Advertisement

ಜಿಲ್ಲಾ ವೈದ್ಯಾಧಿಕಾರಿಗಳಿಗೆ ಜನ ತರಾಟೆ

11:51 AM Jul 24, 2019 | Team Udayavani |

ಸಿಂಧನೂರು: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೌಲಭ್ಯ ಕೊರತೆ, ಸಮರ್ಪಕ ಚಿಕಿತ್ಸೆ ದೊರೆಯದಿರುವ ಬಗ್ಗೆ ಸಾರ್ವಜನಿಕರು ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾ ವೈದ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ನಡೆಯಿತು.

Advertisement

ಜಿಲ್ಲಾ ವೈದ್ಯಾಧಿಕಾರಿ ಡಾ| ಎಂ.ಕೆ.ಎಸ್‌. ನಸೀರ್‌, ಮಲೇರಿಯಾ ಜಿಲ್ಲಾ ವೈದ್ಯಾಧಿಕಾರಿ ಗಣೇಶ ಮಂಗಳವಾರ ನಗರದ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಸಾರ್ವಜನಿಕರು, ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.

ದಾವಲಪಾಷಾ ಮಾತನಾಡಿ, ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ಚಿಕಿತ್ಸೆಗೆ ಸರಿಯಾದ ಸೌಲಭ್ಯವಿಲ್ಲ. ಒಳಗಡೆ ಬಂದರೆ ಉಸಿರುಗಟ್ಟುವ ವಾತಾವರಣ ಇದೆ. ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರೇ ಇಲ್ಲಿದ್ದಾರೆ. ಸಕಾಲದಲ್ಲಿ ವೈದ್ಯರು ಬಾರದ್ದರಿಂದ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂದು ದೂರಿದರು.

ಜಿಪಂ ಸದಸ್ಯ ಬಾಬುಗೌಡ ಬಾದರ್ಲಿ ಮಾತನಾಡಿ, ತಾಲೂಕಿನ ನೂರಾರು ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಜನರೇಟರ್‌ ವ್ಯವಸ್ಥೆ ಇಲ್ಲ, ಸ್ವಚ್ಛತೆ ಮಾಯವಾಗಿದೆ. ಇಲ್ಲಿಗೆ ರೋಗಿಗಳು ಬಂದರೆ ಕಾಯಿಲೆ ಕಡಿಮೆಯಾಗುವ ಬದಲು ಹೆಚ್ಚಾಗುವ ವಾತಾವರಣ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕುಡಿಯುವ ನೀರಿನ ಅರ್ಧ ಖರ್ಚು ಭರಿಸುವೆ, ಕೂಡಲೇ ನೀರಿನ ವ್ಯವಸ್ಥೆ ಮಾಡಿ ಎಂದು ತಾಕೀತು ಮಾಡಿದರು.

ಜಿಪಂ ಸದಸ್ಯ ಬಸವರಾಜ ಹಿರೇಗೌಡರ ಮಾತನಾಡಿ, ಮೇಲಾಧಿಕಾರಿಗಳು ವೈದ್ಯರನ್ನು ನೇಮಿಸಿದ್ದರೂ ವೈದ್ಯರು ಬಡ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ. ಈ ಬಗ್ಗೆ ಗ್ರಾಮೀಣ ಜನರಿಂದ ದೂರು ಬರುತ್ತಿವೆ ಎಂದರು.

Advertisement

ನಗರಸಭೆ ಪೌರಾಯುಕ್ತ ಆರ್‌.ವಿರುಪಾಕ್ಷಮೂರ್ತಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಇಲಾಖೆಯೇ ಸೌಲಭ್ಯ ಕಲ್ಪಿಸಬೇಕು. ಸಾರ್ವಜನಿಕರಿಗೋಸ್ಕರ ಪುರಸಭೆಯಿಂದ ಕೊಳವೆಬಾವಿ ಕೊರೆಸಿ ನೀರಿನ ಅನುಕೂಲ ಮಾಡಿಕೊಡಲಾಗುವುದು ಎಂದರು.

ಜಿಲ್ಲಾ ವೈದ್ಯಾಧಿಕಾರಿ ಎಂ.ಕೆ.ಎಸ್‌. ನಾಸೀರ್‌ ಮಾತನಾಡಿ, ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ತಂಡ ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದೆ. ಸಿಂಧನೂರು ಆಸ್ಪತ್ರೆಗೆ ಹೆಚ್ಚಿನ ಸೌಲಭ್ಯ ಒದಗಿಸಲು ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ ಹಾಗೂ 32 ಕೆವಿ ಜನರೇಟರ್‌ ವ್ಯವಸ್ಥೆ, ಐಸಿಯು, ಗರ್ಭಿಣಿಯರಿಗೆ ಮೂಲ ಸೌಕರ್ಯ ಒದಗಿಸಲು ಕ್ರಮ ವಹಿಸಲಾಗುವುದು. ವೈದ್ಯರು ಸರ್ಕಾರಿ ಆಸ್ಪತ್ರೆ ವೇಳೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಹೆರಿಗೆ ಆದ ನಂತರ ವೈದ್ಯರು ಅಥವಾ ನರ್ಸ್‌, ಸಿಬ್ಬಂದಿ ಹಣ ಪಡೆದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.

ತಾಲೂಕು ವೈದ್ಯಾಧಿಕಾರಿ ನರಸಿಂಹಲು ಮಾತನಾಡಿ, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ತಾಲೂಕು ಆಸ್ಪತ್ರೆಯಿಂದ ಯಾರೂ ವರ್ಗ ಆಗುತ್ತಿಲ್ಲ. ಇಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಯಾರಿಗೂ ವರ್ಗಾವಣೆಯಾಗಲು ಅನುಮತಿ ನೀಡಿಲ್ಲ ಎಂದರು. ಮಲೇರಿಯಾ ಜಿಲ್ಲಾ ವೈದ್ಯಾಧಿಕಾರಿ ಗಣೇಶ, ವೈದ್ಯರಾದ ನಾಗರಾಜ ಪಾಟೀಲ, ನಾಗರಾಜ ಕಾಟ್ವಾ, ಸಂಘಟನೆ ಮುಖಂಡರಾದ ನಾಗರಾಜ, ಪಂಪಾಪತಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next