ಸಿಂದಗಿ: ಜಾಗತಿಕ ಮಟ್ಟದಲ್ಲಿ ಪ್ರಾದೇಶಿಕ ಭಾಷೆಗಳು ತಮ್ಮ ಅಸ್ಥಿತ್ವ ಕಳೆದುಕೊಳ್ಳುತ್ತಿವೆ. ಪ್ರಾದೇಶಕ ಸಂಸ್ಕೃತಿ, ಕಲೆ, ಸಾಹಿತ್ಯ, ಭಾಷೆ ಉಳಿಸಬೇಕಾದರೆ ಪ್ರಾದೇಶಿಕ ಭಾಷೆ ಕಟ್ಟಬೇಕು ಎಂದು ಕರ್ನಾಟಕ ಜಾನಪದ ವಿವಿ ಕುಲಪತಿ ಡಾ| ಡಿ.ಬಿ. ನಾಯಕ ಹೇಳಿದರು.
ಶನಿವಾರ ಆಲಮೇಲ ತಾಲೂಕಿನ ಕಡಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಲಮೇಲ ತಾಲೂಕು ಘಟಕ ಹಮ್ಮಿಕೊಂಡಿದ್ದ ಆಲಮೇಲ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದೆ. ಕನ್ನಡ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಆಂಗ್ಲ ಭಾಷೆ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚುತ್ತಿವೆ. ಕನ್ನಡ ಭಾಷೆ ಅನ್ನ ಭಾಷೆಯಾದಾಗ ಕನ್ನಡ ಭಾಷೆ ಉಳಿಸಲು ಸಾಧ್ಯ ಎಂದು ಹೇಳಿದರು. ಸಾಹಿತ್ಯ ಕೇವಲ ಒಂದು ಮಾಧ್ಯಮವಾಗಿರದೇ ಅದು ಒಂದು ಸಂಸ್ಕೃತಿಯಾಗಿದೆ. ವ್ಯಕ್ತಿತ್ವ, ಸಮಾಜ ರೂಪಿಸುವ ಕೆಲಸ ಸಾಹಿತ್ಯ ಮಾಡುತ್ತದೆ. ಅಭಿವೃದ್ಧಿಯಲ್ಲಿ ಆರ್ಥಿಕ ಸಂಪತ್ತು ಎಷ್ಟು ಮುಖ್ಯವೋ ಅಷ್ಟೇ ಸಾಹಿತ್ಯ, ಸಂಸ್ಕೃತಿ ಸಂಪತ್ತು ಮುಖ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಎಂ.ಸಿ. ಮನಗೂಳಿ, ಆಲಮೇಲ ತಾಲೂಕು ಕಸಾಪ ಅಧ್ಯಕ್ಷ ಡಾ|ರಮೇಶ ಕತ್ತಿ, ಶಾಸಕ ಯಶವಂತರಾಯಗೌಡ ಪಾಟೀಲ, ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರು ಆಶಯ ನುಡಿ ನುಡಿದರು.
ಸಾನ್ನಿಧ್ಯ ವಹಿಸಿದ್ದ ಆಲಮೇಲದ ಗುರುಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಸಮ್ಮುಖ ವಹಿಸಿದ್ದ ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಮಾಜಿ ಶಾಸಕ ರಮೇಶ ಭೂಸನೂರ, ಜಿಪಂ ಬಿ.ಆರ್. ಯಂಟಮನ, ಬಿಂದುರಾಯಗೌಡ ಪಾಟೀಲ, ಶ್ರೀಮಂತ ನಾಗೂರ, ತಾಪಂ ಅಧ್ಯಕ್ಷ ಪ್ರಭಾವತಿ ಶಿರಸಗಿ, ಉಪಾಧ್ಯಕ್ಷೆ ಲಲಿತಾಬಾಯಿ ದೊಡಮನಿ, ಬಿ.ಎಚ್. ಬಿರಾದಾರ, ಸದಸ್ಯ ಡಾ| ಸಂಜೀವಕುಮಾರ ಯಂಟಮನ, ಗ್ರಾಪಂ ಅಧ್ಯಕ್ಷ ಭೋಗಣ್ಣ ಲಾಳಸಂಗಿ, ಉಪಾಧ್ಯಕ್ಷೆ ಶಾಂತಾಬಾಯಿ ಮೇಲಿನಮನಿ ವೇದಿಕೆಯಲ್ಲಿದ್ದರು.
ರಮೇಶ ಪೂಜಾರ