Advertisement

ಸಿಂಧನೂರು-ಸಿರವಾರ ಬಂದ್‌ ಯಶಸ್ವಿ

03:18 PM Aug 20, 2017 | Team Udayavani |

ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಡುವಂತೆ ಆಗ್ರಹಿಸಿ ಗಂಜ್‌ ವರ್ತಕರ ಸಂಘ ಹಾಗೂ ವಿವಿಧ
ವ್ಯಾಪಾರಿಗಳ ಸಂಘಗಳ ಒಕ್ಕೂಟದಿಂದ ಶನಿವಾರ ಕರೆ ನೀಡಿದ್ದ “ಸಿಂಧನೂರು ಬಂದ್‌’ ಶಾಂತಿಯುತ ಯಶಸ್ವಿಯಾಗಿದೆ. ಶನಿವಾರ ಬೆಳಗ್ಗೆಯಿಂದಲೇ ನಗರದ ಪ್ರಮುಖ ವ್ಯಾಪಾರಿ ಕೇಂದ್ರ ಗಂಜ್‌ ಸೇರಿದಂತೆ ಕುಷ್ಟಗಿ, ರಾಯಚೂರು, ಗಂಗಾವತಿ ಮುಖ್ಯರಸ್ತೆಗಳಲ್ಲಿನ ಅಂಗಡಿ-ಮುಂಗಟ್ಟುಗಳನ್ನು ಸಂಪೂರ್ಣ ಮುಚ್ಚಲಾಗಿತ್ತು. ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಡಿಪೋದಿಂದ ಬಸ್‌ಗಳನ್ನು ಹೊರಗೆ ಬಿಡದ ಕಾರಣ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿತ್ತು. ಮಾಹಿತಿ ಗೊತ್ತಿಲ್ಲದೆ ನಗರಕ್ಕೆ ಬಂದಿದ್ದ ಪ್ರಯಾಣಿಕರು ಕುಡಿಯುವ ನೀರಿಗೂ ಪರದಾಡಬೇಕಾಯಿತು. ಆದರೆ ಖಾಸಗಿ ಕ್ರೂಷರ್‌, ಇಂಡಿಕಾ, ಆಟೋ ಹಾಗೂ ಟಂಟಂ ವಾಹನಗಳು ಬಸ್‌ ನಿಲ್ದಾಣದ ಬಳಿ ನಿಂತು ಪ್ರಯಾಣಿಕರಿಗೆ ನೆರವಾದವು. ಶಾಲಾ-ಕಾಲೇಜುಗಳು ಆರಂಭವಾಗಿದ್ದರೂ ಸಹ ಬಸ್‌ಗಳಿಲ್ಲದ ಕಾರಣ ಗ್ರಾಮೀಣ
ಪ್ರದೇಶದ ವಿದ್ಯಾರ್ಥಿಗಳು ಹಾಜರಾಗಲಿಲ್ಲ. ಅಲ್ಲದೆ ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ಸಹ ಅಘೋಷಿತವಾಗಿ ಬಂದ್‌ ಆಗಿದ್ದರಿಂದ ಸಿಂಧನೂರು ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಬಳ್ಳಾರಿ ಹಾಗೂ ಗಂಗಾವತಿ ಕಡೆ ತೆರಳುವ ಬಸ್‌ ಮತ್ತು ವಾಹನಗಳಿಗೆ ನಗರದ ಹೊರವಲಯದಲ್ಲಿರುವ ಪಿಡಬ್ಲೂಡಿ ಕ್ಯಾಂಪ್‌ನಿಂದ ಮುಂದೆ ಬರುವ ಗೋಮರ್ಸಿ ಮಾಡಶಿರವಾರ ಅಲಬನೂರು ಮಾರ್ಗವಾಗಿ ಬೂದಿಹಾಳ ಶ್ರೀಪುರಂಜಂಕ್ಷನ್‌ ಮೂಲಕ ಕಳುಹಿಸಲಾಯಿತು.
ಪ್ರತಿಭಟನಾ ರ್ಯಾಲಿ: ಬಂದ್‌ ಹಿನ್ನೆಲೆಯಲ್ಲಿ ಗಂಜ್‌ ವರ್ತಕರ ಸಂಘ ಹಾಗೂ ವಿವಿಧ ವ್ಯಾಪಾರಿಗಳ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಸಾವಿರಾರು ಜನ ಎಪಿಎಂಸಿ ಗಣೇಶ ಗುಡಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿದರು. ಬಳಿಕ ಮಹಾತ್ಮಾ ಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಬಹಿರಂಗ ಸಭೆಯಲ್ಲಿ ಮಾತನಾಡಿದ ರಾಜ್ಯ ಕೃಷಿ ಬೆಲೆ ಆಯೋಗದ ಸದಸ್ಯ ಹನುಮನಗೌಡ ಬೆಳಗುರ್ಕಿ, ರಾಜ್ಯ ಸರ್ಕಾರ
ಕೊಪ್ಪಳ-ಬಳ್ಳಾರಿ ಮತ್ತು ರಾಯಚೂರು ಮೂರು ಜಿಲ್ಲೆಗಳ ನೀರಾವರಿ ಪ್ರದೇಶಕ್ಕೆ ಕೆರೆ ಭಾಗ್ಯ ಯೋಜನೆ ಜಾರಿ ತಂದರೆ ಕನಿಷ್ಠ 25 ಟಿಎಂಸಿ ಅಡಿ ನೀರು ಹೊಲದಲ್ಲೇ ಶೇಖರಣೆ ಮಾಡಬಹುದಾಗಿದೆ. ಸರ್ಕಾರಗಳು ರೈತರ ಹಿತಕಾಯುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಪ್ರಸಕ್ತ ವರ್ಷವೂ ಮಳೆ ಇಲ್ಲದೇ ಬರದ ಛಾಯೆ ಆವರಿಸಿದೆ. ಕೊಳವೆಬಾವಿಗಳಲ್ಲಿ ನೀರು ಬೀಳುತ್ತಿಲ್ಲ. ಅಂತರ್ಜಲ ಕುಸಿದು ಹೋಗಿದೆ. ಕಾಲುವೆ ವ್ಯಾಪ್ತಿಯ ರೈತರ ಸ್ಥಿತಿ ಚಿಂತಾಜನಕವಾಗಿದೆ. ಇಡೀ ರಾಜ್ಯಕ್ಕೆ ಅರ್ಧದಷ್ಟು ಅಕ್ಕಿಯನ್ನೂ ಪೂರೈಸುವ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಈ ಮೂರು ಜಿಲ್ಲೆಗಳಲ್ಲಿ ಬರ ಆವರಿಸಿದೆ. ಮೂರೂ ಜಿಲ್ಲೆಗಳ್ಲಲಿ ಸುಮಾರು 75 ಲಕ್ಷ ಎಕರೆ ನೀರಾವರಿ ಇದೆ. ರೈತರು ಪಂಪ್‌ ಸೆಟ್‌ನಿಂದ ನೀರಾವರಿ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ಪ್ರತಿ ಬೆಳೆಗೆ ಸಾವಿರ ಕೋಟಿ ರೂ. ಆದಾಯ ಇದೆ. ಇಷ್ಟೆಲ್ಲಾ ಇದ್ದರೂ ಕೂಡ ರೈತರ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ಯೋಜನೆ ರೂಪುಗೊಳ್ಳುತ್ತಿಲ್ಲ ಎಂದು ವಿಷಾದಿಸಿದರು. ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾತನಾಡಿ, ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಡುವಂತೆ ಕೋರಿದ ರೈತರಿಗೆ 36ನೇ ವಿತರಣಾ ಕಾಲುವೆ ಅಂದರೆ ಕಾರಟಗಿಯವರೆಗೆ ಮಾತ್ರ ನೀರು ಬಿಡುವುದಾಗಿ ಹೇಳಿರುವುದು ಸರಿಯಲ್ಲ. ಅಲ್ಲದೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ನೀರು ಬಿಡುವದಿಲ್ಲವೆಂದು ಹೇಳಿ ರೈತರನ್ನು ಗೊಂದಲಕ್ಕೀಡು ಮಾಡಿದ್ದಾರೆ. ಕಾರಟಗಿವರೆಗೆ ಮಾತ್ರ ನೀರು ಬಿಡುವುದಾಗಿ ಹೇಳಿದರೆ ಸಿಂಧನೂರು, ಮಾನ್ವಿ ಮತ್ತು ರಾಯಚೂರು ಜನತೆಯ ಪರಿಸ್ಥಿತಿ ಏನೆಂದು ಪ್ರಶ್ನಿಸಿದರು. ನೀರಿನ ವಿಚಾರವಾಗಿ ಸಚಿವರು ಮತ್ತು ಶಾಸಕರು ಗೊಂದಲಮಯ ಹೇಳಿಕೆ ನೀಡುತ್ತಾ ರೈತರ ದಾರಿ ತಪ್ಪಿಸುತ್ತಿದ್ದಾರೆ. ಸರ್ಕಾರ ಹಾಗೂ ಸಚಿವರ ಮಧ್ಯೆ ಸಮನ್ವಯತೆ ಇಲ್ಲ. ಹೀಗಾಗಿ 21ರಂದು ನಡೆಯುವ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಮೊದಲ ಬೆಳೆಗಾಗಿ ನೀರು ಕೊಡುವಂತೆ ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ಇದೇ ಪ್ರಥಮ ಬಾರಿಯಾಗಿದೆ. ನೀರು ಬಿಡುವ ವಿಷಯದಲ್ಲಿ ವಿನಾಕಾರಣ ಹೇಳಿಕೆಗಳನ್ನು ನೀಡಿ ರೈತರನ್ನು
ಗೊಂದಲಕ್ಕೀಡು ಮಾಡದೆ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕೆಂದು ಒತ್ತಾಯಿಸಿದರು. ಮಾಜಿ ಶಾಸಕ ವೆಂಕಟರಾವ್‌ ನಾಡಗೌಡ ಮಾತನಾಡಿದರು. ಬಸವಕೇಂದ್ರದ ತಾಲೂಕು ಗೌರವಾಧ್ಯಕ್ಷ ವೀರಭದ್ರಪ್ಪ ಕುರಕುಂದಿ, ಜಿಪಂ ಸದಸ್ಯರಾದ ಬಾಬುಗೌಡ ಬಾದರ್ಲಿ, ಎನ್‌. ಶಿವನಗೌಡ ಗೊರೇಬಾಳ, ಅಮರೇಗೌಡ ವಿರೂಪಾಪುರ, ಬಸವರಾಜ ಹಿರೇಗೌಡರ, ಬಿಜೆಪಿ ಮುಖಂಡರಾದ ಕೊಲ್ಲಾ ಶೇಷಗಿರಿರಾವ್‌, ರಾಜಶೇಖರ ಪಾಟೀಲ, ಆರ್‌.ಬಸನಗೌಡ ತುರ್ವಿಹಾಳ, ಮಧ್ವರಾಜ್‌ ಆಚಾರ್ಯ, ದೇವೇಂದ್ರಪ್ಪ ಯಾಪಲಪರ್ವಿ, ಅಶೋಕಗೌಡ ಗದ್ರಟಗಿ, ಕೆ.ಭೀಮಣ್ಣ ವಕೀಲರು, ತಾಪಂ ಸದಸ್ಯ ಉದಯಗೌಡ, ವರ್ತಕರ ಸಂಘದ ತಾಲೂಕು ಕಾರ್ಯದರ್ಶಿ ಪೂಜಪ್ಪ, ಗಂಜ್‌ ವರ್ತಕರ ಕಲ್ಯಾಣ ಸಂಘ, ಮಿಲ್‌ ಮಾಲೀಕರ ಸಂಘ, ನ್ಯಾಯವಾದಿಗಳ ಸಂಘ, ಜವಳಿ, ಕಿರಾಣಿ, ಗೊಬ್ಬರ, ಸ್ಟೇಷನರಿ, ಬೀದಿ ಬದಿ ವ್ಯಾಪಾರಿಗಳು, ಹಮಾಲರು, ಹೋಟೆಲ್‌ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂಡರು, ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next