Advertisement

ಬದುಕುವ ಶೈಲಿ ಬಣಜಿಗರಲ್ಲಿ ಕಲಿಯಬೇಕು: ನಾಡಗೌಡ

04:06 PM Jun 24, 2019 | Naveen |

ಸಿಂಧನೂರು: ಅವರವರ ಕುಲಕಸಬುಗಳ ಮೇಲೆ ಜಾತಿಗಳು ಸೃಷ್ಟಿಯಾಗಿವೆ. ಸಮಾಜದ ಅಭಿವೃದ್ಧಿಗೆ ಸಂಘಟನೆ ಅಗತ್ಯವಾಗಿದೆ. ಬಣಜಿಗ ಸಮಾಜದವರಿಂದ ಬದುಕುವ ಶೈಲಿ ಕಲಿಯಬೇಕು ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

Advertisement

ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ, ಬಣಜಿಗ ಸಮುದಾಯ ತಾಲೂಕು ಘಟಕ ಆಶ್ರಯದಲ್ಲಿ ರವಿವಾರ ನಗರದ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಿರಾಣಿ ಅಂಗಡಿ ವ್ಯಾಪಾರವೇ ಮುಖ್ಯ ಕುಲಕಸಬು ಮಾಡಿಕೊಂಡು ಬಣಜಿಗ ಸಮಾಜದವರು ಇಂದು ಆರ್ಥಿಕ, ಶೈಕ್ಷಣಿಕ ಸೇರಿ ಎಲ್ಲ ರಂಗದಲ್ಲಿ ಮುಂದುವರಿದಿದ್ದಾರೆ. ಆದರೆ ಸಿಂಧನೂರು ಕ್ಷೇತ್ರದಲ್ಲಿ ರಾಜಕೀಯವಾಗಿ ಯಾರೂ ಬೆಳೆಯುತ್ತಿಲ್ಲ. ಇದು ಅವರಲ್ಲಿ ಒಗ್ಗಟ್ಟು ಇಲ್ಲದಿರುವುದನ್ನು ತೋರಿಸುತ್ತದೆ. ಆದರೆ ಯಾವುದೇ ಪಕ್ಷವಿರಲಿ ಅವರ ಸಮಾಜದವರಿಗೆ ಟಿಕೆಟ್ ನೀಡಿದರೆ ಅವರಿಗೆ ಒಮ್ಮತದಿಂದ ಆಯ್ಕೆ ಮಾಡುವ ಮನೋಭಾವನೆ ಇಂದಿನ ದಿನಮಾನಗಳಲ್ಲಿ ಇಲ್ಲದಿರುವುದು ಎದ್ದು ಕಾಣುತ್ತದೆ ಎಂದರು.

ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿದರೆ ಮಾತ್ರ ಆರ್ಥಿಕವಾಗಿ ಸಮುದಾಯ ಇನ್ನೂ ಎತ್ತರ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲ ಪಾಲಕರು ಮಕ್ಕಳಿಗೆ ಉನ್ನತ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಬೇಕು ಎಂದರು.

ವ್ಯಕ್ತಿತ್ವ ವಿಕಸನ ಉಪನ್ಯಾಸಕಿ ಲೀಲಾ ಮಲ್ಲಿಕಾರ್ಜುನ ಮಾತನಾಡಿ, ಮಹಿಳೆಯರಿಗೆ ಸಮಾನತೆ ನೀಡಿದ ಆಗಿನ ಎಲ್ಲ ಶರಣೆಯರನ್ನು ಒಳಗೊಂಡಂತೆ ಶರಣ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಸಂಸ್ಕೃತಿಯೆಡೆಗೆ ಹೋಗಲು ಸಾಧ್ಯ. ಕಿರಾಣಿ ವ್ಯಾಪಾರದ ಜೊತೆಗೆ ಪರ್ಯಾಯ ವೃತ್ತಿಯಲ್ಲೂ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದರು.

ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ರಾಜ್ಯಾಧ್ಯಕ್ಷ ಶಿವಬಸಪ್ಪ ಹೆಸರೂರು ಮಾತನಾಡಿ, ಸಮುದಾಯ ಸಂಘಟನೆಗಾಗಿ ಒಗ್ಗೂಡಬೇಕು. ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯ ಶ್ಲಾಘನೀಯವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದರು.

Advertisement

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಬಣಜಿಗ ಸಮುದಾಯದವರು ಇತರ ಸಮುದಾಯದವರೊಂದಿಗೆ ಅನ್ಯೋನ್ಯತೆಯಿಂದ ಬಾಳಬೇಕು ಎಂದರು.

ಸಮುದಾಯ ಮುಖಂಡ ಶಿವಕುಮಾರ ಜವಳಿ ಪ್ರಾಸ್ತಾವಿಕ ಮಾತನಾಡಿ, ಬಣಜಿಗ ಸಮದಾಯಕ್ಕೆ 2ಎ ಪ್ರಮಾಣ ಪತ್ರ, ರಾಜಕೀಯ ಪ್ರಾತಿನಿಧ್ಯ ಒದಗಿಸಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಾದಾಮಿ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಸಮಾಜದ ಅಧ್ಯಕ್ಷ ಗುಂಡಪ್ಪ ಬಳಿಗಾರ ಮಾತನಾಡಿದರು. ಡಾ| ಸುರೇಶ ಸಗರದ, ಸಿದ್ರಾಮಪ್ಪ ಸಾಹುಕಾರ ಮಾಡಸಿರವಾರ, ಜೆಡಿಎಸ್‌ ಅಧ್ಯಕ್ಷ ಎಂ.ಲಿಂಗಪ್ಪ ದಢೇಸುಗೂರು, ನಾಗರಾಜ ಅರಳಿ, ಗವಿಸಿದ್ದಪ್ಪ ಇದ್ದರು. ಕೆ.ಬಿ.ಹವಾಲ್ದಾರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next