ರಮೇಶ ಪೂಜಾರ
ಸಿಂದಗಿ: ಹಳ್ಳಿಗಳ ಅಭಿವೃದ್ಧಿ ಜೊತೆಗೆ ಪಟ್ಟಣದ ಅಭಿವೃದ್ಧಿಗೆ ಸರಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದರೂ ಅಲ್ಲಿ ಅಭಿವೃದ್ಧಿ ಮರಿಚಿಕೆಯಾಗಿವೆ. ಪಟ್ಟಣದ 12ನೇ ವಾರ್ಡ್‌ನಲ್ಲಿನ ರೇಣುಕಾ ನಗರ (ಗೊಲ್ಲರ ಓಣಿ) ಅಭಿವೃದ್ಧಿ ಕಾಣದೆ ಕೊಳಚೆ ಪ್ರದೇಶವಾಗಿರುವುದೇ ಸಾಕ್ಷಿಯಾಗಿದೆ.
ಇಲ್ಲಿಯ ಪುರಸಭೆ ನಿರ್ಲಕ್ಷ್ಯ ಧೋರಣೆಯಿಂದಾಗಿ ರೇಣುಕಾ ನಗರ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಇಲ್ಲಿ ನಿರ್ಮಿಸಿದ ಚರಂಡಿಗಳು ಮುಚ್ಚಿ ಹೋಗಿವೆ. ಎಲ್ಲಿ ನೋಡಿದಲ್ಲಿ ಕೊಳಚೆ ನೀರು ನಿಂತ ಗುಂಡಿಗಳು ಕಾಣುತ್ತವೆ. ಹೀಗಾಗಿ ಸ್ವಚ್ಛತೆ ಎನ್ನುವುದು ಮಾಯವಾಗಿ ದುರ್ನಾತ ಹೊರಹೊಮ್ಮುತ್ತಿದೆ.
ರೇಣುಕಾ ನಗರದಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲ. ಹೀಗಾಗಿ ಕಲುಷಿತ ನೀರು ರಸ್ತೆ ಮೇಲೆ ಹರಿದು ಅಲ್ಲಿ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಇಲ್ಲಿನ ಅಂಗನವಾಡಿ ಕೇಂದ್ರದ ಸೂತ್ತಲೂ ಕೊಳಚೆ ನೀರಿನ ಗುಂಡಿಗಳಿವೆ. ಇಲ್ಲಿ ಮಕ್ಕಳು ಕಲಿಕೆಗೆ ಅಂಗನವಾಡಿ ಕೇಂದ್ರಕ್ಕೆ ಬರುತ್ತಾರೆ. ಇಂಥ ಅನಾರೋಗ್ಯಕರ ವಾತಾವರಣದಲ್ಲಿ ಕಲಿಕೆಗೆ ಬಂದ ಮಕ್ಕಳ ಆರೋಗ್ಯ ಮೇಲೆ ಬಿರುವ ದುಷ್ಪ‌್ಪರಿಣಾಮಗಳ ಬಗ್ಗೆ ಅಂಗನವಾಡಿ ಕೇಂದ್ರ ನಡೆಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಸು ಅಭಿವೃದ್ಧಿ ಯೋಜನಾ ಕಚೇರಿ ಅಧಿಕಾರಿಗಳಾಗಲಿ, ಪಟ್ಟಣದ ಸ್ವಚ್ಛತೆ ಕಾಪಾಡುವ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇಲ್ಲಿ ಪುರಸಭೆಯಿಂದ 2008ರಲ್ಲಿ ಸಮುದಾಯ ಶೌಚಾಲಯ ನಿರ್ಮಾಣವಾಗಿದೆ. ಆದರೆ ಇದು ಚಾಲನೆಯಾಗಿಲ್ಲ. ಇಲ್ಲಿ ನೀರಿನ ಕೊರತೆ ಮತ್ತು ಸಮರ್ಪಕವಾಗಿ ಒಳಚರಂಡಿ ಇಲ್ಲದೇ ಇರುವ ಕಾರಣ ಪ್ರಾರಂಭವಾಗಿಲ್ಲ. ಹೀಗಾಗಿ ಸಮುದಾಯ ಶೌಚಾಲಯ ಹಾಳಾಗಿ ಹೋಗುತ್ತಿದೆ. ಇಲ್ಲಿನ ಹೆಣ್ಣು ಮಕ್ಕಳಿಗೆ ಶೌಚಕ್ಕೆ ಹೋಗಲು ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಸಮುದಾಯ ಶೌಚಾಲಯ ದುರಸ್ತಿ ಮಾಡಿ, ನೀರಿನ ಸೌಲಭ್ಯ, ಡ್ರೈನೇಜ್ ಸೌಲಭ್ಯ ಪ್ರಾರಂಭಿಸಬೇಕು ಎಂದು ನಿವಾಸಿಗಳಾದ ಯಲ್ಲವ್ವ ಗೊಲ್ಲರ, ಲಕ್ಷ್ಮೀಬಾಯಿ ಮೋರಟಗಿ, ಗುರವ್ವ ದೇವರಹಿಪ್ಪರಗಿ, ಲಕ್ಷ್ಮೀಬಾಯಿ ಬಾಗೇ ವಾಡಿ, ಶಾಂತವ್ವ ನಾಗಠಾಣ ಆಗ್ರಹಿಸಿದ್ದಾರೆ.
ಪಟ್ಟಣದ 12ನೇ ವಾರ್ಡ್‌ನಲ್ಲಿನ ರೇಣುಕಾ ನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಆಗರವಾಗಿದೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಕೊಳಚೆ ನೀರು ಹೋಗಲು ಚರಂಡಿ ವ್ಯವಸ್ಥೆಯಿಲ್ಲ. ಮೊದಲು ಮಾಡಿದ ಚರಂಡಿಗಳು ಮುಚ್ಚಿಹೋಗಿವೆ. ರಸ್ತೆ ಮೇಲೆನೆ ಕೊಳಚೆ ನೀರು ಹರಿಯುತ್ತವೆ. ಕೊಳಚೆ ನೀರಿನ ಗುಂಡಿಗಳಿವೆ. ಕೂಡಲೇ ಪುರಸಭೆ ಆಢಳಿತ ಕೊಳಚೆ ಗುಂಡಿಗಳನ್ನು ಮುಚ್ಚಿಸಬೇಕು. ಹೊರ ಮತ್ತು ಒಳ ಚರಂಡಿ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಸಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಹಾಗೂ ತಹಶೀಲ್ದಾರ್‌ರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರಾಮು ಮೋರಟಗಿ, ರಾಖೇಶ ಬಾಗೇವಾಡಿ, ರಾಜು ಗೊಲ್ಲರ ಎಂದು ತಮ್ಮ ಸಮಸ್ಯೆ ಕುರಿತು ಪತ್ರಿಕೆಗೆ ತಿಳಿಸಿದ್ದಾರೆ.