ಸಿಂಧನೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ಮುಂದಾಗಿರುವುದನ್ನು ಖಂಡಿಸಿ ರೈತ, ದಲಿತ ಹಾಗೂ ಕಾರ್ಮಿಕರ ಐಕ್ಯ ಹೋರಾಟ ಸಮಿತಿಯಿಂದ ಸೆ.28 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಇದನ್ನು ಬೆಂಬಲಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ರೈತಪರ ಸಂಘಟನೆಗಳ ಸಮನ್ವಯ ತಾಲೂಕು ಘಟಕದಿಂದ ಸಿಂಧನೂರು ಬಂದ್‌ಗೆ ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ಸಂಚಾಲಕ ಡಿ.ಎಚ್.ಕಂಬಳಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ರೈತ ಮತ್ತು ಕಾರ್ಮಿಕರಿಗೆ ಮರಣ ಶಾಸನಗಳಾಗಿವೆ. ಕಾಯ್ದೆಗಳ ಕುರಿತು ಸಮಗ್ರವಾಗಿ ಚರ್ಚಿಸಲು ವಿರೋಧ ಪಕ್ಷದವರಿಗೆ ಬಿಡದೆ ಅಂಗೀಕಾರಕ್ಕೆ ಮುಂದಾಗಿರುವುದು ಪ್ರಜಾತಾಂತ್ರಿಕ ವಿರೋಧಿ ಮತ್ತು ಸಂವಿಧಾನ ಬಾಹಿರವಾಗಿದೆ. ಜೈ ಜವಾನ್ ಜೈ ಕಿಸಾನ್ ಎಂದ ಪ್ರಧಾನಿ ಮೋದಿ ಹಾಗೂ ಹಸಿರು ಶಾಲು ಹಾಕಿಕೊಂಡು ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಬದಲಾಗಿ ಕಾರ್ಪೋರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರೈತ, ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ದೇಶಾದ್ಯಂತ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದೇ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಶುಕ್ರವಾರ ರೈತರ ನಿಯೋಗದೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಸೆ.28 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಅದರಂತೆ ಸಿಂಧನೂರಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಿ ಬಂದ್‌ಗೆ ಬೆಂಬಲಿಸಬೇಕೆಂದು ಕೋರಿದರು.
ಬಂದ್‌ಗೆ ವರ್ತಕರ ಸಂಘ ಬೆಂಬಲ: ಕರ್ನಾಟಕ ಬಂದ್‌ಗೆ ಸಿಂಧನೂರು ಬಂದ್‌ಗೆ ವರ್ತಕರ ಸಂಘ ಹಾಗೂ ಗೊಬ್ಬರ ಮತ್ತು ಕ್ರಿಮಿನಾಶಕ ವ್ಯಾಪಾರಿಗಳ ಸಂಘ ಬೆಂಬಲ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ವರ್ತಕರ ಸಂಘದ ತಾಲೂಕು ಅಧ್ಯಕ್ಷ ಮಲ್ಲನಗೌಡ ಕಾನಿಹಾಳ, ಕಾರ್ಯದರ್ಶಿ ಪೂಜಪ್ಪ ಪೂಜಾರಿ, ಗೊಬ್ಬರ ಮತ್ತು ಕ್ರಿಮಿನಾಶಕ ವ್ಯಾಪಾರಿಗಳ ಸಂಘ ಅಧ್ಯಕ್ಷ ಎನ್ .ಭೀಮನಗೌಡ ಗೊರೇಬಾಳ ಅವರು, ರೈತ ಮತ್ತು ಕಾರ್ಮಿಕರ ಹಕ್ಕುಗಳ ರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಆದ್ದರಿಂದ ಇವರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಸರ್ಕಾರ ರದ್ದುಗೊಳಿಸಬೇಕು. ಸೆ.28 ರಂದು ಎಲ್ಲ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳು ಬಂದ್‌ಗೊಳಿಸಿ, ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ, ಸಿಂಧನೂರು ಬಂದ್ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.