ಸಿಂಧನೂರು: ಯುವ ಸಬಲೀಕರಣ ಕ್ರೀಡಾ ಇಲಾಖೆ ಕಾಟಾಚಾರಕ್ಕೆ ಕಾರ್ಯಕ್ರಮ ಆಯೋಜಿಸದೇ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಯುವ ಸಬಲೀಕರಣ, ತಾಲೂಕು ಪಂಚಾಯ್ತಿ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಗೋಸ್ವಾಮಿ ಸಮುದಾಯ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಯುವಜನ ಮೇಳ ಅಂದರೆ ಹಬ್ಬದ ವಾತರವರಣವೇ ಸೃಷ್ಟಿ ಆಗುತ್ತಿತ್ತು. ಆದರೆ ಇದೀಗ ಅಂತಹ ವಾತಾವಾರಣ ಕಾಣುತ್ತಿಲ್ಲ. ಕಾಟಾಚಾರಕ್ಕೆ ಯುವಜನ ಮೇಳ ನಡೆಸಲಾಗುತ್ತಿದೆ. ಇತ್ತೀಚೆಗೆ ತಾಲೂಕು ಮಟ್ಟದ ಯುವಜನ ಮೇಳ ಸ್ಥಗಿತಗೊಳಿಸಿ ನೇರವಾಗಿ ಜಿಲ್ಲಾಮಟ್ಟದ ಯುವಜನ ಮೇಳೆ ಆಯೋಜಿಸಿದ್ದಾರೆ. ಇದರಿಂದ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ಕಾರ್ಯಕ್ರಮ ಆಯೋಜಿಸುವುದು ಬೇಡ. ಯುವಜನ ಮೇಳ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಮೇಳವಾಗಬೇಕು. ಯುವಜನ ಮೇಳಕ್ಕೆ ಪುನಃ ಮೆರಗು ತರುವಂತೆ ಸಂಬಂಧಿಸಿದ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದ ಅವರು, ಯಾರೇ ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿ ಅಲ್ಲಿಯೂ ಉತ್ತಮ ಪ್ರತಿಭೆ ತೋರಿ ಯಶಸ್ಸು ಸಾಧಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದರು.
ತಾಪಂ ಅಧ್ಯಕ್ಷೆ ಲಕ್ಷ್ಮೀ ಗುರಿಕಾರ ಮಾತನಾಡಿ, ಯುವಜನ ಮೇಳ ನಮ್ಮ ಸಂಸ್ಕೃತಿ, ಸಂಪ್ರದಾಯ, ಕಲೆ ಹೊರಹಾಕಲು ವೇದಿಕೆ ಆಗಿದೆ ಎಂದರು. ಜಿಪಂ ಸದಸ್ಯ ಅಮರೇಗೌಡ ವಿರೂಪಾಪುರ ಮಾತನಾಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸರಕಾರ ಬಹಳಷ್ಟು ಅನುದಾನ ನೀಡುತ್ತದೆ. ಇದರ ಸದುಪಯೋಗ ಆದಾಗ ಸರ್ಕಾರದ ಯೋಜನೆ ಸಾರ್ಥಕ ಎಂದರು.
ಇಲಾಖೆ ಸಹಾಯಕ ನಿರ್ದೇಶಕ ರಾಜು ಪಾದಿಹಳ್ಳಿ, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶರಣಪ್ಪ, ಬಸವರಾಜ ಗಸ್ತಿ, ವೀರೇಶ ಯರದಿಹಾಳ, ಶರಣಪ್ಪ ಗೋನವಾರ, ಟಿ.ರಾಮಯ್ಯ, ಎಸ್ .ದೇವೇಂದ್ರಗೌಡ ಸೇರಿದಂತೆ ಇತರರು ಇದ್ದರು. ವಿವಿಧ ತಾಲೂಕುಗಳ ಸಂಘ-ಸಂಸ್ಥೆಗಳ ಯುವಕ, ಯುವತಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.