ರಮೇಶ ಪೂಜಾರ
ಸಿಂದಗಿ: ತಮ್ಮದಲ್ಲದ ತಪ್ಪಿನಿಂದಾಗಿ ಅಪಾಯದ ಅಂಚನ್ನು ತಲುಪಿರುವ ಮಕ್ಕಳಿಗೆ ವಾತ್ಸಲ್ಯದ ನೆರಳು ನೀಡಿ ಬೆಳೆಸುತ್ತಿರುವ ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದ ಹತ್ತಿರದ ವಿಜಯಪುರದ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ನಮ್ಮೂರು ಯೋಜನೆಯ ನಮ್ಮ ಮಕ್ಕಳ ಧಾಮ ದೇಶದಲ್ಲಿಯೇ ಸಮುದಾಯದ ನಾಯಕತ್ವದಲ್ಲಿ ನಡೆಯುತ್ತಿರುವ ಮೊದಲ ಕೇಂದ್ರವಾಗಿದೆ.
ತಂದೆ-ತಾಯಿಗಳಿಂದ ಜನಿಸುವ ಮೊದಲೇ ಎಚ್ ಐವಿ ಸೋಂಕು ತಗಲಿಸಿಕೊಂಡು, ಭವಿಷ್ಯ ಅರಸುವ ಮುನ್ನವೇ ಕರಾಳ ಬದುಕನ್ನು ಅನುಭವಿಸುತ್ತಿದ್ದ ಮಕ್ಕಳನ್ನು ಗುರುತಿಸಿ ಅವರಿಗೆ ಬಾಲ್ಯದಲ್ಲಿ ಎಲ್ಲ ಮಕ್ಕಳು ಅನುಭವಿಸುವ ಪ್ರೀತಿ, ವಾತ್ಸಲ್ಯ, ಆರೋಗ್ಯ, ರಕ್ಷಣೆ, ಪೌಷ್ಟಿಕ ಆಹಾರ, ಆಟ, ಮನರಂಜನೆ, ಕೌಶಲ್ಯ, ವಿದ್ಯಾಭ್ಯಾಸ ಮತ್ತು ಪಾಲನೆ ಪೋಷಣೆಯನ್ನು ಸರಕಾರದ ಯಾವುದೇ ಅನುದಾನ ಪಡೆಯದೆ ಸಮುದಾಯದ ಸಹಾಯದಿಂದ ನಮ್ಮೂರು ಯೋಜನೆಯ ನಮ್ಮ ಮಕ್ಕಳ ಧಾಮ ಮೂಲಕ ನೀಡಲು ಕಂಕಣಬದ್ಧರಾಗಿ ನಿಂತಿರುವವರು ಮಕ್ಕಳ ಪೋಷಕ ವಾಸುದೇವ ತೋಳಬಂದಿವರು.
ಅವರಿಗೆ ವಿವಿಧ ಸಂಘ ಸಂಸ್ಥೆಗಳು ನೀಡಿರುವ 4 ರಾಜ್ಯಪ್ರಶಸ್ತಿ ಮತ್ತು 2 ರಾಷ್ಟ್ರ ಪ್ರಶಸ್ತಿಗಳಿಂದ ಬಂದ ಸಂಪೂರ್ಣ ಹಣವನ್ನು ನಮ್ಮ ಮಕ್ಕಳ ಧಾಮಕ್ಕೆ ನೀಡಿದ್ದಾರೆ. ಸರಕಾರದಿಂದ ಸಿಗುವ ಎಆರ್‌ಟಿ ಚಿಕಿತ್ಸೆ ಜೊತೆಗೆ ಆರೈಕೆ-ಬೆಂಬಲ ಸಮಾಲೋಚನೆಗಳಂತಹ ನಿರಂತರ ಸೇವೆಗಳು ಉಚಿತವಾಗಿ ನೀಡಲಾಗುತ್ತಿದೆ. ಇಂದಿನ ಕಷ್ಟಕರ ದಿನಗಳಲ್ಲಿ ಸರಕಾರದ ಯಾವ ಅನುದಾನ ಪಡೆಯದೇ ಇತರ ಸಂಘ ಸಂಸ್ಥೆಗಳ, ದಾನಿಗಳ ಸಹಕಾರದಿಂದ ಎಲ್ಲ ಮಕ್ಕಳಿಗೂ ಬೇಕಾಗುವ ಪೌಷ್ಟಿಕ ಆಹಾರ, ವಿದ್ಯಾಭ್ಯಾಸ ಮತ್ತು ಎಆರ್‌ಟಿ ಚಿಕಿತ್ಸೆ ನಿರಂತರವಾಗಿ ನಡೆಯುತ್ತಿರುವುದು ಸಂಸ್ಥೆಗೆ ಪೇಜಾವರ ಶ್ರೀಗಳು, ಮಂತ್ರಾಲಯದ ಶ್ರೀಗಳು, ಕೆನಡಾ, ಅಮೆರಿಕ, ಚೀನಾ ಪ್ರತಿನಿ ಧಿಗಳು, ಜೈನ ಮುನಿಗಳು, ರಾಜಸ್ಥಾನದ ಆರೋಗ್ಯ ಆಯುಕ್ತ ಪ್ರೀಯಂವಧ ಅವರು ಸೇರಿದಂತೆ ದೇಶ ವಿದೇಶದ ಗಣ್ಯರು ಭೇಟಿ ನೀಡಿ ನಮ್ಮ ಮಕ್ಕಳ ಧಾಮದ ಕಾರ್ಯ ಶ್ಲಾಘಿಸಿದ್ದಾರೆ.
ನಮ್ಮ ಮಕ್ಕಳ ಧಾಮದಲ್ಲಿ ಮಕ್ಕಳಿಗೆ ಓದಲು ಗ್ರೊಬೈ ಮಾದರಿಯ ಗ್ರಂಥಾಲಯಲ್ಲಿ 6 ಸಾವಿರಕ್ಕೂ ಹೆಚ್ಚು ಪುಸ್ತಕಗಳು, ಪಿಠೊಪಕರಣಗಳು, ಊಟದ ಕೊಣೆ, ಅಡುಗೆ ಮನೆ, ಸಭಾಂಗಣ, ವಿಶ್ರಾಂತಿ ಕೋಣೆ ಒದಗಿಸಿದ್ದಾರೆ. 18 ಹಣ್ಣಿನ ಗಿಡಗಳು ಸೇರಿದಂತೆ ವಿವಿಧ ರೀತಿಯ 600ಕ್ಕೂ ಹೆಚ್ಚು ಗಿಡಗಳಿವೆ. ಒಂದು ಭಾವಿ ಇದೆ. ಸುಂದರ ಪರಿಸರ ವಾತಾವರಣವಿದೆ.
ಅಲ್ಲಿ ಇನ್ನೂ ಅನೇಕ ಸೌಲಭ್ಯಗಳ ಅಗತ್ಯವಿದೆ. ಸೌಲಭ್ಯಗಳನ್ನು ಒದಗಿಸಲು ಸರಕಾರ, ದಾನಿಗಳು ಮುಂದಾಗಬೇಕು. ನೆರವು ಅಗತ್ಯ: ನಮ್ಮ ಮಕ್ಕಳ ಧಾಮಕ್ಕೆ ಸಮುದಾಯದ ನೆರವು ಅಗತ್ಯ. ನೆರವು ನೀಡುವವರು 7349722974, 9448118454 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬೇಕು.