Advertisement

ಮಕ್ಕಳ ಹಾಜರಾತಿ ಹೆಚ್ಚಿಸಲು ಬಿಸಿಯೂಟ ಯೋಜನೆ ಜಾರಿ

12:01 PM Feb 03, 2020 | Naveen |

ಸಿಂದಗಿ: ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಶಿಕ್ಷಕರ ಜೊತೆಗೆ ಬಿಸಿಯೂಟ ಮಾಡುವ ಕಾರ್ಯಕರ್ತೆಯರು ಕೈ ಜೋಡಿಸಿದ್ದಿರಿ ಎಂದು ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಾರ್ಯಾಲಯದ ಕ್ಷೇತ್ರ ಸಮನ್ವಯಾಧಿಕಾರಿ ಎಚ್‌.ಎಸ್‌.ನಗನೂರ ಹೇಳಿದರು.

Advertisement

ಪಟ್ಟಣದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಅಕ್ಷರ ದಾಸೋಹ ಯೋಜನೆ, ತಾಪಂ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಸಿಂದಗಿ, ಮೋರಟಗಿ ವಲಯಗಳಲ್ಲಿ ಬರುವ ಶಾಲೆಗಳಲ್ಲಿ ಬಿಸಿಯೂಟ ಮಾಡುವ ಕಾರ್ಯಕರ್ತೆಯರು ಹಾಗೂ ಸಹಾಯಕ ಕಾರ್ಯಕರ್ತೆಯರಿಗೆ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಪ್ರಾಥಮಿಕ ಹಂತದಲ್ಲಿ ಗುಣಮಟ್ಟ ಶಿಕ್ಷಣ ನೀಡಲು ಹಾಜರಾತಿ ಪ್ರಮಾಣ ಹೆಚ್ಚಿಸಲು ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ ಅತ್ಯಂತ ಪ್ರಮುಖ ಯೋಜನೆ ಮಧ್ಯಾಹ್ನದ ಬಿಸಿಯೂಟ. ಕಾರ್ಯಕ್ರಮದ ಮುಖ್ಯ ಉದ್ದೇಶವೆನೆಂದರೆ ಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಸುಧಾರಿಸಲು. ಉಳಿಕೆ ಪ್ರಮಾಣ ಸುಧಾರಿಸಲು, ಪೌಷ್ಟಿಕಾಂಶ ಮಟ್ಟವನ್ನು ಹೆಚ್ಚಿಸುವ ಮೂಲಕ ಶಿಶು ಆರೋಗ್ಯವನ್ನು ಸುಧಾರಿಸುವುದು. ಮಕ್ಕಳ ಕಲಿಕಾ ಸಾಮರ್ಥ್ಯದ ಮಟ್ಟಗಳನ್ನು ಸುಧಾರಿಸಲು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಬಿ. ಯಡ್ರಾಮಿ ಮಾತನಾಡಿ, 2001-02ರ ಅವಧಿಯಲ್ಲಿ ರಾಜ್ಯದ 7 ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಈಶಾನ್ಯ ಜಿಲ್ಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮ ಜಾರಿಗೊಳಿಸಲಾಗಿತ್ತು. ನಂತರ ಈ ಯೋಜನೆಯನ್ನು ರಾಜ್ಯದ ಇತರ ಜಿಲ್ಲೆಗಳಿಗೆ ಹಂತ ಹಂತವಾಗಿ ವಿಸ್ತರಿಸಲಾಯಿತು. ಭಾರತದ ಸರ್ವೋತ್ಛ ನ್ಯಾಯಾಲಯದ ನಿರ್ದೇಶನದಂತೆ, ಸರ್ಕಾರಿ ಶಾಲೆಗಳ 1ರಿಂದ 5ನೇ ತರಗತಿಗಳ ಎಲ್ಲ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟವನ್ನು ಒದಗಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ 1ರಿಂದ 5ನೇ ತರಗತಿಗಳ ಮಕ್ಕಳಿಗೆ ಈ ಕಾರ್ಯಕ್ರಮ ವಿಸ್ತರಿಸಲಾಯಿತು. ಈಗ ಭಾರತ ಸರ್ಕಾರವು 1ರಿಂದ 8ನೇ ತರಗತಿಗಳ ಮಕ್ಕಳಿಗಾಗಿ ಯೋಜನೆಗೆ ಧನ ಸಹಾಯ ಮಾಡುತ್ತಿದೆ. ಕರ್ನಾಟಕ ಸರ್ಕಾರವು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ 9 ಮತ್ತು 10ನೇ ಮಾನದಂಡಗಳ ಮಕ್ಕಳಿಗೆ ಬಿಸಿ ಬೇಯಿಸಿದ ಊಟವನ್ನು ಒದಗಿಸುತ್ತಿದೆ ಎಂದು ಹೇಳಿದರು.

Advertisement

ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಎಸ್‌.ಎಸ್‌. ಕತ್ನಳ್ಳಿ ಮಾತನಾಡಿ, ಕಾರ್ಯಕರ್ತೆಯರಿಗೆ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಜೀವನ ವಿಮಾಯೋಜನೆಯಲ್ಲಿ ವಾರ್ಷಿಕವಾಗಿ 330 ರೂ. ತುಂಬಿದಲ್ಲಿ 2 ಲಕ್ಷ ರೂ. ವಿಮೆ ಲಭ್ಯವಾಗುತ್ತದೆ. ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ ಯೋಜನೆಯಲ್ಲಿ 200 ರೂ. ಮಾಸಿಕವಾಗಿ ತುಂಬುದಲ್ಲಿ 60 ವಯಸ್ಸಿನ ನಂತರ ಕನಿಷ್ಠ 3 ಸಾವಿರ ರೂ. ಪಿಂಚಣಿ ದೊರಕುತ್ತದೆ. ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಇಒ ಸುನೀಲ ಮದ್ದಿನ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಬಿ.ಸಿ. ಶಿರೋಳಕರ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಅಗ್ನಿ ಶಾಮಕ ಠಾಣಾಧಿಕಾರಿ ಶಿವಕುಮಾರ ಬಾಗೇವಾಡಿ, ಸಿಬ್ಬಂದಿಗಳಾದ ಸುರೇಶ ಕುಮಾರ ಫಾಟಕ, ಹನುಮಂತಪ್ಪ ಕುಂಬಾರ, ಕಲ್ಯಾಣಕುಮಾರ ಭಜಂತ್ರಿ, ಸಿದ್ದಣ್ಣ ರೋಡಗಿ, ಶ್ರೀಧರ ಗುಗ್ಗರಿ, ಶರಣಬಸವೇಶ್ವರ ಬಾಗೇವಾಡಿ ಅಗ್ನಿಗಳಿಂದ ಆಗುವ ಅನಾಹುತ ತಪ್ಪಿಸುವ ಬಗೆ, ಬರ್ಸನ್‌ ಬಳಕೆ ಮನಾಡುವ ಬಗೆ, ಬೆಂಕಿ ಹತ್ತಿದಾಗ ಕ್ರಮ ಕೈಗೊಳ್ಳುವ ಬಗೆ ವಿವರಿಸಿದರು.

ಇದೇ ಸಂದರ್ಭದಲ್ಲಿ ಬಿಸಿಯೂಟ ಅಡುಗೆ ಮಾಡುವ ಬಿಸ್ಮಿಲ್ಲಾ ಇನಾಮದಾರ, ಸವಿತಾ ಕಲ್ಲೂರ, ಶಾಂತಾ ಹೂಗಾರ, ಆರ್‌. ಕೆ. ಬಿಳವಾರ, ಶೋಭಾ ಶಹಾಪುರ ಅವರನ್ನು ಸನ್ಮಾನಿಸಲಾಯಿತು. ಸಿಆರ್‌ಪಿ ಡಿ.ಎಂ. ಮಾಹೂರ ಸ್ವಾಗತಿಸಿದರು. ಶಿಕ್ಷಕ ಎಸ್‌.ಎ. ರಾಠೊಡ ನಿರೂಪಿಸಿದರು. ಸಿಆರ್‌ಪಿ ಬಿ.ಎಸ್‌. ಟಕ್ಕಳಕಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next