Advertisement

ಸಮಾನಾಂತರ ಜಲಾಶಯಕ್ಕೆ ಇದೇ ವರ್ಷ ಅಡಿಗಲ್ಲಿಗೆ ಯತ್ನ

01:12 PM Jun 23, 2019 | Naveen |

ಸಿಂಧನೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಜೂ.26ರಂದು ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸುತ್ತಿದ್ದು, ಆಗ ಅವರಿಂದಲೇ ನವಲಿ ಬಳಿಯ ಸಮಾನಾಂತರ ಜಲಾಶಯ ನಿರ್ಮಾಣ ಕುರಿತು ಘೋಷಣೆ ಮಾಡಿಸಿ ಇದೇ ವರ್ಷ ಡಿಪಿಆರ್‌ ತಯಾರಿಸಿ, ಹಣಕಾಸು ಇಲಾಖೆಯಿಂದ ಅನುಮತಿ ಪಡೆದು ಅಡಿಗಲ್ಲು ಹಾಕಿಸುವ ಕೆಲಸ ಮಾಡಿಸುತ್ತೇನೆ ಜಂದು ಮೀನುಗಾರಿಕೆ ಮತ್ತು ಪಶು ಸಂಗೋಪನೆ ಖಾತೆ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

Advertisement

ನಗರದ ತಮ್ಮ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇನ್ನು ನವಲಿ ಬಳಿ ಸಮಾನಾಂತರ ಜಲಾಶಯ ಹಾಗೂ ಪ್ಲಡ್‌ ಫ್ಲೋ ಕೆನಾಲ್ ಕುರಿತು ಸಿದ್ದರಾಮಯ್ಯ ಸರ್ಕಾರದಲ್ಲಿ ಡಿಪಿಆರ್‌ ಆಗಿದೆ ಎಂದು ಬಾದರ್ಲಿ ಹೇಳುತ್ತಿದ್ದಾರೆ. ಅದರಲ್ಲಿ ಫ್ಲಡ್‌ ಫ್ಲೋ ಕೆನಾಲ್ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಈ ಮೈತ್ರಿ ಸರ್ಕಾರದಲ್ಲಿ ನಿರಂತರ ನೀರು ಕೊಡುವ ದೃಷ್ಟಿಯಿಂದ ಹೊಸ ಡಿಪಿಆರ್‌ ತಯಾರಿಸಲು ಬೆಂಗಳೂರಿನಲ್ಲಿ ಈಚೆಗೆ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯನ್ನು ಮುಖ್ಯಮಂತ್ರಿಗಳ ಸೂಚನೆಯಂತೆ ಕರೆದಿದ್ದೆ. ಅಲ್ಲಿಯಾದರೂ ಹಳೆ ಡಿಪಿಆರ್‌ ತಯಾರಿಸುವ ಬಗ್ಗೆ ಅವರ ಪಕ್ಷದ ಅನುಭವಿ ಶಾಸಕರೇ ಹೇಳಲಿಲ್ಲ. ಕೇವಲ ನೀರಿನ ವಿಷಯ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಅವರ ಘನತೆಗೆ ಶೋಭೆಯಲ್ಲ. ಐದು ವರ್ಷಗಳ ಕಾಲ ಅವರದೇ ಕಾಂಗ್ರೆಸ್‌ ಸರ್ಕಾರವಿತ್ತು. ಜಲಸಂಪನ್ಮೂಲ ಸಚಿವರು ಅವರ ಒಡನಾಡಿಗಳಾಗಿದ್ದರು. ಆಗಲಾದರೂ ಅನುಭವಿ ಶಾಸಕ ಬಾದರ್ಲಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ, ಬಚಾವತ್‌ ವರದಿ ಜಾರಿ ಹಾಗೂ ತಿದ್ದುಪಡಿಗೆ ಪ್ರಯತ್ನಿಸಬಾರದಿತ್ತೆ ಎಂದು ವ್ಯಂಗ್ಯವಾಡಿದರು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರು ಪದೇಪದೆ ನೀರಿನ ವಿಚಾರವಾಗಿ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಜಲಾಶಯದಲ್ಲಿ ನೀರಿದ್ದರೂ ಎರಡನೇ ಬೆಳೆಗೆ ನೀರು ಕೊಡದೆ ಸುಳ್ಳು ಅಂಕಿ-ಅಂಶಗಳನ್ನು ರೈತರಿಗೆ ಹೇಳಿ ಅವರೇ ದಾರಿ ತಪ್ಪಿಸಿದ್ದರು. ಈಗಲೂ ಅದೇ ಕೆಲಸ ಹಂಪನಗೌಡರು ಮುಂದುವರಿಸಿದ್ದಾರೆ. ಇದು ಸರಿಯಲ್ಲ ಎಂದರು.

ಜನರಿಗೆ ಕುಡಿಯಲು ಹಾಗೂ ರೈತರಿಗೆ ಬೆಳೆ ಬೆಳೆಯಲು ನೀರು ಬೇಕಷ್ಟೆ. ಅದನ್ನು ಬಿಟ್ಟು ನೀರಾವರಿ ತಜ್ಞರಂತೆ ಬಚಾವತ್‌ ವರದಿ ಜಾರಿ, ತಿದ್ದುಪಡಿ ಕುರಿತು ಹೇಳಿಕೆ ನೀಡುವುದು ಸರಿಯಲ್ಲ. ಬಚಾವತ್‌ ವರದಿ ತಿದ್ದುಪಡಿ ಮಾಡಲು ಸಂವಿಧಾನದಲ್ಲಿ ಅವಕಾಶಗಳಿವೆಯೇ ಎಂಬ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು ಎಂದರು.

ಗೊರೇಬಾಳ ಪಿಕಪ್‌ ಡ್ಯಾಂ ಕುರಿತು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹಾಗೂ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಸರಣಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇನ್ನೂ ಪಿಕಪ್‌ನ ಮಣ್ಣು ತೋಡುವ ಮತ್ತು ಸಮತಟ್ಟು ಮಾಡುವ ಕೆಲಸ ನಡೆದಿದೆ. ಇಲಾಖೆಯ ಮುಖ್ಯ ಎಂಜಿನಿಯರ್‌ ಮಂಜಪ್ಪ ಬಂದು ಪರಿಶೀಲನೆ ಮಾಡಿದ್ದಾರೆ. ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾಮಗಾರಿಯೇ ನಡೆದಿಲ್ಲ. ಆದರೂ ಕಳಪೆ ಕಾಮಗಾರಿ ನಡೆದಿದೆ ಎಂದು ಆರೋಪ ಮಾಡುವುದು ಸರಿಯಲ್ಲ ಎಂದರು.

Advertisement

ನೌಕರರ ಸಂಘದ ಚುನಾವಣೆಯಲ್ಲಿ ಸಚಿವರ ಸಹೋದರ ನೌಕರರನ್ನು ಬೆದರಿಸಿ ರಾಜೇಂದ್ರಕುಮಾರ ಪರವಾಗಿ ಮತ ಕೇಳುತ್ತಿದ್ದಾರೆ ಎಂಬುದು ಸುಳ್ಳು. ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜಕೀಯ ಮುಖಂಡರು ನೌಕರರಿಗೆ ಮನವಿ ಮಾಡಿಕೊಳ್ಳುವುದು ಸ್ವಾಭಾವಿಕ. ಗೋಮರ್ಸಿಯಲ್ಲಿ ನಡೆದ ಗಲಾಟೆಗೂ ತಮಗೂ ಯಾವುದೇ ಸಂಬಂಧವಿಲ್ಲ. ಇಸ್ಪೀಟ್, ಓಸಿ ಆಡಿಸುವವರೇ ಇಸ್ಪೀಟ್, ಓಸಿ ಆಟಗಳು ನಡೆಯುತ್ತಿವೆ ಎಂದು ಆರೋಪಿಸಿರುವುದು ಹಾಸ್ಯಾಸ್ಪದ ಎಂದರು.

ನಯೋಪ್ರಾ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಉಪಾಧ್ಯಕ್ಷ ಲಿಂಗರಾಜ ಹೂಗಾರ, ನಗರಸಭೆ ಸದಸ್ಯರಾದ ಚಂದ್ರು ಮೈಲಾರ, ಕೆ.ಜಿಲಾನಿಪಾಷಾ, ವೀರೇಶ ಹಟ್ಟಿ, ಜೆಡಿಎಸ್‌ ಮುಖಂಡರಾದ ಚಂದ್ರಭೂಪಾಲ ನಾಡಗೌಡ, ಸತ್ಯನಾರಾಯಣ, ಅಶೋಕ ಉಮಲೂಟಿ, ವೆಂಕೋಬ ಕಲ್ಲೂರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next