ಸಿಂಧನೂರು: ಇಂದಿನ ಸ್ಪ ರ್ಧಾತ್ಮಕ ಯುಗದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ಉನ್ನತ ಹುದ್ದೆಗೆ ಆಯ್ಕೆಯಾಗುತ್ತಿರುವುದು ಶ್ಲಾಘನೀಯ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ನಗರದ ಸುಕಾಲಪೇಟೆಯ ಕನಕದಾಸ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಕುರಬರ ಸಮಾಜ, ಕನಕ ಯುವ ಸೇನೆ ಹಾಗೂ ಕೆ.ವಿರೂಪಾಕ್ಷಪ್ಪ ಜನಕಲ್ಯಾಣ ಪ್ರತಿಷ್ಠಾನದಿಂದ ಶನಿವಾರ ನಡೆದ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉನ್ನತ ಹುದ್ದೆಗೆ ಆಯ್ಕೆಯಾದ 8 ಜನ ಸಾಧಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಕಲ್ಯಾಣ ಕರ್ನಾಟಕ ಭಾಗವು ಹಿಂದುಳಿದ ಹಣೆಪಟ್ಟೆ ಹೊಂದಿತ್ತು. ಆದರೆ ಇದೀಗ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಹಾಗೂ 371 ಜೆ ಕಲಂ ಜಾರಿಯಿಂದಾಗಿ ರಾಜ್ಯದ ವಿವಿಧ ಇಲಾಖೆಗಳ ಉನ್ನತ ಹುದ್ದೆಗೆ ಈ ಭಾಗದ ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದು, ಇದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಹೆಚ್ಚು ಸಂಬಳ ಸಿಗುವ ಸರ್ಕಾರಿ ಹುದ್ದೆ ಬಯಸದೇ, ಜನಸಾಮಾನ್ಯರ ಸೇವೆಯ ಹಂಬಲದಿಂದ ಸರ್ಕಾರಿ ನೌಕರಿಗೆ ಸೇರಬೇಕು ಎಂದರು. ಕಳೆದ 6-7ವರ್ಷಗಳಿಂದ ಸಿಂಧನೂರು ತಾಲೂಕಿನ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿವಿಧ ಹುದ್ದೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಸಾಧನೆಯು ಸಿಂಧನೂರು ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದಂತಾಗಿದೆ ಎಂದರು. ಕಾಲೇಜಿನ ಆಡಳಿತಾಧಿಕಾರಿ ಮಾತನಾಡಿದರು.
ಸನ್ಮಾನ: ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಿ ವಿವಿಧ ಉನ್ನತ ಹುದ್ದೆಗೆ ಆಯ್ಕೆಯಾದ ಲಕ್ಷ್ಮೀದೇವಿ, ಮಾಳಿಂಗರಾಯ, ಗ್ಯಾನಪ್ಪ, ಬಿರೇಂದ್ರ, ಸತೀಶ, ನರಸಪ್ಪ ಅವರನ್ನು ಗೌರವಿಸಲಾಯಿತು. ಹಾಲುಮತ ಸಮಾಜ ತಾಲೂಕು ಅಧ್ಯಕ್ಷ ಪೂಜಪ್ಪ ಪೂಜಾರಿ, ತಾಪಂ ಮಾಜಿ ಸಂಸದ ವೆಂಕೋಬ ಸಾಸಲಮರಿ, ಕನಕ ಯುವ ಸೇನೆ ಅಧ್ಯಕ್ಷ ನಾಗರಾಜ ಬಾದರ್ಲಿ, ನಗರಸಭೆ ಸದಸ್ಯ ಶೇಖರಪ್ಪ, ತಿಮ್ಮಯ್ಯ ಭಂಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.