ಬೆಂಗಳೂರು: ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವಿಜಯಪುರ ಜಿಲ್ಲೆ ಸಿಂದಗಿ ಕ್ಷೇತ್ರದ ಶಾಸಕ ಎಂ.ಸಿ.ಮನಗೂಳಿ ಅವರು ತಡರಾತ್ರಿ ನಿಧನರಾದರು.
ಅನಾರೋಗ್ಯ ಕಾರಣದಿಂದ ಎರಡು ಮೂರು ವಾರಗಳ ಹಿಂದೆ ಮನಗೂಳಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಲಬುರಗಿಯಿಂದ ವಿಶೇಷ ವಿಮಾನದಲ್ಲಿ ಅವರನ್ನು ಬೆಂಗಳೂರಿಗೆ ತರಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ರಾತ್ರಿ ಒಂದು ಗಂಟೆ ಸುಮಾರಿಗೆ ಅವರು ನಿಧನರಾಗಿದ್ದಾರೆ.
ಇದನ್ನೂ ಓದಿ:ಫಲಪ್ರದವಾಗಲಿ ವಿಧಾನಮಂಡಲ ಅಧಿವೇಶನ
ಸಿಂದಗಿ ವಿಧಾನಸಭಾ ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕರಾಗಿದ್ದ ಅವರು ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ತೋಟಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಮಲ್ಲಪ್ಪ ಚನ್ನವೀರಪ್ಪ ಮನಗೂಳಿ (ಎಂ.ಸಿ.ಮನಗೂಳಿ) ಅವರು ಸೆಪ್ಟಂಬರ್ 29, 1937 ರಂದು ಜನಿಸಿದ್ದರು. 1994 ರಲ್ಲಿ ಮೊದಲ ಬಾರಿಗೆ ಸಿಂದಗಿ ಕ್ಷೇತ್ರದಿಂದ ಜನತಾದಳದ ಶಾಸಕರಾಗಿದ್ದ ಅವರು, ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು.
ಇದನ್ನೂ ಓದಿ: ಒಂದು ದೇಶ; ಒಂದು ಚುನಾವಣೆ ಚರ್ಚೆ
1994 ರ ವಿಧಾನಸಭೆ ಚುನಾವಣೆ ಸೇರಿದಂತೆ 6 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, 1994 ಮತ್ತು 2018 ಎರಡು ಬಾರಿ ವಿಜಯ ಸಾಧಿಸಿ, ಎರಡು ಬಾರಿಯೂ ಮಂತ್ರಿ ಆಗಿದ್ದರು. 4 ಬಾರಿ ಪರಾಭವಗೊಂಡಿದ್ದರು.
ಪತ್ನಿ, ಓರ್ವ ಪುತ್ರಿ, ನಾಲ್ವರು ಪುತ್ರರು ಸೇರಿ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.