Advertisement

ಅರಸು ಮಾರುಕಟ್ಟೆ ಅವ್ಯವಸ್ಥೆ ಆಗರ

10:50 AM Jul 25, 2019 | Naveen |

ಚಂದ್ರಶೇಖರ ಯರದಿಹಾಳ
ಸಿಂಧನೂರು:
ಎಲ್ಲೆಂದರಲ್ಲಿ ಕಸದ ರಾಶಿ, ಗುಂಡಿಗಳಲ್ಲಿ ನಿಂತ ಕೊಳಚೆ ನೀರು, ಸೊಳ್ಳೆ-ನೊಣಗಳ ಹಾವಳಿ, ಹಂದಿ-ಬಿಡಾಡಿ ದನಗಳ ಓಡಾಟ, ಮೂಗಿಗೆ ಅಡರುವ ದುರ್ನಾತ ಇದು ನಗರದ ದೇವರಾಜ ಅರಸು ಮಾರುಕಟ್ಟೆ ದುಸ್ಥಿತಿ.

Advertisement

ನಿತ್ಯ ಲಕ್ಷಾಂತರ ರೂ. ವಹಿವಾಟು ನಡೆಸುವ ದಿ| ದೇವರಾಜ ಅರಸು ತರಕಾರಿ ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದೆ. ಹಂದಿ, ಬಿಡಾಡಿ ದಿನಗಳ ಗೂಡಾಗಿದೆ. ಹಂದಿ-ಬಿಡಾಡಿ ದನಗಳ ಹಾವಳಿಗೆ ವ್ಯಾಪಾರಸ್ಥರು ರೋಸಿ ಹೋಗಿದ್ದಾರೆ. ಮಾರುಕಟ್ಟೆಯಲ್ಲಿನ ತ್ಯಾಜ್ಯ ಸರಿಯಾಗಿ ವಿಲೇವಾರಿ ಆಗದ್ದಕ್ಕೆ ಕಸದ ರಾಶಿ ತುಂಬಿದೆ. ಮಳೆ ಬಂದರೆ ತಗ್ಗುಗಳಲ್ಲಿ ಕೊಳಚೆ ನೀರು ನಿಂತು, ತ್ಯಾಜ್ಯ ಕೊಳೆತು ದುರ್ನಾತ ಹರಡುತ್ತದೆ. ಸೊಳ್ಳೆಗಳ ಹಾವಳಿ ವಿಪರೀತವಾಗಿದೆ. ಇಂತಹ ಅವ್ಯವಸ್ಥೆ, ದುರ್ವಾಸನೆ ಮಧ್ಯೆಯೇ ತರಕಾರಿ ವ್ಯಾಪಾರಸ್ಥರು, ಗ್ರಾಹಕರು ವಹಿವಾಟು ನಡೆಸಬೇಕಿದೆ.

ಇನ್ನು ಸಂತೆ ದಿನ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಸಂತೆಗೆ ಆಗಮಿಸುತ್ತಾರೆ. ಈ ವೇಳೆ ಜನಜಂಗುಳಿ ಹೆಚ್ಚಿರುತ್ತದೆ. ವ್ಯಾಪಾರಸ್ಥರಿಗೆ ಕೂಡಲು ಜಾಗೆ ಸಿಗದಂತಾಗುತ್ತದೆ. ಇರುವ ಜಾಗೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ವ್ಯಾಪಾರಕ್ಕೆ ಮುಂದಾದರೆ ಹಂದಿ, ದನಗಳ ಕಾಟ ಬೇರೆ ಎನ್ನುತ್ತಾರೆ ತರಕಾರಿ ವರ್ತಕ ವೆಂಕಟೇಶ ಉಪ್ಪಾರ. ಇನ್ನು ಉಳಿದ ದಿನಗಳಲ್ಲಿ ಮಾರುಕಟ್ಟೆಯ ಅವ್ಯವಸ್ಥೆಯಿಂದಾಗಿ ಇತ್ತ ಗ್ರಾಹಕರು ಬಾರದೇ ನಷ್ಟ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಯಮನೂರ.

ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ನಗರದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಶ್ರಮಿಸಿದ್ದರು. ಮಾಜಿ ಮುಖ್ಯಮಂತ್ರಿ ದಿ| ದೇವರಾಜ ಅರಸು ಹೆಸರಿನಲ್ಲಿ ಮಾರುಕಟ್ಟೆ ಸ್ಥಾಪಿಸಿದರು. ನಂತರ ಜನಪ್ರತಿನಿಧಿಗಳ ನಿರ್ಲಕ್ಷ್ಯ, ಪುರಸಭೆ ನಿರ್ವಹಣೆ ಕೊರತೆಯಿಂದ ಮಾರುಕಟ್ಟೆ ಅಧೋಗತಿಗೆ ಇಳಿದಿದೆ.

ವಾಚ್ಮೆನ್‌ ಇಲ್ಲ: ಮಾರುಕಟ್ಟೆ ಸ್ಥಾಪನೆಗೊಂಡ ಆರಂಭದಲ್ಲಿ ಗೇಟ್ ಇತ್ತು. ಅಲ್ಲದೇ ಕಾವಲಿಗೆ ವಾಚ್ಮೆನ್‌ ವ್ಯವಸ್ಥೆ ಮಾಡಲಾಗಿತ್ತು. ಈಗ ಮಾರುಕಟ್ಟೆಗೆ ಗೇಟ್ ಮತ್ತು ವಾಚ್ಮೆನ್‌ ಇಲ್ಲದ್ದರಿಂದ ಮಾರುಕಟ್ಟೆ ಹಂದಿ, ಬಿಡಾಡಿ ದನಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಈ ಕುರಿತು ಮನವಿ ಸಲ್ಲಿಸಿದರೂ ಪುರಸಭೆ ಸ್ಪಂದಿಸಿಲ್ಲ ಎಂದು ವ್ಯಾಪಾರಸ್ಥರು ದೂರಿದ್ದಾರೆ. ವಾರದಲ್ಲಿ ಮಾರುಕಟ್ಟೆ ಸ್ವಚ್ಛತೆಗೆ ಮುಂದಾಗದಿದ್ದಲ್ಲಿ ನಗರಸಭೆ ಕಾರ್ಯಾಲಯದ ಎದುರು ಧರಣಿ ನಡೆಸುವುದಾಗಿ ವ್ಯಾಪಾರಸ್ಥರ ಸಂಘದ ಮುಖಂಡರು ಎಚ್ಚರಿಸಿದ್ದಾರೆ.

Advertisement

ಮಾರುಕಟ್ಟೆ ನಿರ್ವಹಣೆಯಲ್ಲಿ ನಗರಸಭೆ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಇಲ್ಲಿ ದೇವರಾಜು ಅರಸು ನಾಮಫಲಕ ಇಲ್ಲದಿರುವುದು ದುರಂತ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಹಿತಾಸಕ್ತಿ ಕೊರತೆ ಎದ್ದು ಕಾಣುತ್ತಿದೆ. ಕೂಡಲೇ ನಗರಸಭೆಯವರು ಮಾರುಕಟ್ಟೆಯತ್ತ ಗಮನಹರಿಸಬೇಕು.
ಕೆ. ವಿರೂಪಾಕ್ಷಪ್ಪ, ಮಾಜಿ ಸಂಸದ.

ದೇವರಾಜ ಅರಸು ಮಾರುಕಟ್ಟೆ ಅಭಿವೃದ್ಧಿಗೆ 50 ಲಕ್ಷ ರೂ. ಇದ್ದು, ಶೀಘ್ರವೇ ಅಭಿವೃದ್ಧಪಡಿಸಿ ವ್ಯಾಪಾರಸ್ಥರು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
ಆರ್‌. ವಿರೂಪಾಕ್ಷಮೂರ್ತಿ,
ಪೌರಾಯುಕ್ತರು, ನಗರಸಭೆ ಸಿಂಧನೂರು

Advertisement

Udayavani is now on Telegram. Click here to join our channel and stay updated with the latest news.

Next