ಸಿಂಧನೂರು: ತಾಲೂಕಿನ ಹುಡಾ ಗ್ರಾಮದಲ್ಲಿ ನಾಲ್ವರು ಒಂದೇ ದಿನ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಸರಣಿ ಸಾವಿನ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಮೃತರನ್ನು ಪ್ರದೀಪ್ ಪೂಜಾರಿ (19), ಗಂಗಮ್ಮ ಹನುಮಂತ (57), ವೀರೇಶ ಕನಕಪ್ಪ (70), ದುರಗಮ್ಮ ಹುಡಾ (69) ಎಂದು ಗುರುತಿಸಲಾಗಿದೆ.
ಒಬ್ಬರ ಶವ ಗ್ರಾಮದ ಹೊಂಡವೊಂದರಲ್ಲಿ ತೇಲಿದೆ. ಮತ್ತೊಬ್ಬರು ಮಗಳ ಊರು ಮಸ್ಕಿ ತಾಲೂಕಿನ ಸಂಕನೂರಿಗೆ ಹೋದಾಗ ಮೃತಪಟ್ಟಿದ್ದಾರೆ.
ಬೇಸಿಗೆ ತಾಪಮಾನ 44 ಡಿ.ಸೆ.ನಷ್ಟಿದ್ದು, ಬಿಸಿಲಿನ ಕಾರಣಕ್ಕೆ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದು ಆರೋಗ್ಯ ಇಲಾಖೆಯ ತಂಡ ಗ್ರಾಮಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ.
ತಾಲೂಕು ವೈದ್ಯಾಧಿಕಾರಿ ಡಾ.ಅಯ್ಯನಗೌಡ ಮಾತನಾಡಿ, ಗ್ರಾಮಕ್ಕೆ ವೈದ್ಯಕೀಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾನಾ ಕಾರಣಕ್ಕೆ ಮೃತಪಟ್ಟ ಮಾಹಿತಿ ದೊರಕಿದೆ. ಒಂದೇ ದಿನ ನಾಲ್ಕು ಸಾವುಗಳಾಗಿದ್ದರಿಂದ ಗ್ರಾಮಸ್ಥರು ಭಯಗೊಂಡಿದ್ದಾರೆ” ಎಂದರು.
ತಹಸೀಲ್ದಾರ್ ಅರುಣಕುಮಾರ್ ದೇಸಾಯಿ ಮಾತನಾಡಿ, ನಾಲ್ವರ ಮೃತಪಟ್ಟಿರುವುದು ನಿಜ. ಆದರೆ, ಬಿಸಿಲಿನ ಕಾರಣಕ್ಕೆ ಮೃತಪಟ್ಟಿದ್ದಾರೆಯೇ ಎಂದು ಮರಣೋತ್ತರ ಪರೀಕ್ಷೆ ನಡೆಸಬೇಕಾಗುತ್ತದೆ. ಅದಕ್ಕೆ ಸಂಬಂಧಿಸಿದವರು ಒಪ್ಪುತ್ತಿಲ್ಲ. ವೈದ್ಯಕೀಯ ತಂಡ ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ ಎಂದರು.