Advertisement

ದಢೇಸುಗೂರು-ಉದ್ಬಾಳ (ಯು) ಮತ್ತೆ ಕೈವಶ

11:02 AM Jun 01, 2019 | Naveen |

ಸಿಂಧನೂರು: ತಾಲೂಕಿನ ದಢೇಸುಗೂರು ಹಾಗೂ ಉದ್ಬಾಳ (ಯು) ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ಜಾಲಿಹಾಳ ಗ್ರಾಮ ಪಂಚಾಯಿತಿಯ 2ನೇ ವಾರ್ಡ್‌ಗೆ ನಡೆದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ರಾಮಣ್ಣ ಯಲ್ಲಪ್ಪ ಭಜಂತ್ರಿ ಗೆಲುವಿನ ನಗೆ ಬೀರಿದ್ದಾರೆ.

Advertisement

ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಶುಕ್ರವಾರ ಮತಗಳ ಎಣಿಕೆ ಕಾರ್ಯ ನಡೆಯಿತು. ಬೆಳಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಕಾರ್ಯ ಕೇವಲ 45 ನಿಮಿಷಗಳಲ್ಲಿ ಮುಗಿಯಿತು. ದಡೇಸುಗೂರು ತಾಪಂ ಕ್ಷೇತ್ರದ ಮತ ಎಣಿಕೆ ಕಾರ್ಯ 7 ಸುತ್ತಿನಲ್ಲಿ ನಡೆದರೆ, ಉದ್ಬಾಳ ಯು ತಾಪಂ ಕ್ಷೇತ್ರದ ಮತ ಎಣಿಕೆ ಕಾರ್ಯ 12 ಸುತ್ತುಗಳಲ್ಲಿ ನಡೆಯಿತು.

ದಡೇಸುಗೂರು ತಾಪಂ ಕ್ಷೇತ್ರ: ಎರಡು ತಿಂಗಳ ಹಿಂದೆ ದಢೇಸುಗೂರು ತಾಪಂ ಕ್ಷೇತ್ರದ ಕಾಂಗ್ರೆಸ್‌ ಸದಸ್ಯೆ ಮತ್ತು ಸಿಂಧನೂರು ತಾಪಂ ಅಧ್ಯಕ್ಷೆಯಾಗಿದ್ದ ಜೈನಾಬಿ ನವಲಿ ನಿಧನದಿಂದ ತೆರವಾದ ಸ್ಥಾನಕ್ಕೆ ಮೇ 29ರಂದು ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಪಾರ್ವತಿ ನಂದಪ್ಪ 1,741 ಮತ ಗಳಿಸಿ 297 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಮಾಳಮ್ಮ ರಾಮಣ್ಣ ಹಟ್ಟಿ 1,444, ಜೆಡಿಎಸ್‌ನ ರತ್ನಮ್ಮ ಮುದುಕಪ್ಪ ಕೋರಿ 850, ಪಕ್ಷೇತರ ಅಭ್ಯರ್ಥಿ ಖಾಜಾಬನಿ ಫಾರೂಕ್‌ 42 ಮತ ಪಡೆದಿದ್ದರೆ, ನೋಟಾಕ್ಕೆ 33 ಮತಗಳು ಬಿದ್ದಿವೆ.

ಉದ್ಬಾಳ (ಯು) ತಾಪಂ ಕ್ಷೇತ್ರ: ಉದ್ಬಾಳ ಯು ತಾಪಂ ಕ್ಷೇತ್ರದ ಸದಸ್ಯರಾಗಿದ್ದ ರಮೇಶ ಅವರಿಗೆ ಸರ್ಕಾರಿ ಹುದ್ದೆ ದೊರೆತ ಕಾರಣ ತಾಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಈ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಮಣ್ಣ ಹನುಮಂತಪ್ಪ 2,885 ಮತ ಪಡೆದು, 1,471 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಸಿದ್ದಪ್ಪ ಹನುಮಪ್ಪ 1,414, ಜೆಡಿಎಸ್‌ನ ಸಲ್ಮಾನ್‌ರಾಜ 1,286 ಮತ ಪಡೆದಿದ್ದರೆ, ಇಲ್ಲಿ ನೋಟಾಕ್ಕೆ 80 ಮತಗಳು ಲಭಿಸಿವೆ. ಹಾಗೂ ನೋಟಾ 80 ಮತಗಳು ಬಿದ್ದಿವೆ.

ವಿಜಯೋತ್ಸವ: ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವು ಘೋಷಣೆ ಆಗುತ್ತಿದ್ದಂತೆ ಆಯಾ ಅಭ್ಯರ್ಥಿಗಳ ಬೆಂಬಲಿಗರು ಮಹಾತ್ಮ ಗಾಂಧಿ ಸರ್ಕಲ್ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಪರಸ್ಪರ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು. ನಂತರ ವಿಜೇತ ಅಭ್ಯರ್ಥಿಗಳು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪನವರ ನಿವಾಸಕ್ಕೆ ತೆರಳಿ ಅಭಿನಂದಿಸಿದರು.

Advertisement

ಕಾಂಗ್ರೆಸ್‌ ಬಲವರ್ಧನೆ: ಈ ಹಿಂದೆ ನಡೆದ ಚುನಾವಣೆಯಲ್ಲಿ ದಢೇಸುಗೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ದಿ| ಜೈನಾಬಿ ನವಲಿ 98 ಮತಗಳ ಅಂತರದಿಂದ ಗೆಲುವು ಸಾಧಿಸಿದರೆ, ಈಗ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 297 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಇನ್ನು ಉದ್ಬಾಳ (ಯು) ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ಕಳೆದ ಬಾರಿ ಸ್ಪರ್ಧಿಸಿದ್ದ ರಮೇಶ 284 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಅದೇ ಪಕ್ಷದಿಂದ ರಾಮಣ್ಣ 1,471 ಮತಗಳ ಅಂತರದಿಂದ ಭಾರೀ ಗೆಲುವು ಸಾಧಿಸಿದ್ದಾರೆ.

ಕೈ ಆಡಳಿತ ಸುಭದ್ರ: 30 ಸದಸ್ಯ ಬಲದ ಸಿಂಧನೂರು ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್‌ 16 ಸ್ಥಾನಗಳೊಂದಿಗೆ ಅಧಿಕಾರ ಪಡೆದುಕೊಂಡಿತ್ತು. ಬಿಜೆಪಿ 8, ಜೆಡಿಎಸ್‌ನ 6 ಸದಸ್ಯರು ಇದ್ದರು. ವಿವಿಧ ಕಾರಣದಿಂದ ಎರಡು ಸ್ಥಾನಗಳು ಖಾಲಿ ಆಗಿದ್ದವು. ಈ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಈ ಎರಡೂ ಸ್ಥಾನಗಳನ್ನು ಜೆಡಿಎಸ್‌, ಇಲ್ಲವೇ ಬಿಜೆಪಿ ಗಳಿಸಿದ್ದರೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯಲಿದ್ದಾರೆ ಎಂಬ ಚರ್ಚೆ ನಡೆದಿದ್ದವು. ಆದರೆ ಎರಡೂ ಸ್ಥಾನಗಳು ಮತ್ತೇ ಕಾಂಗ್ರೆಸ್‌ ಪಾಲಾಗಿದ್ದರಿಂದ ಬಿಜೆಪಿ, ಜೆಡಿಎಸ್‌ ವಿರೋಧ ಪಕ್ಷದಲ್ಲಿಯೇ ಕುಳಿತುಕೊಳ್ಳುವಂತಾಗಿದೆ.

ಸಚಿವ ನಾಡಗೌಡಗೆ ಮುಖಭಂಗ
ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಅವರ ಸ್ವಕ್ಷೇತ್ರದಲ್ಲಿ ನಡೆದ ಎರಡು ತಾಪಂ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳಿಗೆ ಹಿನ್ನಡೆ ಆಗಿದೆ. ಜೆಡಿಎಸ್‌ ಅಭ್ಯರ್ಥಿಗಳು ಮೂರನೇ ಸ್ಥಾನ ಪಡೆದಿದ್ದು, ಇದರಿಂದ ಸಚಿವರಿಗೆ ಮುಖಭಂಗವಾಗಿದೆ. ಜೆಡಿಎಸ್‌ನ ಕಾರ್ಯಕರ್ತರಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಪಕ್ಷ ಸಂಘಟನೆಯಲ್ಲಿ ಕುಂಠಿತವಾಗುತ್ತಿರುವುದು ಕಂಡು ಬರುತ್ತಿದೆ ಎಂದು ಜೆಡಿಎಸ್‌ ಪಕ್ಷದ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ. ಸಿಂಧನೂರು 2018ರ ಚುನಾವಣೆಯಲ್ಲಿ ಜೆಡಿಎಸ್‌ ಆಡಳಿತಕ್ಕೆ ಬಂದ ನಂತರ ನೀರಿನ ವಿಷಯದಲ್ಲಿ ಸಚಿವ ವೆಂಕಟರಾವ್‌ ನಾಡಗೌಡರು ಮುತುವರ್ಜಿ ವಹಿಸದ ಕಾರಣ ಹಾಗೂ ಕ್ಷೇತ್ರದಲ್ಲಿ ಹೆಚ್ಚು ಇರದ ಕಾರಣಕ್ಕೂ ಈ ಉಪ ಚುನಾವಣೆಯಲ್ಲಿ ಹಿನ್ನಡೆಯಾಗಲು ಕಾರಣವಾಗಿದೆ. ಇನ್ನು ತಾಲೂಕಿನಲ್ಲಿ ಬಿಜೆಪಿಯಲ್ಲಿ ಎರಡ್ಮೂರು ಬಣಗಳು ಇರುವುದು ಕೂಡಾ ಆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹಿನ್ನಡೆ ಆಗಿದೆ. ಹೀಗಾಗಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next