ಸಿಂದಗಿ: ಗಣೇಶ ಹಬ್ಬದಲ್ಲಿ ಬನಾಯೆಂಗೆ ಮಂದಿರ ಹಾಡನ್ನು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ನಿಷೇಧ ಮಾಡುವ ಮೂಲಕ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ತಾಲೂಕು ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿ ತಾಲೂಕಾಡಳಿತ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ ವಿಶ್ವ ಹಿಂದು ಪರಿಷತ್ ಬೆಳಗಾವಿ ವಿಭಾಗದ ಪ್ರಮುಖ ಶ್ರೀಮಂತ ದುದ್ದಗಿ ಮಾತನಾಡಿ, ಬನಾಯೆಂಗೆ ಮಂದಿರ ಹಾಡನ್ನು ವಿಜಯಪುರ ಜಿಲ್ಲೆ ಹೊರತು ಪಡಿಸಿ ರಾಜ್ಯದ ಯಾವ ಜಿಲ್ಲೆಗಳಲ್ಲಿ ನಿಷೇಧ ಮಾಡಿಲ್ಲ. ಆದರೆ ವಿಜಯಪುರ ಜಿಲ್ಲೆಯಲ್ಲಿ ನಿಷೇಧ ಮಾಡಿದ್ದಾರೆ. ಹಾಡಿನಿಂದ ಗಲಬೆಯಾಗುತ್ತದೆ ಎಂದು ನೆಪ ಮಾಡಿ ಹಾಡನ್ನು ನಿಷೇಧಿಸಿದ್ದಾರೆ. ಗಲಭೆಯಾಗದಂತೆ ಪೊಲೀಸ್ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕೆ ಹೊರತು ಹಾಡನ್ನು ನಿಷೇಧ ಮಾಡಬಾರದು ಎಂದು ಆಕ್ರೋಷ ವ್ಯಕ್ತ ಪಡಿಸಿದರು.
ವಿಜಯಪುರ ಜಿಲ್ಲೆ ಪಾಕಿಸ್ತಾನದಲ್ಲಿದೆಯೆಂದು ಜಿಲ್ಲಾಧಿಕಾರಿಗಳು ತಿಳಿದುಕೊಂಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸಿ ವಿಜಯಪುರ ಜಿಲ್ಲೆ ಭಾರತ ದೇಶದಲ್ಲಿದೆಯೆಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿ ಗಣೇಶ ಹಬ್ಬದಲ್ಲಿ ಬನಾಯೆಂಗೆ ಮಂದಿರ ಹಾಡಿಗೆ ಅನುಮತಿ ನೀಡುವಂತೆ ಸೂಚನೆ ನೀಡಬೇಕು ಎಂದು ಅವರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ವಿಶ್ವ ಹಿಂದು ಪರಿಷತ್ ತಾಲೂಕಾಧ್ಯಕ್ಷ ಡಾ| ಶರಣಗೌಡ ಬಿರಾದಾರ, ಕಾರ್ಯದರ್ಶಿ ಶೇಖರಗೌಡ ಹರನಾಳ ಮಾತನಾಡಿ, ಗಣೇಶ ಹಬ್ಬದಲ್ಲಿ ಹಾಡಿಗೆ ನಿಷೇಧ ಹೇರುವ ಮೂಲಕ ಹಿಂದುಗಳ ಹಕ್ಕನ್ನು ಕಸಿದುಕೊಂಡಂತಾಗಿದೆ. ನಾವೇನು ದೇಶ ದ್ರೋಹಿ ಕೆಲಸ ಮಾಡುತ್ತಿಲ್ಲ. ದೇಶ ದ್ರೋಹದ ಹಾಡುಗಳನ್ನು ಹಚ್ಚುತ್ತಿಲ್ಲ. ಬನಾಯೆಂಗೆ ಮಂದಿರ ಹಾಡಿನಲ್ಲಿ ಯಾವ ಧರ್ಮಕ್ಕೂ ನೋವು ಉಂಟು ಮಾಡುವ ಶಬ್ದಗಳಿಲ್ಲ. ಹಿಂದುಗಳಿಗೆ ಹಾಗೂ ಶ್ರೀರಾಮನ ಬಗ್ಗೆ ಸ್ವಾಭಿಮಾನದ ಹಾಡನ್ನು ವಿನಾಕಾರಣ ನಿಷೇಧ ಮಾಡುವ ಮೂಲಕ ಹಿಂದುಗಳ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ. ಹಾಡಿನ ಮೇಲೆ ಹಾಕಿರುವ ನಿಷೇಧ ಹಿಂದಕ್ಕೆ ಪಡೆಯದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಸವರಾಜ ಕುದರಗೊಂಡ, ಪರಶುರಾಮ ಹಡಪದ, ಗುಂಡು ಕೋಟಾರಗಸ್ತಿ, ಯಮನಪ್ಪ ಚೌಧರಿ, ಎಂ.ಎಂ. ಬಡಿಗೇರ, ಧರು ಕಂಟಿಗೊಂಡ, ಶಿವಾಜಿ ಮಣೂರ, ರವಿ ಭಜಂತ್ರಿ, ಶಿವಾನಂದ ಪಾಟೀಲ, ರಾಜು ರುಕುಂಪುರ, ಪರಮಾನಂದ ಬಿರಾದಾರ, ಶ್ರೀಶೈಲ ಪಡಶೆಟ್ಟಿ, ಶ್ರೀಶೈಲಗೌಡ ಬಮ್ಮನಜೋಗಿ ಇದ್ದರು.