ಸಿಂದಗಿ: ಸರ್ಕಾರ ಭೂ ಮಾಪಕರಿಗೆ ಮಾಸಿಕ 30 ಕಡತಗಳ ಗುರಿ ನಿಗದಿಪಡಿಸಿ ಹೊರಡಿಸಿರುವ ಸುತ್ತೋಲೆ ಹಿಂಪಡೆದು ಮೊದಲಿದ್ದ 23 ಕಡತಗಳ ಗುರಿ ಮುಂದುವರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಭೂಮಾಪನ, ಕಂದಾಯ ಮತ್ತು ಭೂ ದಾಖಲೆಗಳ ಕಾರ್ಯ ನಿರ್ವಾಹಕ ನೌಕರರ ಸಂಘದ ತಾಲೂಕು ಘಟಕ ಪದಾಧಿಕಾರಿಗಳು ಶುಕ್ರವಾರ ಕಾರ್ಯಾಲಯದಲ್ಲಿ ಕಪ್ಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.
ಭೂ ಮಾಪಕ ನೌಕರರ ಸಂಘದ ತಾಲೂಕಾಧ್ಯಕ್ಷ ವೆಂಕಟೇಶ ಕಣಜೀಕರ ಮಾತನಾಡಿ, ಹೊರಗುತ್ತಿಗೆ ಆಧಾರದ ಬಾಂದು ಸಹಾಯಕರ ನೇಮಕಾತಿ ಕೈ ಬಿಟ್ಟು, ಭೂ ಮಾಪಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಬಾಂದು ಜವಾನರ ಕಾಯಂ ಹುದ್ದೆಗಳನ್ನು ಸೃಷ್ಟಿಸಿ ಕೂಡಲೇ ನೇಮಕ ಮಾಡಬೇಕು. ಸಮಾನ ವಿದ್ಯಾರ್ಹತೆ ಹೊಂದಿರುವ ಇತರೆ ಇಲಾಖೆ ಸರ್ಕಾರಿ ನೌಕರರಿಗೆ ನೀಡುತ್ತಿರುವ ವೇತನ ಶ್ರೇಣಿಯನ್ನು ಕಂದಾಯ ಮತ್ತು ಭೂ ಮಾಪನಾ ಇಲಾಖೆ ನೌಕರರಿಗೆ ನೀಡಬೇಕು.
ಖಾಲಿಯಿರುವ ಎಲ್ಲ ಕಾರ್ಯ ನಿರ್ವಾಹಕ ಹುದ್ದೆಗಳಿಗೆ ಮುಂಬಡ್ತಿ ನೀಡಿ ಕೂಡಲೇ ಭರ್ತಿ ಮಾಡಬೇಕು ಎಂಬುದು ಸೇರಿದಂತೆ ಒಟ್ಟು 11 ಬೇಡಿಕೆ ಈಡೇರಿಕೆಗಳಿಗೆ ಆಗ್ರಹಿಸಿದರು. ಆಗಸ್ಟ್ 19ರಿಂದ 31ರವರೆಗೆ ಕಪ್ಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಇಲಾಖೆಯಲ್ಲಿ ಕಾರ್ಯ ನಿರ್ವಾಹಕ ನೌಕರರಿಗೆ ಕಡ್ಡಾಯವಾಗಿ ತಿಂಗಳಿಗೆ 30 ಪ್ರಕರಣ ವಿಲೇವಾರಿ ಮಾಡಬೇಕು ಎಂಬ ನಿಯಮ ಕೈ ಬಿಡಬೇಕು. 600 ರೂ. ಮಾಸಿಕ ನಿಗದಿತ ಪ್ರಯಾಣ ಭತ್ಯೆ ನೀಡುತ್ತಿದ್ದು, ಇದರ ಬದಲಾಗಿ 2,000 ರೂ. ನೀಡಬೇಕು. ಪ್ರತಿ ತಿಂಗಳು ನೀಡುವ ಸಾದಿಲ್ವಾರು ವೆಚ್ಚವನ್ನು 300 ರೂ. ಹೆಚ್ಚುವರಿಯಾಗಿ ನೀಡಬೇಕು. ಇತರ ಇಲಾಖೆಯಲ್ಲಿರುವಂತೆ ಸಮಾನ ವಿದ್ಯಾರ್ಹತೆ ಹೊಂದಿರುವ ಇಲಾಖೆ ನೌಕರರಿಗೆ ವೇತನ ಶ್ರೇಣಿ ನೀಡಬೇಕು ಎಂದು ಒತ್ತಾಯಿಸಿದರು.
ಮಾರ್ಗದರ್ಶಕ ಜಿ.ಎನ್. ಪಾಟೀಲ ಮಾತನಾಡಿ, ಇಲಾಖೆಯಲ್ಲಿ ಖಾಲಿಯಿರುವ ಕಾರ್ಯ ನಿರ್ವಾಹಕ ಹುದ್ದೆಗಳಿಗೆ ಕೂಡಲೇ ಮುಂಬಡ್ತಿ ನೀಡಿ ಭರ್ತಿ ಮಾಡಬೇಕು. ರ್‍ಯಾಂಕಿಂಗ್ ಆಧಾರದ ಮೇಲೆ ನೌಕರರ ವರ್ಗಾವಣೆ ಮಾಡುತ್ತಿರುವುದನ್ನು ಕೈ ಬಿಡಬೇಕು. ಪರ್ಯಾಯ ವೇತನ ಹಾಗೂ ಅಧೀಕ್ಷಕ ಹುದ್ದೆಗಳಿಗೆ ಶೇ. 100 ಮುಂಬಡ್ತಿ ನೀಡಿ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಆ. 31ರವರೆಗೆ ಕಪ್ಪು ಬ್ಯಾಡ್ಜ್ ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತ ಕರ್ತವ್ಯ ನಿರ್ವಹಿಸಲಾಗುವುದು. ಸರ್ವೇ ಸೆಟಲ್ಮೆಂಟ್ ಆಯುಕ್ತರು ಮತ್ತು ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಈ ಮೂಲಕ ಮನವಿ ಮಾಡಲಾಗುತ್ತಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಒಂದು ವೇಳೆ ಮನವಿಗೆ ಸ್ಪಂದಿಸದಿದ್ದರೆ ಸೆ. 4ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಭೂ ಮಾಪಕ ನೌಕರರ ಸಂಘದ ತಾಲೂಕು ಗೌರವಾಧ್ಯಕ್ಷ ಎಸ್.ಎಂ. ಬಳುಂಡಗಿ, ಪ್ರಧಾನ ಕಾರ್ಯದರ್ಶಿ ಎಸ್.ಆರ್. ಕೋಟೂರ, ಉಪಾಧ್ಯಕ್ಷೆ ಅಪರ್ಣಾ ಹಜೇರಿ, ಖಜಾಂಚಿ ಪ್ರಶಾಂತ ಘನಾತೆ, ತಪಾಸಕ ವಿ.ವೈ. ಹಳ್ಳಿ ಸೇರಿದಂತೆ ಸಿಬ್ಬಂದಿ ಇದ್ದರು.