ್ಥಿತಿಗೆ ತಂದಿಟ್ಟಿದೆ.

ಟಿಕೆಟ್ ಫೈಟ್: ಆರಂಭದಲ್ಲಿ ಕೈನಲ್ಲಿ ಎಂಪಿ ಟಿಕೆಟ್‌ಗೆ ಕೆ.ವಿರುಪಾಕ್ಷಪ್ಪ, ಬಸವನಗೌಡ ಬಾದರ್ಲಿ, ಹಿಟ್ನಾಳ ಹೈಕಮಾಂಡ್‌ ಮಟ್ಟದಲ್ಲಿ ಫೈಟ್ ನಡೆಸಿದ್ದರು. ಸಿದ್ದರಾಮಯ್ಯರ ಬೆನ್ನು ಬಿದ್ದು ಹಿಟ್ನಾಳ ಟಿಕೆಟ್ ಪಡೆದಿದ್ದರು. ಬಾದರ್ಲಿ, ವಿರುಪಾಕ್ಷಪ್ಪ ಒಳಗೊಳಗೆ ಸಿಡಿದೆದ್ದು ಕೈ ವಿರುದ್ಧ ಗುಡುಗಿದ್ದರು. ಎಲ್ಲವೂ ಸರಿಹೋಗಿದೆ ಎಂದು ಕಾಂಗ್ರೆಸ್‌ ಹೇಳಿಕೊಂಡರೂ ಕೈನ ಒಳಜಗಳ ಬೂದಿ ಮುಚ್ಚಿದ ಕೆಂಡದಂತಿದೆ.

ಒಳಜಗಳ ಕಮಲಕ್ಕೆ ಫ್ಲಸ್‌: ಆಂತರಿಕ ಜಗಳ ಕಮಲಕ್ಕೆ ಪ್ಲಸ್‌ ಆಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಇನ್ನೂ 2013ರಲ್ಲಿ ಈ ಕ್ಷೇತ್ರ ಕೈ ಶಾಸಕ ಹಂಪನಗೌಡ ಬಾದರ್ಲಿ ವಶದಲ್ಲಿತ್ತು. 2018ರ ಚುನಾವಣೆಯಲ್ಲಿ ಕ್ಷೇತ್ರ ಜೆಡಿಎಸ್‌ ತೆಕ್ಕೆಗೆ ಬಂದಿದೆ. ಸಚಿವ ವೆಂಕಟರಾವ್‌ ನಾಡಗೌಡ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.

Advertisement

ಮೈತ್ರಿ ಧರ್ಮ: ರಾಜ್ಯದಲ್ಲಿ ಮೈತ್ರಿ ಧರ್ಮ ಪಾಲಿಸಬೇಕೆಂಬ ಹಂಬಲದಿಂದ ಅಲ್ಲದೇ ಹೈಕ ಭಾಗದಲ್ಲಿ ಇರುವ ಏಕೈಕ ಜೆಡಿಎಸ್‌ ಕ್ಷೇತ್ರದಲ್ಲಿ ಕೈಗೆ ಲೀಡ್‌ ಕೊಡಬೇಕೆಂಬ ಮಾತಿನಿಂದ ಕೈ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಕ್ಷೇತ್ರದ ತುಂಬೆಲ್ಲ ಪ್ರಚಾರ ನಡೆಸಿದ್ದಾರೆ. ಇನ್ನೂ ಕಳೆದ ಸಲ ಭಾರಿ ಹಿನ್ನಡೆ ಕೊಟ್ಟ ಈ ಕ್ಷೇತ್ರದಲ್ಲಿ ಕೈ ರಾಜಕೀಯ ರಣತಂತ್ರಭರ್ಜರಿ ಹೆಣೆದು ಹೆಚ್ಚು ಪ್ರಚಾರ ನಡೆಸಿ ಮತಭೇಟೆ ನಡೆಸಿದೆ.

ಆಂಧ್ರವಾಡು ಮತಕ್ಕೆ ನಾಯ್ಡು ಬಾಣ: ಕ್ಷೇತ್ರದಲ್ಲಿ ಲಿಂಗಾಯತ, ಕುರುಬ ಹಾಗೂ ಆಂಧ್ರ ಮತಗಳು ಅಭ್ಯರ್ಥಿ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಲಿದ್ದು, ಕ್ಷೇತ್ರದ ಹಲವೆಡೆ ಆಂಧ್ರ ಕ್ಯಾಂಪಗಳು, ಬಾಂಗ್ಲಾದೇಶಿ ಕ್ಯಾಂಪ್‌ಗ್ಳಿವೆ. ಅವು ಕಳೆದ ಬಾರಿ ಬಿಜೆಪಿಗೆ ಪ್ಲಸ್‌ ಆಗಿದ್ದವು. ಇದನ್ನರಿತ ಕಾಂಗ್ರೆಸ್‌ ನಾಯಕರು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಆಹ್ವಾನಿಸಿ ಭರ್ಜರಿ ಪ್ರಚಾರ ನಡೆಸಿ ಆಂಧ್ರವಾಡು ಮತಗಳಿಗೆ ನಾಯ್ಡು ಬಾಣ ಬಿಟ್ಟಿದ್ದಾರೆ. ಇದರಲ್ಲಿ ಕೆಲವು ಮತಗಳು ಕೈ-ಕಮಲಕ್ಕೆ ಹಂಚಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಇನ್ನೂ ಬಾಂಗ್ಲಾದೇಶಿ ವಲಸಿಗರ ಮತಗಳ ಭದ್ರತೆಗೆ ಸಂಗಣ್ಣ ಕರಡಿ, ವಲಸೆ ಕುಟುಂಬಕ್ಕೆ ಶಾಶ್ವತ ಪೌರತ್ವ ಕಲ್ಪಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಬಿಜೆಪಿಗೆ ಪ್ಲಸ್‌ ಆಗುವ ಸಾಧ್ಯತೆಯಿದೆ.

ಸಮಬಲ ಹೋರಾಟ: ಬಿಜೆಪಿಗೆ ಮುನ್ನಡೆ ಸಿಗುವ ಸಾಧ್ಯತೆಯಿದೆ ಎಂದು ಕ್ಷೇತ್ರದ ಜನತೆ ಹೇಳುತ್ತಿದ್ದರೂ ಕೈ ಮಾಡಿದ ರಣತಂತ್ರಕ್ಕೆ ಸಮಬಲದಾಟ ನಡೆದಿದೆ. ಕಳೆದ ಬಾರಿಗಿಂತ ಕೈ ಈ ಬಾರಿ ಪ್ಲಸ್‌ ಆಗಲಿದ್ದರೆ, ಕಮಲಕ್ಕೆ ಈ ಬಾರಿ ಮೈನಸ್‌ ಎದುರಿಸುವ ಸಾಧ್ಯತೆಯಿದೆ.

ಅಭಿವೃದ್ಧಿಯೇ ಶ್ರೀರಕ್ಷೆ:

ಸಿಂಧನೂರು ಕ್ಷೇತ್ರದ ಮತದಾರರು ನನಗೆ ಕಳೆದ ಬಾರಿ ಅತಿ ಹೆಚ್ಚು ಮತಗಳನ್ನು ನೀಡುವ ಮೂಲಕ ಸಂಸದನನ್ನಾಗಿ ಆಯ್ಕೆ ಮಾಡಿದ್ದರು. ನಾನೂ ಅವರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮೋದಿ ಅಲೆ, ಅಭಿವೃದ್ಧಿ ಕೆಲಸದ ಜೊತೆಗೆ ಜಾತ್ಯತೀತವಾಗಿ ಕ್ಷೇತ್ರದಲ್ಲಿ ನನಗೆ ಬೆಂಬಲ ನೀಡಿರುವ ವಿಶ್ವಾಸವಿದೆ. -ಸಂಗಣ್ಣ ಕರಡಿ, ಬಿಜೆಪಿ ಅಭ್ಯರ್ಥಿ
ಮೈತ್ರಿ ಬಲದಿಂದ ಮುನ್ನಡೆ:

ಸಿಂಧನೂರು ಕ್ಷೇತ್ರದಲ್ಲಿ ಸಚಿವ ವೆಂಕಟರಾವ್‌ ನಾಡಗೌಡ, ಹಂಪನಗೌಡ ಬಾದರ್ಲಿ ಸೇರಿದಂತೆ ಹಲವು ನಾಯಕರು ನಮ್ಮೊಟ್ಟಿಗೆ ಒಗ್ಗಟ್ಟಿನಿಂದ ಶ್ರಮಿಸಿದ್ದಾರೆ. ಆಂಧ್ರ ಮತಗಳು ನಮಗೆ ಈ ಬಾರಿ ಪ್ಲಸ್‌ ಆಗಲಿವೆ. ಯುವ ಮತಗಳು, ಮೈತ್ರಿಯ ಬೆಂಬಲವು ನಮಗೆ ದೊರೆತಿದೆ. ಹೆಚ್ಚು ಲೀಡ್‌ ನಮಗೆ ದೊರೆಯಲಿದೆ. –ರಾಜಶೇಖರ ಹಿಟ್ನಾಳ, ಕೈ ಅಭ್ಯರ್ಥಿ
•ದತ್ತು ಕಮ್ಮಾರ
Advertisement

Udayavani is now on Telegram. Click here to join our channel and stay updated with the latest news.

Next