ಸಿಂದಗಿ: ನನ್ನ ಅಧಿಕಾರದ ಅವಧಿಯಲ್ಲಿ ಸಿಂದಗಿ ಪಟ್ಟಣದ ಅಭಿವೃದ್ಧಿಗಾಗಿ ಮಾಡಿದ ಕೆಲಸ ನೋಡಿ ಪಟ್ಟಣದ ಮತದಾರರು ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಗೆಲ್ಲಿಸುತ್ತಾರೆ ಎಂದು ಭರವಸೆ ಇಟ್ಟಿದ್ದೇನೆ ಎಂದು ಶಾಸಕ ಎಂ.ಸಿ. ಮನಗೂಳಿ ಹೇಳಿದರು.
ಶನಿವಾರ ಪಕ್ಷದ ಕಾರ್ಯಾಲಯದಲ್ಲಿ ಪಟ್ಟಣದ ಅಭಿವೃದ್ಧಿಗೆ ಇರುವ ಪ್ರಮುಖ 13 ಕಾಮಗಾರಿಗಳು ಇರುವ ಸಿಂದಗಿ ಪುರಸಭೆ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುರಸಭೆ ಚುನಾವಣೆಯಲ್ಲಿ ಎಲ್ಲ 23 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು ಎಲ್ಲ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುತ್ತಿದ್ದೆ. ಎಲ್ಲ ಅಭ್ಯರ್ಥಿಗಳ ಗೆಲುವು ಖಚಿತ. ಜೆಡಿಎಸ್ ಪಕ್ಷದ ಪುರಸಭೆ ಆಡಳಿತದ ಚುಕ್ಕಾಣಿ ಹಿಡಿಯುವುದು ಖಚಿತ ಎಂದರು.
ಸಮ್ಮಿಶ್ರ ಸರಕಾರವಿದ್ದ ಸಂದರ್ಭದಲ್ಲಿ 20 ತಿಂಗಳ ಅವ ಧಿಯಲ್ಲಿ ಒಳಚರಂಡಿ ಯೋಜನೆ, ಬಳಗಾನೂರ ಕೆರೆಯಿಂದ ಸಿಂದಗಿವರೆಗೆ ಪೈಪ್‌ಲೈನ್ ಮಾಡಿಸುವ ಯೋಜನೆ, ಪಟ್ಟಣದಲ್ಲಿ ಮಿನಿ ವಿಧಾನಸೌಧ ಕಟ್ಟಡದ ಮಂಜೂರು, ರಸ್ತೆ ನಿರ್ಮಾಣ ಸೇರಿದಂತೆ 36 ಕಾಮಗಾರಿಗಳಿಗೆ ಒಟ್ಟು 165 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ಕೆಲ ಕಾಮಗಾರಿಗಳು ಕೆಲಸ ಪ್ರಾರಂಭವಾಗಿದ್ದು, ಕೆಲವು ಟೆಂಡರ್ ಆಗಿದ್ದು, ಚುನಾವಣಾ ನೀತಿ ಸಂಹಿತೆ ಇರುವುದರಿಂದ ಚುನಾವಣೆ ನಂತರ ಕೆಲಸ ಪ್ರಾರಂಭವಾಗುತ್ತವೆ ಎಂದು ಹೇಳಿದರು.
1994ರಲ್ಲಿ ಸಚಿವನಿದ್ದ ಸಂದರ್ಭದಲ್ಲಿ ಪಟ್ಟಣದ ಜನತೆಗೆ ಕುಡಿಯುವ ಪೂರೈಸಲು ಪಟ್ಟಣದಲ್ಲಿ ಕೆರೆ ನಿರ್ಮಾಣ ಮಾಡಲಾಯಿತು. 8 ಕಿ.ಮೀ. ದೂರದಿಂದ ಪೈಪ್‌ಲೈನ್ ಮಾಡಿ ಕೆರೆಗೆ ನೀರು ತರಲಾಯಿತು. ಈಗ ನೀರಿನ ಅಭಾವವಿದೆ. ಈಗ 27.10 ಕೋಟಿ ರೂ. ವೆಚ್ಚದಲ್ಲಿ ಪೈಪ್ ಲೈನ್ ಮಾಡಿ ಬಳಗಾನೂರ ಕೆರೆಯಿಂದ ಸಿಂದಗಿಗೆ ನೀರು ತರಲಾಗುವುದು. ಸಿಂದಗಿಗೆ ಏಪ್ರಿಲ್-ಮೇ ತಿಂಗಳಲ್ಲಿ ನೀರು ಬರುತ್ತದೆ ಎಂದು ಹೇಳಿದರು.
ಪಟ್ಟಣದ ಜನತೆಗಾಗಿ 3 ಉದ್ಯಾನ ಮಾಡಲಾಗಿದೆ. ಇನ್ನೂ 2-3 ಉದ್ಯಾನ ಮಾಡಲಾಗುವುದು. ಪಟ್ಟಣದಲ್ಲಿ ಮಿನಿವಿಧಾನ ಸೌಧ ನಿರ್ಮಾಣಕ್ಕಾಗಿ 9.75 ಕೋಟಿ ರೂ. ಹಣ ಮಂಜೂರಾಗಿದೆ. ಈ ವಿಷಯ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯವಿರುವದರಿಂದ ಕಾಮಗಾರಿ ಪ್ರಾರಂಭವಾಗಿಲ್ಲ. ಇನ್ನೆನು ಕೆಲ ದಿನಗಳಲ್ಲಿ ಪ್ರಕರಣ ಇತ್ಯರ್ಥವಾಗಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗುವುದು. ಪಟ್ಟಣದಲ್ಲಿ ವಿದ್ಯುತ್, ಸಿಸಿ ರಸ್ತೆ, ಒಳಚರಂಡಿ, ಕುಡಿಯುವ ನೀರು ಪೂರೈಸಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಶಿವಪ್ಪಗೌಡ ಬಿರಾದಾರ, ಸೋಮುಗೌಡ ಬಿರಾದಾರ, ಶಿರುಗೌಡ ಬಿರಾದಾರ, ಶರಣಪ್ಪಣ್ಣ ಕುರಡೆ, ಅಶೋಕ ಮನಗೂಳಿ, ಸಿದ್ದಣ್ಣ ಚೌಧರಿ ಕನ್ನೋಳ್ಳಿ, ನಿಂಗನಗೌಡ ಬಿರಾದಾರ, ಮಂಜು ಬಿಜಾಪುರ, ಶ್ರೀಕಾಂತ ಸೋಮಜಾಳ, ಸಲೀಮ ಜುಮನಾಳ ಇದ್ದರು.