ಸಿಂದಗಿ: ದೇಶದ ಅಭಿವೃದ್ಧಿಯಾಗಬೇಕಾದರೆ ಮಾನವ ಸಂಪತ್ತು ಅತ್ಯವಶ್ಯಕ ಎಂದು ಸ್ಥಳೀಯ ಸಿ.ಎಂ. ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರೊ| ಬಿ.ಎ. ಪಾಟೀಲ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಸಭಾಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ತಾಲೂಕು ಶಾಖೆ ಮತ್ತು ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವ ಸಂಪತ್ತು ಕ್ರಿಯಾಶೀಲವಾಗಿದ್ದರೆ ದೇಶದ ಅಭಿವೃದ್ಧಿಗೆ ಪೂರಕ. ಇಲ್ಲದಿದ್ದಲ್ಲಿ ಅಭಿವೃದ್ಧಿ ಶೂನ್ಯವಾಗುತ್ತದೆ. ಹೀಗಿದ್ದರೂ ನಾವು ಜನಸಂಖ್ಯೆ ನಿಯಂತ್ರಣ ಮಾಡಬೇಕು. ಜನಸಂಖ್ಯೆ ನಿಯಂತ್ರಣಕ್ಕೆ ಬ್ರಹ್ಮಚಾರ್ಯ ಪಾಲನೆ, ವಿಳಂಬ ವಿವಾಹ ಪದ್ಧತಿ, ಸ್ವಯಂ ನಿಯಂತ್ರಣ ಪದ್ಧತಿ, ಸಂತಾನ ಹರಣ ಶಸ್ತ್ರಚಿಕಿತ್ಸೆ ಅನುಸರಿಸುವುದು ಅತ್ಯವಶ್ಯಕ ಎಂದು ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ತಾಲೂಕು ಶಾಖೆ ಚೇರಮನ್ ಬಿ.ಎನ್. ಪಾಟೀಲ ಇಬ್ರಾಹಿಂಪುರ ಮಾತನಾಡಿ, ಭೂಮಿ ಇದಷ್ಟೆ ಇರುತ್ತದೆ. ಆದರೆ ಜನಸಂಖ್ಯೆ ಮಾತ್ರ ಹೆಚ್ಚಾಗುತ್ತಾ ನಡೆದಿದೆ. ಇದೇ ಮುಂದುವರಿದರೆ ಮುಂದಿನ ಜನಾಂಗ ತೊಂದರೆ ಅನುಭವಿಸಬೇಕಾಗುತ್ತದೆ. ಈ ಭೂಮಿಯ ಮೇಲೆ ಬಿಲಿಯನ್ ಜನಸಂಖ್ಯೆ ಬದುಕಬಹುದು ಎಂದರು.
ಅಧ್ಯಕ್ಷತೆ ವಹಿಸಿದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯ ಜಿ.ಎಸ್. ಮೋರಟಗಿ ಮಾತನಾಡಿ, ದೇಶದ ಜನಸಂಖ್ಯೆಯನ್ನು ನೈಸರ್ಗಿಕ ಸಂಪನ್ಮೂಲಗಳಿಗೆ ಹೊಂದಾಣಿಕೆ ಆಗುವ ಹಾಗೆ ಇರಬೇಕು ಎಂದರು. ಪ್ರೊ| ಡಿ.ಆರ್. ಮಠಪತಿ ಮಾತನಾಡಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ತಾಲೂಕು ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯ ರಮೇಶ ಪೂಜಾರ, ಕಾರ್ಯದರ್ಶಿ ರಮೇಶ ಯಂಕಂಚಿಕರ ಇದ್ದರು. ಎಸ್.ಎಂ.ಕುಂಬಾರ ನಿರೂಪಿಸಿದರು. ಪ್ರೊ| ಎಸ್.ಎಸ್. ಸುರಪೂರ ವಂದಿಸಿದರು.