Advertisement

ಸೈಬರ್‌ ಅಪರಾಧ ತಡೆಗಟ್ಟಲು ಜಾಗೃತಿ ವಹಿಸಿ: ಡಾ|ಮಂಗೋಳಿ

01:35 PM Feb 03, 2020 | Naveen |

ಸಿಂದಗಿ: ಸೈಬರ್‌ ಅಪರಾಧ ಭೌತಿಕ ಅಪರಾಧಕ್ಕಿಂತ ಭಿನ್ನವಾಗಿದೆ. ಗಣಕಯಂತ್ರವನ್ನು ಸಾಧನವನ್ನಾಗಿಟ್ಟುಕೊಂಡು ಅಪರಾಧ ಎಸಗುವುದು ಸೈಬರ್‌ ಅಪರಾಧವಾಗಿದೆ. ಭಾರತ ಸೈಬರ್‌ ಅಪರಾಧಗಳಲ್ಲಿ ವಿಶ್ವದಲ್ಲಿ 9ನೇ ಸ್ಥಾನ ಹೊಂದಿದೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಚೇರಮನ್‌ ಮತ್ತು ಸ್ಕೂಲ್‌ ಆಫ್‌ ಕ್ರಿಮಿನಾಲಾಜಿ ಮತ್ತು ಕ್ರಿಮಿನಲ್‌ ಜಸ್ಟಿಸ್‌ ನಿರ್ದೇಶಕ ಡಾ| ಆರ್‌.ಎನ್‌. ಮಂಗೋಳಿ ಹೇಳಿದರು.

Advertisement

ಪಟ್ಟಣದ ಸಿ.ಎಂ. ಮನಗೂಳಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಸ್ಕೂಲ್‌ ಆಫ್‌ ಕ್ರಿಮಿನಾಲಾಜಿ ಮತ್ತು ಕ್ರಿಮಿನಲ್‌ ಜಸ್ಟಿಸ್‌ ಸಹಯೋಗದೊಂದಿಗೆ ಹಮ್ಮಿಕೊಂಡ ಸೈಬರ್‌ ಅಪರಾಧ ಸಮಸ್ಯೆಗಳು, ಸವಾಲುಗಳು ಮತ್ತು ಪರಿಹಾರ ಎಂಬ ವಿಷಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ 10 ನಿಮಿಷಕ್ಕೆ ಒಂದು ಸೈಬರ್‌ ಅಪರಾಧ ಪ್ರಕರಣ ಪತ್ತೆಯಾಗುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ಗಣಕಯಂತ್ರ ಅಂತರ್ಜಾಲ ಬಳಕೆ ಚಾಟಿಂಗ್‌, ಡೇಟಿಂಗ್‌, ಟಿಕ್‌ಟಾಕ್‌ ಇವುಗಳನ್ನು ಉಪಯೋಗಿಸುವಾಗ ಬಹಳ ಬುದ್ಧಿವಂತಿಕೆಯಿಂದ ಬಳಸಬೇಕು ಎಂದು ಸಲಹೆ ನೀಡಿದರು.

ಮೈಸೂರು ಜೆಎಸ್ಸೆಸ್‌ ಮೆಡಿಕಲ್‌ ಕಾಲೇಜಿನ ಸಹ ಪ್ರಾಧ್ಯಾಪಕ ಡಾ| ಅರವಿಂದ ಜಿ.ಬಿ. ಮಾತನಾಡಿ, ಸೈಬರ್‌ ಅಪರಾಧ 20ನೇ ಶತಮಾನದ ಒಂದು ಬೃಹತ್‌ ಸಮಸ್ಯೆಯಾಗಿದೆ. 2000ದ ಸಂವಹನ ತಂತ್ರಜ್ಞಾನ ಕಾಯ್ದೆ ಸೈಬರ್‌ ಅಪರಾಧ ತಡೆಗಟ್ಟಲು ಸಹಾಯಕವಾಗಿದೆ. ಗಣಕಯಂತ್ರ ನಮಗೆ ಜಗತ್ತಿನ ಎಲ್ಲ ಜ್ಞಾನವನ್ನು ನೀಡುತ್ತದೆ. ಇದನ್ನು ಪಡೆಯುವಾಗ ಬಹಳ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು.

ವಂಚನೆ, ಗಾಳ ಹಾಕುವುದು, ಲೈಂಗಿಕ ಆಶ್ಲಿಲತೆ ಹೋಗಲಾಡಿಸಬೇಕಾದರೆ ಸೈಬರ್‌ ಅಪರಾಧ ಪ್ರಕರಣಗಳನ್ನು ಸಿ.ಪಿ.ಆಯ್‌. ದರ್ಜೆಗಿಂತ ಹೆಚ್ಚಿನ ಪೊಲೀಸ್‌ ಅಧಿಕಾರಿಗೆ ದೂರು ದಾಖಲಿಸಬೇಕು. ಸೈಬರ್‌ ಅಪರಾಧಗಳು ನಡೆಯಬೇಕಾದರೆ ಜಾಗೃತೆಯ ಕೊರತೆಯೇ ಕಾರಣವಾಗಿದೆ. ಪೊಲೀಸರು ಉನ್ನತ ಶಿಕ್ಷಣ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಜನಜಾಗೃತಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಎ.ಬಿ. ಸಿಂದಗಿ, ಸಂಪನ್ಮೂಲ ವ್ಯಕ್ತಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಡಾ| ನಂದಿನಿ ಜಿ. ದೇವರಮನಿ, ವಿಚಾರ ಸಂಕಿರಣ ಸಂಘಟನಾ ಕಾರ್ಯದರ್ಶಿ ಹಾಗೂ ಐಕ್ಯೂಎಸಿ ಸಂಯೋಜಕ, ಅಪರಾಧಶಾಸ್ತ್ರ ಪ್ರಾಧ್ಯಾಪಕ ಬಿ.ಡಿ. ಮಾಸ್ತಿ ಮಾತನಾಡಿದರು.

ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ಸಂಶೋಧನಾ ವಿಧ್ಯಾರ್ಥಿಗಳು, ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಬಿ.ಎನ್‌. ಪಾಟೀಲ ಸ್ವಾಗತಿಸಿದರು. ಎಸ್‌.ಎ. ಕೆರುಟಗಿ, ಎಸ್‌. ಕೆ. ಹೂಗಾರ ನಿರೂಪಿಸಿದರು. ಗ್ರಂಥಪಾಲಕ ಎಸ್‌.ಎಂ. ಕುಂಬಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next