ಸಿಂದಗಿ: ಕೆಂಭಾವಿಯಿಂದ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ರೈತರು ಶುಕ್ರವಾರ ತಾಲೂಕಿನ ರಾಂಪುರ ಪಿ.ಎ. ಗ್ರಾಮದಲ್ಲಿರುವ ಕೆಬಿಜೆಎನ್ನೆಲ್ ಮುಖ್ಯ ಎಂಜಿನಿಯರ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮುಖ್ಯ ಅಭಿಯಂತರ ರಂಗಾರಾಮ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ರೈತ ಮುಖಂಡ ಚಂದ್ರಶೇಖರ ದೇವರೆಡ್ಡಿ ಮಾತನಾಡಿ, ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸಬೇಕು ಎಂದು ರೈತರು ಜು. 23 ಹಾಗೂ 29 ಮತ್ತು ಅ. 2ರಂದು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಾಲುವೆಗೆ ನೀರು ಹರಿಸಿ ಮತ್ತೆ ಬಂದ್ ಮಾಡಿದ್ದಾರೆ. ಮೊದಲನೇ ಸಲ ಕಾಲುವೆ ಗೇಟ್ ದುರಸ್ತಿಗೆ ಎಂದು, ಎರಡನೇ ಸಲ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಯಾರೋ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ಶವ ಸಿಗುವವರೆಗೂ ನೀರು ಬಂದ್ ಮಾಡಿದ್ದಾರೆ. ಹೀಗೆ ಒಂದಿಲ್ಲ ಒಂದು ನೆಪ ಮಾಡಿ ಕಾಲುವೆಗೆ ನೀರು ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಡ್ಯಾಂಗಳಲ್ಲಿ ಸಾಕಷ್ಟು ನೀರು ಸಂಗ್ರಹವಿದ್ದರೂ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಬಿಡುತ್ತಿಲ್ಲ. ಸಿಂದಗಿ ತಾಲೂಕಿನ ಬಹು ಭಾಗದಲ್ಲಿ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ಅವಲಂಬಿತ ರೈತರಿದ್ದಾರೆ. ತಾಲೂಕಿನಲ್ಲಿ ಸಕಾಲದಲ್ಲಿ ಮಳೆ ಬಾರದಿರುವುದರಿಂದ ಬರಗಾಲ ಛಾಯೆ ಮೂಡಿದೆ. ರೈತರು ಬಿತ್ತನೆ ಮಾಡಿ ಬೆಳೆದ ಬೆಳೆ ಒಣಗುತ್ತಿವೆ. ಕಾಲುವೆಗೆ ಅಗಸ್ಟ್ ಕೊನೆ ವಾರದವರೆಗೂ ನೀರು ಬಿಡುತ್ತಾರೆ ಎಂಬ ಅಧಿಕಾರಿಗಳ ಭರವಸೆಯನ್ನು ರೈತರು ನಂಬಿದ್ದರು. ಆದರೆ ಕಾಲುವೆಗೆ ನೀರು ಬಿಟ್ಟು ಮತ್ತೆ ಬಂದ್ ಮಾಡಿದ್ದರಿಂದ ರೈತರ ಜಮೀನುಗಳಿಗೆ ನೀರು ಇಲ್ಲದಂತಾಗಿದೆ. ಆದ್ದರಿಂದ ಕೂಡಲೇ ಕಾಲುವೆಗೆ ನೀರು ಬಿಡಬೇಕು ಎಂದು ಆಗ್ರಹಿಸಿದರು.
ವಿನಾಕಾರಣ ಕಾಲುವೆಗಳನ್ನು ಬಂದ್ ಮಾಡಿದ್ದಲ್ಲಿ ಮುಂಬುರುವ ದಿನಗಳಲ್ಲಿ ರಸ್ತೆ ಬಂದ್ ಮಾಡಿ ಕೆಬಿಜೆಎನ್ನೆಲ್ ಮುಖ್ಯ ಎಂಜಿನಿಯರ್ ಕಾರ್ಯಾಲಯಕ್ಕೆ ಬೀಗ ಜಡಿದು ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರಾದ ಸಿದ್ದನಗೌಡ ದೇವರೆಡ್ಡಿ, ಹನುಮಂತ ಮಸರಕಲ್ಲ, ಸಿದ್ದಪ್ಪ ಪೂಜಾರಿ, ನಾನಾಗೌಡ ಬನ್ನೆಟ್ಟಿ, ರಾಯಗೊಂಡ ಯೆಳಕೋಟಿ, ಸೈಫನ್‌ಸಾಬ ಹದರಿ, ಶಿವಪ್ಪ ದೇವರೆಡ್ಡಿ, ಶ್ರೀಶೈಲ ಕಲ್ಲೂರ, ರಾಜಶೇಖರ ಸಾಲೋಟಗಿ, ಶಾಂತಪ್ಪ ಅಂದೇವಾಡಿ, ರಮೇಶ ಇಂಗಳಗಿ ಸೇರಿದಂತೆ ತಾಲೂಕಿನ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.