ಸಿಂಧನೂರು: ನಗರದ ಹಿರೇಲಿಂಗೇಶ್ವರ ಕಾಲೋನಿಯಲ್ಲಿ ವಾಸಿಸುವ ನೂರಾರು ಅಲೆಮಾರಿ ಕುಟುಂಬಗಳ ಜನರ ಉಪ ಕಸುಬಿಗೂ ಕೊರೊನಾ ಸೋಂಕು ಕತ್ತರಿ ಹಾಕಿದೆ. ಹಿರೇಲಿಂಗೇಶ್ವರ ಕಾಲೋನಿಯಲ್ಲಿ ಸಿಂಧೋಳಿ, ಬುಡ್ಗ ಜಂಗಮ, ಸುಡುಗಾಡು ಸಿದ್ಧರ ನೂರಾರು ಕುಟುಂಬಗಳು ಕಳೆದ 30 ವರ್ಷಗಳಿಂದ ತಮ್ಮ ಕುಲಕಸುಬು ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಜೀವನವೇ ದುಸ್ತರವಾಗಿದೆ.
ಈ ಅಲೆಮಾರಿ ಕುಟುಂಬಗಳು ತಮ್ಮ ಕುಲ ಕಸುಬಾದ ದುರ್ಗಮ್ಮ, ಮರಗಮ್ಮಳನ್ನು ಆಡಿಸುತ್ತಾ ಮೈಮೇಲೆ ಬಾರುಕೋಲಿನಿಂದ ಬಡಿದುಕೊಳ್ಳುತ್ತಾ, ಬೀದಿಯಲ್ಲಿ ಭಿಕ್ಷೆ ಬೇಡಿ, ದಿನ ನಿತ್ಯ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಾ ತಮ್ಮ ಜೀವನ ಸಾಗಿಸುತ್ತಿದ್ದರು. ಸ್ವಂತ ಮನೆಯಿಲ್ಲದೇ ಖಾಲಿ ಜಾಗೆಯಲ್ಲಿ ಬಟ್ಟೆಯ ಗುಡಿಸಲು ಹಾಕಿಕೊಂಡು ವಾಸಿಸುವ ಇವರಿಗೀಗ ಊಟಕ್ಕೂ ಗತಿ ಇಲ್ಲದಂತಾಗಿದೆ.
ಶಾಸಕ ವೆಂಕಟರಾವ್ ನಾಡಗೌಡ, ತಾಲೂಕು ಆಡಳಿತ, ನಗರಸಭೆ ಅಧಿಕಾರಿಗಳಿಗೆ ಅಲೆಮಾರಿಗಳಿಗೆ ಆಹಾರ ಹಾಗೂ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವಂತೆ ಅನೇಕ ಸಂಘಟನೆಗಳು ಒತ್ತಾಯಿಸಿವೆ. ಆದರೆ ಇನ್ನೂವರೆಗೂ ಯಾರೂ ನೆರವಿಗೆ ಬಂದಿಲ್ಲ.
ಲಾಕ್ ಡೌನ್‌ನಿಂದಾಗಿ ಅಲೆಮಾರಿ ಕುಟುಂಬದವರು ಜೀವನ ನಡೆಸುವುದೇ ದುಸ್ತರವಾಗಿದೆ. ಈ ಜನರಿಗೆ ಆಹಾರ ಹಾಗೂ ಕುಡಿಯಲು ನೀರು ಒದಗಿಸುವಂತೆ ಶಾಸಕರಿಗೆ, ತಾಲೂಕು ಆಡಳಿತಕ್ಕೆ ಹಾಗೂ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಎಂ.ಗಂಗಾಧರ, ಸಿಪಿಐಎಂಎಲ್
ರಾಜ್ಯ ಸಮಿತಿ ಸದಸ್ಯ