ಸಿಂದಗಿ: ಪಟ್ಟಣದಲ್ಲಿ ಕಾಯಿಪಲ್ಲೆ, ಹಣ್ಣು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಒದಗಿಸಬೇಕು ಎಂದು ಸ್ಥಳೀಯ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ತರಕಾರಿ ಮತ್ತು ಹಣ್ಣು ಹಂಪಲು ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದಿಂದ ಭಾಗವಾನರು ಹಾಗೂ ಮಾರಾಟಗಾರರು ಶನಿವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ತಮ್ಮ ಕಾಯಿಪಲ್ಲೆ, ಹಣ್ಣು ಮಾರಾಟ ಸಂಪೂರ್ಣ ಬಂದ್ ಮಾಡಿ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ಸ್ವಾಮಿ ವಿವೇಕಾನಂದ ವೃತ್ತದ ಮಾರ್ಗವಾಗಿ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.
ಪ್ರತಿಭಟನಾಕಾರರು ತಹಶೀಲ್ದಾರ್ ಬಸವರಾಜ ಕಡಕಬಾವಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಶೀಘ್ರದಲ್ಲಿ ಸುಸಜ್ಜಿತ ಕಾಯಿಪಲ್ಲೆ, ಹಣ್ಣು ಮಾರಾಟ ಮಾರುಕಟ್ಟೆ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪುರಸಭೆ ಮಾಜಿ ಸದಸ್ಯ ಇಕ್ಬಾಲ್ ತಲಕಾರಿ ಮಾತನಾಡಿ, ಪಟ್ಟಣದಲ್ಲಿ ಕಾಯಿಪಲ್ಲೆ ಮತ್ತು ಹಣ್ಣು ಮಾರಾಟ ಮಾಡುವವರಿಗೆ ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲಿನ ಹಳೆ ಪ್ರವಾಸಿ ಮಂದಿರದದ ಸ್ಥಳದಲ್ಲಿ ಅಥವಾ ಈಗ ಖಾಲಿ ಇರುವ ಹಳೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸುಸಜ್ಜಿತ ಮತ್ತು ಸೂಕ್ತ ಮಾರುಕಟ್ಟೆ ನಿರ್ಮಾಣ ಮಾಡಿ ಕೊಡಿ ಎಂದು ಬಹು ದಿನಗಳಿಂದ ಹಿಂದಿನ ಶಾಸಕರಿಗೆ, ಸಚಿವ ಎಂ.ಸಿ. ಮನಗೂಳಿ ಅವರಿಗೆ, ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಹಣ್ಣು ಮಾರಾಟ ಮತ್ತು ಟಿಪ್ಪು ಸುಲ್ತಾನ್ ವೃತ್ತದಿಂದ ಪುರಸಭೆ ಹತ್ತಿರದ ಭೀಮಾಶಂಕರ ಮಠದವರೆಗಿನ ರಸ್ತೆ ಬದಿಗಳಲ್ಲಿ ಕಾಯಿಪಲ್ಲೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಈ ರಸ್ತೆ ಮಾರ್ಗದಲ್ಲಿ ಮಟನ್ ಮಾರುಕಟ್ಟೆ ಇದೆ. ಇದರಿಂದ ಮತ್ತು ಪುರಸಭೆ ಎದುರಿನಲ್ಲಿನ ದೊಡ್ಡ ಗಟಾರ್ ನೀರಿನಿಂದ ಕಾಯಿಪಲ್ಲೆ ಮಾರಾಟ ಮಾಡಲು ತೊಂದರೆಯಾಗುತ್ತಿದೆ ಎಂದು ಸಮಸ್ಯೆ ತೋಡಿಕೊಂಡರು.
ಪ್ರತಿವರ್ಷ ಮಾರಾಟಗಾರರಿಂದ 8ರಿಂದ 10 ಲಕ್ಷ ರೂ. ಪುರಸಭೆಗೆ ಆದಾಯವಿದೆ. ಆದರೆ ಮಾರುಕಟ್ಟೆ ನಿರ್ಮಾಣಕ್ಕಾಗಿ ಪುರಸಭೆ ಆಡಳಿತ ಮತ್ತು ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಜು. 21ರಂದು ರವಿವಾರ ಸಂತೆ ಕೂಡಾ ಬಂದ್ ಇರುತ್ತದೆ. ರೈತರು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಅಶೋಕ ವಾರದ, ಪಿಕೆಪಿಎಸ್ ಅಧ್ಯಕ್ಷ ಶಾಂತು ಬಿರಾದಾರ ಮಾತನಾಡಿದರು. ಅಧ್ಯಕ್ಷ ಸೈಫನ್ ನಾಟೀಕಾರ, ಉಪಾಧ್ಯಕ್ಷ ಹಾಜಿಗುಲಾಬಸಾಬ ಮರ್ತೂರ, ಬಸೀರಸಾಬ ಮರ್ತೂರ, ಬಂದೇನವಾಜ ಶಾಪುರ, ರಾಜು ಖೇಡ, ಮಹೀಬುಬಸಾಬ ಅಳ್ಳೋಳ್ಳಿ ಹಮಿದಾ ಅಳ್ಳೊಳ್ಳಿ, ಜೈಪುನ್ ಬಮ್ಮನಜೋಗಿ, ಖಾಜಾಮಾ ಮರ್ತೂರ, ಮಹಾದೇವಿ ಮನ್ನಾಪುರ, ಗುರುತಾಯಿ ಹಿರೇಮಠ ಸೇರಿದಂತೆ ಕಾಯಿಪಲ್ಲೆ ಮತ್ತು ಹಣ್ಣು ಮಾರಾಟಗಾರರು, ಬಾಗವಾನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.