Advertisement

ಜೀವನ ಶುದ್ಧಿ ಮಾಡುವುದೇ ಗುರುವಿನ ಗುರಿ: ರಂಭಾಪುರಿ ಶ್ರೀ

03:11 PM Jul 20, 2019 | Naveen |

ಸಿಂಧನೂರು: ಜಗದ್ಗುರುಗಳು ಮಾನವ ಜೀವನ ಪರಿಪೂರ್ಣದೆಡೆಗೆ ಕೊಂಡೊಯ್ಯುವುದೇ ನಿಜವಾದ ಧರ್ಮ. ಸಂಸ್ಕಾರ ಸದ್ವಿಚಾರಗಳಿಂದ ಜೀವನದಲ್ಲಿ ಉನ್ನತಿ ಸಾಧ್ಯ. ಜೀವನ ಶುದ್ಧಿಗೊಳಿಸಿ ಸನ್ಮಾರ್ಗದೆಡೆಗೆ ಕೊಂಡೊಯ್ಯುವುದು ಗುರುವಿನ ಪರಮ ಗುರಿಯಾಗಿದೆ ಎಂದು ರಂಭಾಪುರಿ ಜಗದ್ಗುರು ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

Advertisement

ನಗರದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಧರ್ಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಬೌದ್ಧಿಕ ಸಂಪತ್ತು ಶಾಶ್ವತವಲ್ಲ. ಅಧ್ಯಾತ್ಮ ಸಂಪತ್ತು ಶಾಶ್ವತ. ಭಕ್ತರು ಭಗವಂತನತ್ತ ಸಾಗಿದಾಗ ಜೀವನದಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ. ಬದುಕಿನ ಶ್ರೇಯಸ್ಸಿಗೆ ಕ್ರಿಯಾಶೀಲ ಜೀವನ ಮುಖ್ಯ. ಸಮರ ಜೀವನವನ್ನು ಅಮರ ಜೀವನದೆಡೆಗೆ ಕರೆದೊಯ್ಯುವುದೇ ಗುರುವಿನ ಧರ್ಮವಾಗಿ ಜಾತಿ ಮತ್ತು ಪಂಥಗಳ ಗಡಿ ಮೀರಿದ ವಿಶ್ವ ಬಂಧುತ್ವದ ಆದರ್ಶ ಮೌಲ್ಯಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಅವರು ಬೋಧಿಸಿದ ಅಹಿಂಸಾದಿ ಧ್ಯಾನ, ಪರಿಯಂತರವಾದ ದಶಧರ್ಮ ಸೂತ್ರಗಳು ಸಕಲರ ಬಾಳಿಗೆ ಹಿತಕಾರಿಯಾಗಿವೆ ಎಂದು ಹೇಳಿದರು.

ಸೋಮನಾಥ ಶಿವಾಚಾರ್ಯರು ಪಟ್ಟಾಭಿಷಿಕ್ತರಾಗಿ 12 ವರ್ಷ ತುಂಬಿದ ಸಂದರ್ಭದಲ್ಲಿ ಭವ್ಯ ಸಮಾರಂಭ ಏರ್ಪಡಿಸಿರುವುದು ಸಂತೋಷದ ಸಂಗತಿ. ಶ್ರೀಗಳು ಉತ್ತಮ ವಾಗ್ಮಿಯಾಗಿದ್ದು, ಸಂಸ್ಕಾರ ಮತ್ತು ಸದ್ವಿಚಾರ ಬೋಧಿಸಿ ಸತ್‌ವತ್ತದ ಕಡೆಗೆ ಕರೆತರುವ ಅವರ ಪ್ರಯತ್ನ ಶ್ಲಾಘನೀಯ. ಅವರಿಗೆ ಭಕ್ತರು ಇನ್ನು ಹೆಚ್ಚಿನ ರೀತಿಯಲ್ಲಿ ಸಹಾಯ ಸಹಕಾರ ನೀಡುವುದು ಅವಶ್ಯಕವಾಗಿದೆ ಎಂದು ಹೇಳಿದರು

ಖಾಸಾ ಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬದುಕಿನ ಉನ್ನತಿಗೆ ಧರ್ಮ ಮತ್ತು ಗುರು ಬೇಕು. ಬಿತ್ತಿದ ಬೀಜಕ್ಕೆ ನೀರು ಗೊಬ್ಬರ ಎಷ್ಟು ಅವಶ್ಯಕವೋ ಅಷ್ಟೇ ನೀತಿಗೆ ಧರ್ಮ ಅವಶ್ಯಕವಾಗಿದೆ, ಶ್ರೀ ರಂಭಾಪುರಿ ಜಗದ್ಗುರು ಆಶೀರ್ವಾದ ಮತ್ತು ಅವರ ಸಹಕಾರ ಸದಾ ಇರಲಿ. ವೀರಶೈವ ಧರ್ಮಕ್ಕೆ ತನ್ನದೇ ಆದ ವಿಶಿಷ್ಟ ರೀತಿಯ ಪರಂಪರೆಯಿದೆ ಆ ನಿಟ್ಟಿನಲ್ಲಿ ಧರ್ಮ ಉಳಿಸುವ ಕೆಲಸ ಎಲ್ಲ ಮಠಾಧೀಶರಿಂದ ಆಗುತ್ತಿದೆ ಎಂದು ಹೇಳಿದರು

Advertisement

ಮಾಜಿ ಸಂಸದ ವಿರೂಪಾಕ್ಷಪ್ಪ ಮಾತನಾಡಿ, ಭಾರತ ದೇಶದ ಸಂಸ್ಕೃತಿ ಉಳಿಸುವ ಕೆಲಸ ಮಠಾಧೀಶರು, ಶರಣ, ಸಂತರಿಂದ ಆಗುತ್ತಿದೆ. ಇದು ಒಂದು ಒಳ್ಳೆಯ ಕೆಲಸವಾಗಿದೆ. ಪ್ರತಿಯೊಬ್ಬರಲ್ಲಿ ಸಹಕಾರದ ಬದುಕು ಬರಬೇಕು. ಆಗ ಮಾತ್ರ ಒಳ್ಳೆಯ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಸಮಾಜದ ಅಂಕು ಡೊಂಕುಗಳನ್ನು ನಿರ್ವಹಣೆ ಮಾಡುವ ಶಕ್ತಿ ಮಠಾಧೀಶರಲ್ಲಿದೆ. ಅಂತವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರು ಸಾಗಬೇಕು. ಆಗ ಬದುಕು ಸುಂದರಗೊಳ್ಳಲು ಸಾಧ್ಯ ಎಂದು ಹೇಳಿದರು

ಜಿಪಂ ಸದಸ್ಯ ಎನ್‌. ಶಿವನಗೌಡ ಗೊರೇಬಾಳ ಮಾತನಾಡಿ, ಧರ್ಮ ಸಂಸ್ಕೃತಿ ಉಳಿಯಬೇಕಾದರೆ ಇಂದಿನ ಯುವಕರು ಪಣತೊಡಬೇಕು. ಆಗ ಮಾತ್ರ ಸಮುದಾಯ ಉನ್ನತ ಮಟ್ಟಕ್ಕೆ ಏರಲು ಸಾಧ್ಯ. ಆ ನಿಟ್ಟಿನಲ್ಲಿ ಮಠಾಧೀಶರು ಯುವಕರನ್ನು ಸೆಳೆಯಲು ಮುಂದಾಗಬೇಕು ಎಂದು ಹೇಳಿದರು.

ರೌಡಕುಂದ ಮರಿಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಪಂಡಿತ ಅನ್ನದಾನೇಶ್ವರ ಶಾಸ್ತ್ರಿ ಇಳಕಲ್ಲ, ಬಸವರಾಜ ನಾಡಗೌಡ, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಜಿಪಂ ಸದಸ್ಯ ಅಮರೇಗೌಡ ವಿರೂಪಾಪುರ ಮಾತನಾಡಿದರು. ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಬಿಜಲಿ, ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾನವಿ, ಬೂದಿ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಗಬ್ಬೂರು, ವಾಮದೇವ ಶಿವಾಚಾರ್ಯ ಸ್ವಾಮೀಜಿ, ಮಸ್ಕಿ ಗಚ್ಚಿನ ಮಠದ ರುದ್ರಮುನಿ ಶಿವಾಚಾರ್ಯರು, ಶಿವಾಚಾರ್ಯ ಕಲ್ಲುಮಠ, ಅಮರಗುಂಡ ಶಿವಾಚಾರ್ಯ, ರೇವಣ ಸಿದ್ದೇಶ್ವರ ಶಿವಾಚಾರ್ಯರು, ವೆಂಕಟಗಿರಿ ಕ್ಯಾಂಪ್‌ನ ಸಿದ್ದರಾಮೇಶ್ವರ ಶರಣರು, ಎನ್‌. ಶಿವನಾಗಪ್ಪ ಹಾಗೂ ವಿವಿಧ ಮಠಾಧೀಶರು, ರಾಜಕೀಯ ಗಣ್ಯ ವ್ಯಕ್ತಿಗಳು ಸಮಾಜ ಸೇವಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next