Advertisement

ಗ್ರಂಥಾಲಯ ನಿರ್ವಹಣೆಗೆ ಹಣ ಕೊರತೆ

01:20 PM Oct 27, 2019 | Naveen |

ಸಿಂಧನೂರು: ಕಲ್ಯಾಣ ಕರ್ನಾಟಕ ಭಾಗದ ದೊಡ್ಡ ತಾಲೂಕು ಎಂದೇ ಹೆಸರಾದ ಸಿಂಧನೂರು ನಗರ ಸೇರಿ ಗ್ರಾಮೀಣ ಗ್ರಂಥಾಲಯಗಳು ಸಮಸ್ಯೆಗಳ ಆಗರವಾಗಿವೆ. ಗ್ರಂಥಾಲಯಗಳಿಗೆ ಕಟ್ಟಡ ಕೊರತೆ, ಗ್ರಂಥಾಲಯಗಳಲ್ಲಿ ಪುಸ್ತಕ, ಪತ್ರಿಕೆ, ಓದುಗರಿಗೆ ಜಾಗೆ ಕೊರತೆ ಎದುರಾಗಿದೆ.

Advertisement

ಸಿಂಧನೂರು ನಗರದ ಪ್ರವಾಸಿ ಮಂದಿರದ ಬಳಿ ಹೊಸ ಗ್ರಂಥಾಲಯ ಮತ್ತು ಹಳೆ ಗ್ರಂಥಾಲಯ ಸೇರಿ ಎರಡಿವೆ. ಇನ್ನು ತಾಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ ತಲಾ ಒಂದೊಂದು ಗ್ರಂಥಾಲಯ ಸೇರಿ ಒಟ್ಟು ತಾಲೂಕಲ್ಲಿ 36 ಗ್ರಂಥಾಲಯಗಳಿವೆ.

ಕಟ್ಟಡ ನಿರ್ಮಾಣ ನನೆಗುದಿಗೆ: ನಗರದ ಹಳೆ ಗ್ರಂಥಾಲಯ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಗೆ 1 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಇದರಲ್ಲಿ 70 ಲಕ್ಷ ರೂ. ಗ್ರಂಥಾಲಯ ಕಟ್ಟಡಕ್ಕೆ, ಉಳಿದ 30 ಲಕ್ಷ ರೂ.ಗಳನ್ನು ಪೀಠೊಪಕರಣಕ್ಕೆ ಮೀಸಲಿಡಲಾಗಿದೆ. ಆದರೆ ಇದುವರೆಗೆ ಕಟ್ಟಡ ನಿರ್ಮಾಣವಾಗಿಲ್ಲ.

ಪುಸ್ತಕ ಕೊರತೆ: ಇನ್ನು ನಗರದ ಪ್ರವಾಸಿ ಮಂದಿರದ ಬಳಿಯ ಹೊಸ ಗ್ರಂಥಾಲಯವನ್ನು 2015ರಲ್ಲಿ ಉದ್ಘಾಟಿಸಲಾಗಿದೆ. ಆದರೆ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಪುಸ್ತಕಗಳ ಕೊರತೆ ಇದೆ. ಇನ್ನು ಗ್ರಾಮೀಣ ಭಾಗದ ಕಡೆ ನೋಡುವುದಾದರೆ ಶಾಸಕ ವೆಂಕಟರಾವ್‌ ನಾಡಗೌಡರ ಸ್ವಕ್ಷೇತ್ರವಾದ ಜವಳಗೇರಾ, ಪಗಡದಿನ್ನಿ, ಸಾಲಗುಂದಾ, ಗೊರೇಬಾಳ, ಜಾಲಿಹಾಳ, ದೇವರಗುಡಿ, ರೌಡಕುಂದಾ, ಬಸಾಪುರ ಇತರ ಗ್ರಾಪಂ ವ್ಯಾಪ್ತಿಗಳಲ್ಲಿ ಬರುವ ಗ್ರಂಥಾಲಯಗಳು ಬಹುತೇಕ ಕಡೆಗಳಲ್ಲಿ ಶಿಥಿಲಗೊಂಡಿವೆ. ಇಂತಹ ಗ್ರಂಥಾಲಯಗಳನ್ನು ಹೊಸ ಗ್ರಂಥಾಲಯವನ್ನಾಗಿಸಲು ಹಾಗೂ
ಎಲ್ಲ ಗ್ರಂಥಾಲಯಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್‌ ಸೌಲಭ್ಯ ಕಲ್ಪಿಸಬೇಕೆಂಬುದು ಓದುಗರ ಒತ್ತಾಸೆಯಾಗಿದೆ.

ನಗರದ ಹೊಸ ತಾಂತ್ರಿಕ ಗ್ರಂಥಾಲಯದಲ್ಲಿ 40 ಕುರ್ಚಿಗಳಿವೆ. ಆದರೆ ಜಾಗದ ಕೊರತೆಯಿಂದಾಗಿ ಓದುಗರು ಸಮಸ್ಯೆ ಎದುರಿಸುವಂತಾಗಿದೆ. ಸೊಳ್ಳೆಗಳ ಕಾಟ ಹೆಚ್ಚಿದೆ. ಗಾಳಿ ಆಡದ್ದರಿಂದ ಓದುಗರು ಸೆಕೆಯಲ್ಲಿಯೇ ಓದುವಂತಾಗಿದೆ. ನಗರದ 2 ಗ್ರಂಥಾಲಯಗಳಲ್ಲಿ
5 ಜನ ಸಿಬ್ಬಂದಿ ಇದ್ದಾರೆ. ಗ್ರಂಥ ಪಾಲಕರು, ಸಹಾಯಕ ಗ್ರಂಥಪಾಲಕರು, ಗ್ರಂಥಾಲಯ ಸಹಾಯಕ ಒಬ್ಬರು ಹಾಗೂ 2 ಜನ ಸ್ವಚ್ಛತಾ ಸಿಬ್ಬಂದಿ ಇದ್ದಾರೆ. ಸಿಬ್ಬಂದಿ ಸರಿಯಾಗಿ ಗ್ರಂಥಾಲಯಕ್ಕೆ ಬರದೇ ಬರೀ ಸ್ವತ್ಛತಾ ಸಿಬ್ಬಂದಿ ಮೇಲೆ ಬಿಟ್ಟಿರುವ ಆರೋಪಗಳು ಕೇಳಿ ಬರುತ್ತಿವೆ.

Advertisement

ಆರ್ಥಿಕ ಬಿಕ್ಕಟ್ಟು: ಗ್ರಂಥಾಲಯಗಳಲ್ಲಿ ಓದುಗರಿಗೆ ಸೌಲಭ್ಯ ಕಲ್ಪಿಸಲು, ನಿರ್ವಹಣೆಗೆ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ವಿದ್ಯುತ್‌ ಬಿಲ್‌ಗ‌ೂ ಪರದಾಡಬೇಕಿದೆ. ಸ್ಥಳೀಯ ನಗರಸಭೆಯಿಂದ ವರ್ಷಕ್ಕೆ 5 ಲಕ್ಷಕ್ಕೂ ಹೆಚ್ಚು ಸೆಸ್‌ ರೂಪದಲ್ಲಿ ಗ್ರಂಥಾಲಯಕ್ಕೆ ಅನುದಾನ ಬರಬೇಕಿದೆ. ಆದರೆ ನಗರಸಭೆ ಕಾಲಕಾಲಕ್ಕೆ ಇದನ್ನು ಗ್ರಂಥಾಲಯಕ್ಕೆ ನೀಡದ್ದರಿಂದ ಗ್ರಂಥಾಲಯ ನಿರ್ವಹಣೆಗೆ ಸಮಸ್ಯೆ ಆಗುತ್ತಿದೆ. ಕಳೆದ ಜೂನ್‌ ಅವಧಿಯಲ್ಲಿ ನಗರಸಭೆಯಿಂದ 2 ಲಕ್ಷ ರೂ. ಗ್ರಂಥಾಲಯ ಸೆಸ್‌ ಪಾವತಿಸಲಾಗಿದೆ. ಬಳಿಕ ಯಾವುದೇ ಹಣ ನೀಡಿಲ್ಲ. ಶಾಖಾ ಗ್ರಂಥಾಲಯಗಳ ನಿರ್ವಹಣೆಗೆ ಸರ್ಕಾರದಿಂದ ಯಾವುದೇ ಪ್ರತ್ಯೇಕ ಅನುದಾನವಿಲ್ಲ. ನಗರಸಭೆ ನೀಡುವ ಸೆಸ್‌ ಹಣದಲ್ಲೇ ಗ್ರಂಥಾಲಯ ನಿರ್ವಹಿಸಬೇಕಿದೆ.

ಜನಪ್ರತಿನಿಧಿಗಳಿಗೆ ಶಾಪ: ದೊಡ್ಡ ತಾಲೂಕು ಎಂದೇ ಹೆಸರಾಗಿರುವ ಸಿಂಧನೂರಲ್ಲಿರುವ ಎಲ್ಲ ಗ್ರಂಥಾಲಯಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಕ್ಷೇತ್ರದ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ. ನಗರ ಸೇರಿ ಗ್ರಾಮೀಣ ಗ್ರಂಥಾಲಯಗಳಲ್ಲಿ ಅಗತ್ಯ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಜತೆಗೆ ಸಾಹಿತ್ಯಿಕ ಗ್ರಂಥಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಗೆ ಪೂರಕವಾದ ಪುಸ್ತಕಗಳನ್ನು ಸಂಗ್ರಹಿಸಬೇಕು. ಗಾಳಿ, ಬೆಳಕು, ಜಾಗೆ ಕೊರತೆ ನೀಗಿಸಬೇಕು. ಸುಸಜ್ಜಿತ ಕಟ್ಟಡ ಒದಗಿಸಬೇಂಬುದು ಓದುಗರ ಒತ್ತಾಸೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next