ಸಿಂದಗಿ: ತಾಲೂಕಿನಲ್ಲಿ ಸರಣಿ ಮನೆ-ಅಂಗಡಿ ಕಳ್ಳತನವಾಯಿತು. ಈಗ ಖದೀಮರು ದೇವಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ದೇವಾಲಯದಲ್ಲಿನ ನಿಧಿ ಇರಬಹುದು ಎಂಬ ಉಹೆ ಮೇರೆಗೆ ಪುರಾತನ ದೇವಾಲಯದ ಅನೇಕ ಅವಶೇಷಗಳನ್ನು ಹಾಳುಗೆಡವಿ ಕಳ್ಳತನ ಮಾಡಲು ಪ್ರಯತ್ನಸಿದ ಘಟನೆ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ವೇಳೆ ಅಮಾವಾಸ್ಯೆ ಪ್ರಾರಂಭದಲ್ಲಿ ನಡೆದಿದೆ.
ಕಕ್ಕಳಮೇಲಿ ಗ್ರಾಮದಲ್ಲಿ ಭೂಗತದಲ್ಲಿರುವ ಕಲ್ಯಾಣದ ಕಲಚೂರಿಗಳ ಕಾಲದ ಪುರಾತತ್ವ ದೇವಾಲಯ ಶಂಭುಲಿಂಗೇಶ್ವರ ದೇವಾಲಯಕ್ಕೆ ನಿಧಿಗಳ್ಳರು ಕನ್ನ ಹಾಕಿದ್ದಾರೆ. ಈ ದೇವಸ್ಥಾನ ಗ್ರಾಮ ಬಿಟ್ಟು ಸುಮಾರು 2 ಕಿ.ಮೀ. ದೂರವಿದ್ದು ಸಂಪೂರ್ಣ ನಿರ್ಜನ ಪ್ರದೇಶವಾಗಿದೆ. ಇದನ್ನೇ ಗಾಳವಾಗಿಟ್ಟುಕೊಂಡ ಖದೀಮರು ದೇವಸ್ಥಾನಕ್ಕೆ ನುಗ್ಗಿ ಶಿವಲಿಂಗನ ಮುಂದಿರುವ ನಂದಿ ವಿಗ್ರಹದ ಕೆಳಗೆ ನಿಧಿ ಇರಬಹುದು ಎಂದು ತಿಳಿದು ನಂದಿ ವಿಗ್ರಹವನ್ನು ಕಿತ್ತಿ ಬೇರೆ ಕಡೆಗಿಟ್ಟು ನಿಧಿ ಹುಡುಕಾಡಿದ್ದು ಅಷ್ಟರಲ್ಲಿ ಬೇರೊಂದು ಶಬ್ದ ಬಂದಿರುವ ಕಾರಣ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಶಂಖೀಸಲಾಗಿದೆ.
ಈ ಹಿಂದೆ ಈ ದೇವಸ್ಥಾನಕ್ಕೆ ಸಂಬಂಧಿಸಿದ ಅನೇಕ ವಿಗ್ರಹಗಳನ್ನು ನಿಧಿ ಆಸೆಗಾಗಿ ಭಗ್ನಗೊಳಿಸಿದ್ದಾರೆ. ಐತಿಹಾಸಿಕ ನೆಲೆ ಹೊಂದಿರುವ ಈ ದೇವಾಲಯಕ್ಕೆ ಸೂಕ್ತ ರಕ್ಷಣೆಯ ವ್ಯವಸ್ಥೆ ಇಲ್ಲದಿರುವುದೆ ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ. ಗ್ರಾಮದಿಂದ ದೂರವಿರುವ ಕಾರಣ ಅನೇಕ ವರ್ಷಗಳ ಹಿಂದೆ ಊರಿನಲ್ಲಿಯೆ ಜನರ ಅನಕೂಲಕ್ಕಾಗಿ ಶಂಭುಲಿಂಗೇಶ್ವರ ದೇವಾಲಯ ನಿರ್ಮಾಣ ಮಾಡಲಾಗಿತ್ತು. ಇದರಿಂದ ಊರ ಹೊರ ಹೊರಗಿನ ದೇವಾಲಯದ ಜೀರ್ಣೋದ್ಧಾರದ ಕಡೆ ಯಾರು ಗಮನ ಹರಿಸಿಲ್ಲ. ಇದರ ಬಗ್ಗೆ ಅನೇಕ ಸಂಶೋಧನಾ ವಿದ್ಯಾರ್ಥಿಗಳು ಬಂದು ಈ ದೇವಸ್ಥಾನದ ಕುರಿತಾಗಿ ಮಾಹಿತಿ ಸಂಗ್ರಹಿಸಿದ್ದರು ಎನ್ನಲಾಗಿದೆ.
ಪುರಾತತ್ವ ಇಲಾಖೆ ನಿರ್ಲಕ್ಷ್ಯ: ಈ ದೇವಾಲಯ ಕಲ್ಯಾಣದ ಕಲಚೂರಿಗಳಿಂದ ನಿರ್ಮಾಣವಾಗಿತ್ತು ಎಂಬುದು ಇತಿಹಾಸದ ಮೂಲಕ ತಿಳಿದು ಬರುತ್ತದೆ. ಈ ದೇವಸ್ಥಾನದಲ್ಲಿ ಗರ್ಭಗೃಹ, ನವ ರಂಗಗಳು, ಉಬ್ಬು ಶಿಲೆಗಳು, ಆಕರ್ಷಣಿಯ ವೃತ್ತಾಕಾರದ ಕಂಬಗಳು, ಶಿವಲಿಂಗ, ದೇವಕೋಷ್ಟಕಗಳು ಸೇರಿದಂತೆ ಅನೇಕ ಐತಿಹಾಸಿಕ ಕುರುಹುಗಳು ಇಲ್ಲಿ ಕಂಡು ಬರುತ್ತವೆ. ಇವೆಲ್ಲವುಗಳು ಇದ್ದರು ಕೂಡಾ ಪುರಾತತ್ವ ಇಲಾಖೆ ಈ ದೇವಸ್ಥಾನದ ಜೀಣೊರ್ದ್ಧಾರಕ್ಕೆ ಒಮ್ಮೆಯೂ ಮುಂದಾಗಿಲ್ಲ.
ಗ್ರಾಮದ ಯುವಕರು ಹಲವು ಬಾರಿ ಮನವಿ ಮಾಡಿಕೊಂಡರು ಇಲಾಖೆ ಕ್ಯಾರೆ ಎಂದಿಲ್ಲ. ಈ ರೀತಿ ದೇವಾಲಯದ ಅವಶೇಷಗಳು ಹಾಳಾಗುವುದಕ್ಕೆ ಇಲಾಖೆಯ ದಿವ್ಯ ನಿರ್ಲಕ್ಷ್ಯವೆ ಕಾರಣ ಎನ್ನುತ್ತಾರೆ ಗ್ರಾಮದ ಯುವಕರಾದ ಅನಿಲದೇವ ದಶವಂತ ಮತ್ತು ಮಹಾಂತಯ್ಯ ಮಠಪತಿ.
ಈ ಘಟನೆ ಅಮಾವಾಸ್ಯೆ ದಿನದಂದು ನಡೆದಿದ್ದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಪದೇ ಪದೇ ಈ ದೇವಸ್ಥಾನ ಅವಶೇಷಗಳು ನಿಧಿಗಳ್ಳರಿಂದ ಹಾಳಾಗುತ್ತಿವೆ. ಈ ಗ್ರಾಮದ ಐತಿಹಾಸಿಕ ಕುರುಹುಗಳನ್ನು ಹೊಂದಿರುವ ಈ ದೇವಸ್ಥಾನಕ್ಕೆ ಸೂಕ್ತ ರಕ್ಷಣೆ ಬೇಕು. ಪುರಾತತ್ವ ಇಲಾಖೆ ಈ ಕಡೆಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ದೇವಸ್ಥಾನ ನಿಧಿಗಳ್ಳರ ಹಾವಳಿಗೆ ತುತ್ತಾಗಿ ಅಳಿವಿನಂಚಿಗೆ ಬರುವುದರಲ್ಲಿ ಸಂದೇಹವಿಲ್ಲ.
•
ಸಿದ್ದರಾಮ ಬಿರಾದಾರ, ಯುವ ಮುಖಂಡ