Advertisement

ಸಚಿವ-ಶಾಸಕರ ಕಚೇರಿ ಬಳಿಯೇ ಕಸದ ರಾಶಿ

04:15 PM May 30, 2019 | Team Udayavani |

ಸಿಂಧನೂರು: ಪಟ್ಟಣದ ಪ್ರಮುಖ ರಸ್ತೆ, ಬಡಾವಣೆಗಳಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ, ತಗ್ಗುಗಳಲ್ಲಿ ನಿಂತ ಕೊಳಚೆ ನೀರು, ಪಾದಚಾರಿಗಳು, ವಾಹನ ಸವಾರರಿಗೆ ಧೂಳಿನ ಮಜ್ಜನ ಇದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರ ಸಿಂಧನೂರು ನಗರದಲ್ಲಿನ ಸ್ಥಿತಿ.

Advertisement

ವಿಪರ್ಯಾಸವೆಂದರೆ ಸಚಿವ ವೆಂಕಟರಾವ್‌ ನಾಡಗೌಡ, ಮೈಬೂಬ ಕಾಲೋನಿಯಲ್ಲಿರುವ ಮಸ್ಕಿ ಶಾಸಕ ಪ್ರತಾಪಗೌಡರ ನಗರದ ಕಾರ್ಯಾಲಯದ ಬಳಿಯೇ ಕಸದ ರಾಶಿ ಬಿದ್ದಿದೆ. ದುರ್ವಾಸನೆ ಹರಡಿದೆ. ಇನ್ನು ನಗರದ ಉಳಿದೆಡೆಯ ಸ್ಥಿತಿಯಂತೂ ಹೇಳುವುದೇ ಬೇಡ. ಆದರೂ ಸಚಿವರು, ಶಾಸಕರು ಮೌನ ವಹಿಸಿದ್ದಾರೆ. ಸ್ವಚ್ಛತೆಗೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ನಗರಸಭೆಗೆ ಆದೇಶಿಸುತ್ತಿಲ್ಲ. ಹೀಗಾಗಿ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಗಾಢನಿದ್ರೆಗೆ ಜಾರಿದ್ದಾರೆ.

ದೇಶಾದ್ಯಂತ ಸ್ವಚ್ಛ ಭಾರತ..ಸ್ವಸ್ಥ ಭಾರತ ಅಭಿಯಾನ ನಡೆಯುತ್ತಿದೆ. ನಗರದಲ್ಲಿನ ಸ್ಥಿತಿ ನೋಡಿದರೆ ಸ್ವಚ್ಛ ಭಾರತ ಅಭಿಯಾನಕ್ಕೂ ಸಿಂಧನೂರು ನಗರಸಭೆ ಅಧಿಕಾರಿಗಳಿಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಕಂಡುಬರುತ್ತಿದೆ. ಸ್ವಚ್ಛ ಭಾರತ ಅಭಿಯಾನದ ವೇಳೆ ಕಸಬರಿಗೆ ಹಿಡಿದು ಫೋಟೋಕ್ಕೆ ಫೋಜು ನೀಡುವ ಜನಪ್ರತಿನಿಧಿಗಳು, ಅಧಿಕಾರಿಗಳು, ನೈಜವಾಗಿ ಸ್ವಚ್ಛತೆಗೆ ಕ್ರಮ ವಹಿಸುತ್ತಿಲ್ಲ. ಸ್ವಚ್ಛ ಭಾರತ ಈಗ ಜನಪ್ರತಿನಿಧಿಗಳ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ದುರ್ವಾಸನೆ: ಸಚಿವ ವೆಂಕಟರಾವ್‌ ನಾಡಗೌಡ ಮತ್ತು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲರ ಕಾರ್ಯಾಲಯದ ಬಳಿ ಕಸದ ರಾಶಿ ತುಂಬಿದೆ. ಮಳೆಬಂದರೆ ಕಸ ಕೊಳೆತು ದುರ್ವಾಸನೆ ಹರಡುತ್ತದೆ. ಈ ಕಸದ ರಾಶಿಯಲ್ಲಿ ಹಂದಿ, ನಾಯಿ ಹೊರಳಾಡಿ ಕಸ ರಸ್ತೆಗೆ ಹರಡುತ್ತಿದೆ. ಸಚಿವರು, ಶಾಸಕರ ಕಾರ್ಯಾಲಯಕ್ಕೆ ವಿವಿಧ ಕೆಲಸಕ್ಕೆ ಬರುವ ಜನತೆ ಮೂಗು ಮುಚ್ಚಿಕೊಂಡೇ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಧೂಳಿನ ಮಜ್ಜನ: ನಗರದಲ್ಲಿ ರಸ್ತೆ, ಒಳಚರಂಡಿ ನಿರ್ಮಾಣ ಕಾಮಗಾರಿ ನಡೆದಿದೆ. ಆಮೆಗತಿಯ ಕಾಮಗಾರಿಯಿಂದಾಗಿ ಜನತೆಗೆ ಧೂಳಿನಿಂದ ಮುಕ್ತಿ ಸಿಗುತ್ತಿಲ್ಲ. ಕುಷ್ಟಗಿ ರಸ್ತೆ ಕಡೆ ಬಸ್‌ನಲ್ಲೇ ಸಂಚರಿಸಲು ಪ್ರಯಾಣಿಕರು ಹಿಂದೇಟು ಹಾಕುವಂತಾಗಿದೆ.

Advertisement

ವಿಲೇವಾರಿ ಆಗದ ಕಸ: ನಗರದ ಪ್ರಮುಖ ರಸ್ತೆ, ಬಡಾವಣೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ನಗರಸಭೆ ಸಿಬ್ಬಂದಿ ನಿಯಮಿತವಾಗಿ ವಿಲೇವಾರಿ ಮಾಡುತ್ತಿಲ್ಲ. ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಜನತೆ ಮೌಖೀಕವಾಗಿ ಮತ್ತು ಲಿಖೀತವಾಗಿ ನಗರಸಭೆಗೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಶಾಸಕರು, ಸಚಿವರ ಕಚೇರಿ ಬಳಿಯೇ ಕಸದ ರಾಶಿ ಇರುವಾಗ ಇನ್ನು ನಮ್ಮ ಪಾಡೇನು ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಜನರ ಮೇಲೆ ಗೂಬೆ: ನಗರದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ನಗರಸಭೆ ಪೌರಾಯುಕ್ತರು ಜನರ ಮೇಲೆಯೇ ಗೂಬೆ ಕೂರಿಸುತ್ತಿದ್ದಾರೆ. ಜನರಲ್ಲಿ ಸ್ವಚ್ಛತೆ ಅರಿವು ಮೂಡುತ್ತಿಲ್ಲ. ನಗರಸಭೆ ಎಷ್ಟಂತ ಕೆಲಸ ಮಾಡಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸವಾಗಿದೆ.

ಈಗಲಾದರೂ ನಗರಸಭೆ ಅಧಿಕಾರಿಗಳು ನಗರದಲ್ಲಿ ಸ್ವಚ್ಛತೆಗೆ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಿಂಧನೂರು ನಗರದಲ್ಲಿ ಅನೇಕ ಬಾರಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿದರೂ ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಮೂಡುತ್ತಿಲ್ಲ. ನಗರಸಭೆ ಎಷ್ಟು ಅಂತ ಕೆಲಸ ಮಾಡಬೇಕು. ಜನತೆ ಕಸವನ್ನು ರಸ್ತೆಗೆ ಎಸೆಯದೇ ತ್ಯಾಜ್ಯ ಸಂಗ್ರಹ ಡಬ್ಬಿಗಳಲ್ಲಿ ಹಾಕಬೇಕು. ಇದರ ಬಗ್ಗೆ ಈಗಾಗಲೇ ಎರಡು ತಂಡ ರಚಿಸಿ ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಕಸದ ರಾಶಿ ಎಲ್ಲೇ ಇರಲಿ ಸ್ವಚ್ಛಗೊಳಿಸುವ ಜವಾಬ್ದಾರಿ ನಮ್ಮದು.
•ವಿರೂಪಾಕ್ಷ ಮೂರ್ತಿ,
ಸಿಂಧನೂರು ನಗರಸಭೆ ಪೌರಾಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next