Advertisement

ಲಾಕ್‌ಡೌನ್‌: ಹೊಲದಲ್ಲೆಲ್ಲೇ ಉಳಿದ ಕ್ಯಾಪ್ಸಿಕಂ

04:55 PM May 07, 2020 | Naveen |

ಸಿಂದಗಿ: ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ಡಾ| ಮಹೇಶ ಹಿರೇಮಠ ಅವರು ತೋಟದ ಶೆಡ್‌ನೆಟ್‌ನಲ್ಲಿ ಕ್ಯಾಪ್ಸಿಕಂ ಬೆಳೆದಿದ್ದು, ಲಾಕ್‌ಡೌನ್‌ದಿಂದ ಮಾರುಕಟ್ಟೆಗೆ ಸಾಗಿಸಲಾಗದೇ ಲಕ್ಷಾಂತರ ರೂ. ಹಾನಿ ಅನುಭವಿಸುವಂತಾಗಿದೆ.

Advertisement

ಡಾ| ಮಹೇಶ ಹಿರೇಮಠ ಅವರು ಬೆಂಗಳೂರಿನಲ್ಲಿ ವೃದ್ಯಕೀಯ ವೃತ್ತಿ ಮಾಡುತ್ತಿದ್ದರು. ಮುಳಸಾವಳಗಿ ಗ್ರಾಮದಲ್ಲಿ ತಂದೆಯವರು ಮಾಡಿದ ಜಮೀನಿನಲ್ಲೇ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ನಿಶ್ಚಯಿಸಿ ಕೃಷಿಯಲ್ಲಿ ತೊಡಗಿದರು. ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಅಮೋಗಿ ಹಿರೇಕುರಬರ ಅವರ ಮಾರ್ಗದರ್ಶನದಲ್ಲಿ ಒಂದು ಎಕರೆ ಜಮೀನಿನಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ವೈಜ್ಞಾನಿಕವಾಗಿ ಸುಧಾರಿಸಿದ ಶೆಡ್‌ನೆಟ್‌ನಲ್ಲಿ ಮೊದಲ ಬೆಳೆಯಾಗಿ ಕ್ಯಾಪ್ಸಿಕಂ ಬೆಳೆದಿದ್ದಾರೆ.

ಉತ್ತಮ ಇಳುವರಿ ಬಂದಿದೆ. ಮಾರುಕಟ್ಟೆಗೆ ಬೆಳೆ ಸಾಗಿಸಬೇಕೆನ್ನುವಷ್ಟರಲ್ಲಿ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಬೆಳೆ ಹೊಲದಲ್ಲೇ ಉಳಿದು ಹಾನಿ ಅನುಭವಿಸುವಂತಾಗಿದೆ. ಲಾಕ್‌ಡೌನ್‌ ಪರಿಣಾಮ ಮಹಾನಗರದ ಪಂಚತಾರ ಹೋಟೆಲ್‌ಗ‌ಳೂ ಸೇರಿದಂತೆ ದೊಡ್ಡ ದೊಡ್ಡ ಹೋಟೆಲ್‌ಗ‌ಳಲ್ಲಿ ಈ ದಪ್ಪ ಮೆಣಸಿನಕಾಯಿಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಆದರೆ, ಈಗ ದೇಶದಾದ್ಯಂತ ಹೋಟೆಲ್‌ಗ‌ಳೂ ಸಹ ಬಾಗಿಲು ಮುಚ್ಚಿವೆ. ಮದುವೆ ಸಮಾರಂಭಗಳೂ ಇಲ್ಲದಾಗಿವೆ. ಹೀಗಾಗಿ ಸ್ಥಳೀಯವಾಗಿ ಈ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ. ಇದರಿಂದ ಬೇಸತ್ತು ಶೆಡ್‌ನೆಟ್‌ನಲ್ಲಿ ಕಾಯಿಯನ್ನು ಹಾಗೆಯೇ ಬಿಟ್ಟು ಕೈ ಚೆಲ್ಲಿ ಕುಳಿತಿದ್ದಾಗಿ ಡಾ|
ಮಹೇಶ ಹಿರೇಮಠ ಅವರ ಪತ್ನಿ ಅನ್ನಪೂರ್ಣ ಹಿರೇಮಠ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಸಸಿ ನಾಟಿಯಿಂದ ಹಿಡಿದು ಗೊಬ್ಬರ, ಔಷಧದವರೆಗೆ ಸುಮಾರು 3-4 ಲಕ್ಷ ರೂ. ಖರ್ಚು ಮಾಡಿದ್ದೇವೆ. ಮನೆ ಮಂದಿಯೆಲ್ಲ ಇದಕ್ಕಾಗಿ ದುಡಿದಿದ್ದೇವೆ. ಈ ವರ್ಷ ಲಾಕ್‌ಡೌನ್‌ ಕಾರಣಕ್ಕೆ ಈವರೆಗೆ ಹಾಕಿದ ಬಂಡವಾಳ ಬಂದಿಲ್ಲ. ಈ ವರ್ಷ ಏನಿಲ್ಲವೆಂದರೂ 15- 20 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇತ್ತು. ಆದರೆ, ಈಗ ಹಾಕಿದ ಬಂಡವಾಳವೂ ಇಲ್ಲದಾಗಿದೆ. ಲಾಕ್‌ ಡೌನ್‌ ಕಾರಣಕ್ಕೆ ನಷ್ಟ ಅನುಭವಿಸುತ್ತಿರುವ ನಮ್ಮಂತಹ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕು. ಬೆಳೆ ನಷ್ಟ ತುಂಬಿಕೊಡಬೇಕು ಎಂದು ಡಾ| ಮಹೇಶ ಹಿರೇಮಠ ಮನವಿ ಮಾಡಿದರು.

ರಮೇಶ ಪೂಜಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next