ಸಿಂಧನೂರು: ಸಾಮಾಜಿಕ ಜಾಲತಾಣದಲ್ಲಿ ಸಮುದಾಯವನ್ನು ನಿಂದಿಸಲಾಗಿದೆ ಎಂದು ಆರೋಪಿಸಿ ವೀರಶೈವ-ಲಿಂಗಾಯತ ಸಮಾಜದ ಯುವಕರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ವೀರಶೈವ-ಲಿಂಗಾಯತ ಸಮುದಾಯದ ಯುವಕರು ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಏಕಾಏಕಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಅವರನ್ನು ಸಮಾಧಾನಪಡಿಸಿ, ಪೊಲೀಸ್ ಠಾಣೆಗೆ ಕರೆತರಲಾಯಿತು.
ಬಾದರ್ಲಿ ಜಿ.ಪಂ.ಸದಸ್ಯ ಬಾಬುಗೌಡ ಬಾದರ್ಲಿ, ಜೆಡಿಎಸ್ ಯುವ ಮುಖಂಡ ಅಭಿಷೇಕ್ ನಾಡಗೌಡ ಸೇರಿದಂತೆ ಇತರರ ಸಮ್ಮುಖದಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಯಿತು.
ಎಫ್‍ಐಆರ್ ದಾಖಲಿಸಿದ ಪೊಲೀಸರು
ಪ್ರತಿಭಟನೆ ನಿರತರು ಒಂದು ಸಮುದಾಯವನ್ನು ನಿಂದನೆ ಮಾಡಿದ ವ್ಯಕ್ತಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ, ಧರಣಿ ಕುಳಿತರು. ಆರೋಪಿಯ ವಿವರವನ್ನು ನೀಡಿದಾಗಲೂ ಆತನನ್ನು ಪತ್ತೆ ಹಚ್ಚಲು ಹಿಂದೇಟು ಹಾಕಲಾಗುತ್ತಿದೆ ಎಂದು ಆರೋಪಿಸಿ ರಾತ್ರಿಯೂ ಪ್ರತಿಭಟನೆ ಮುಂದುವರಿಯಿತು. ಬಳಿಕ ವೀರಶೈವ ಸಮಾಜದ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಬಸವರಾಜ ನಾಡಗೌಡ, ಬಾಬುಗೌಡ ಬಾದರ್ಲಿ, ಶರಣಗೌಡ ಗದ್ರಟಗಿ, ಮಲ್ಲಿಕಾರ್ಜುನ ಜೀನೂರು, ಶಿವು ಗುಂಜಳ್ಳಿ, ಸಂಜಯ್ ಪಾಟೀಲ್, ಸಿದ್ರಾಮೇಶ ಮನ್ನಾಪುರ ಸೇರಿದಂತೆ ಅನೇಕ ಮುಖಂಡರೊಂದಿಗೆ ಮಾತುಕತೆ ನಡೆಸಿದ ಪೊಲೀಸರು, ಎಫ್‍ಐಆರ್ ದಾಖಲಿಸುವುದಾಗಿ ಸ್ಪಷ್ಟಪಡಿಸಿದರು.
ಎಫ್‍ಐಆರ್ ಪ್ರತಿ ಬೇಕು ಎಂದು ಪ್ರತಿಭಟನೆ ನಿರತರು ಪಟ್ಟು ಹಿಡಿದಿದ್ದರಿಂದ ಅವರ ಕೈಗೆ ದೂರು ದಾಖಲಿಸಿಕೊಂಡ ಪ್ರತಿ ನೀಡಿ, ಕಳುಹಿಸಲಾಯಿತು. ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ಉಮೇಶ್ ಕಾಂಬ್ಳೆ, ಪಿಎಸ್‍ಐ ಸೌಮ್ಯ.ಎಂ.ಅವರು ಪ್ರತಿಭಟನಾ ನಿರತರನ್ನು ನಿಯಂತ್ರಿಸಿದರು.