ಸಿಂದಗಿ: ಪಟ್ಟಣದ ಕೆರೆ ಬಿರುಕು ಬಿಟ್ಟಿದ್ದು ಅದರ ಪುನಶ್ಚೇತನ ಕಾಮಗಾರಿ ಕೈಗೊಂಡು ಅದಕ್ಕೆ ತಂತಿ ಬೇಲಿ ನಿರ್ಮಾಣ ಮಾಡಿ ಕಾವಲುಗಾರರನ್ನು ನೇಮಿಸುವಂತೆ ಶಾಸಕ ಎಂ.ಸಿ. ಮನಗೂಳಿ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು.
ಪಟ್ಟಣದ ಕೆರೆಯ ಒಂದು ಭಾಗ ಬಿರುಕು ಬಿಟ್ಟಿರುವುದನ್ನು ವೀಕ್ಷಿಸಿದ ನಂತರ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿ ನೀರು ಸರಬರಾಜು ನಿರ್ವಹಿಸಲು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ವಹಿಸಿಕೊಡುವಂತೆ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಆ ಆದೇಶ ಬಂದ ನಂತರ ಪಟ್ಟಣದಲ್ಲಿ 24 ತಾಸು ನೀರು ಪೂರೈಕೆಗೆ ಕ್ರಮ ಕೈಗೊಳ್ಳಬಹುದು ಎನ್ನುವ ಸದುದ್ದೇಶ ಹೊಂದಲಾಗಿದೆ ಎಂದರು.
ಈ ಬಾರಿಯ ಬೇಸಿಗೆಯಲ್ಲಿ ಗ್ರಾಮೀಣ ಹಾಗೂ ಪಟ್ಟಣದ ಜನತೆಗೆ ಕುಡಿಯುವ ನೀರಿಗಾಗಿ ತೊಂದರೆಯಾಗದಂತೆ ಬೋರ್ ವೆಲ್‌ಗಳನ್ನು ದುರಸ್ತಿಗೊಳಿಸಬೇಕು. ಇಂಡಿ ಉಪ ಕಾಲುವೆಯ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಪಟ್ಟಣದ ಕೆರೆ ತುಂಬಿಸುವ ಕಾರ್ಯಕ್ಕೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಬೇಕು. ಗಣಿಹಾರ ಗ್ರಾಮಕ್ಕೆ ಬಳಗಾನೂರ ಕೆರೆಯಿಂದ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಗುಂದಗಿ ಗ್ರಾಮಕ್ಕೆ ಭೀಮಾ ನದಿಯಿಂದ ನೀರು ತರುವ ಯೋಜನೆಗೆ ಕ್ರಮ ಕೈಗೊಳ್ಳಬೇಕು. ಮುಂಬರುವ ಬೇಸಿಗೆಯಲ್ಲಿ ಕ್ಷೇತ್ರದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಎಚ್ಚರಿಸಿದರು.
ಜೆಡಿಎಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, 1994ರಲ್ಲಿ ಎಂ.ಸಿ. ಮನಗೂಳಿ ಅವರು ಸಚಿವರಾಗಿದ್ದಾಗ ಜನತೆಗೆ ಕುಡಿಯುವ ನೀರು ಪೂರೈಸಲು ಪಟ್ಟಣದಲ್ಲಿ ಕೆರೆ ನಿರ್ಮಾಣ ಮಾಡಲಾಯಿತು. 8 ಕಿ.ಮೀ. ದೂರದಿಂದ ಪೈಪ್‌ಲೈನ್ ಮಾಡಿ ಕೆರೆಗೆ ನೀರು ತರಲಾಯಿತು. ಕೆರೆಯ ಒಂದು ಭಾಗ ಬಿರುಕು ಬಿಟ್ಟಿದ್ದು ಶೀಘ್ರದಲ್ಲಿ ದುರಸ್ತಿ ಮಾಡಬೇಕು ಎಂದರು.
ಪಟ್ಟಣದ ಜನಸಂಖ್ಯೆ ಹೆಚ್ಚಾಗಿದ್ದು ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹರಿಸಬೇಕು. ಈ ನಿಟ್ಟಿನಲ್ಲಿ ಈಗ 27.10 ಕೋಟಿ ರೂ. ವೆಚ್ಚದಲ್ಲಿ ಪೈಪ್
ಲೈನ್ ಮಾಡಿ ಬಳಗಾನೂರ ಕೆರೆಯಿಂದ ಸಿಂದಗಿಗೆ ನೀರು ತರಲಾಗುವುದು. ಈಗ ಪೈಪ್‌ಲೈನ್ ಕಾಮಗಾರಿ ಮುಗಿದಿದೆ. ವಿದ್ಯುತ್ ಕಾಮಗಾರಿ ಮಾತ್ರ
ಬಾಕಿಯಿದೆ. ಶೀಘ್ರದಲ್ಲಿ ಬಳಗಾನೂರು ಕೆರೆ ನೀರು ಸಿಂದಗಿ ಕೆರೆಗೆ ನೀರು ಹರಿಸಲಾಗುವುದು. ಈ ಅವಧಿಯೊಳಗೆ ಕೆರೆ ಬಿರುಕು ಬಿಟ್ಟಿರುವುದನ್ನು ದುರಸ್ತಿ ಮಾಡಬೇಕು ಎಂದು ಹೇಳಿದರು.
ತಹಶೀಲ್ದಾರ್ ಸಂಜೀವಕುಮಾರ ದಾಸರ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಮೇಶ ಮೇತ್ರಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ವೈ. ಬಿರಾದಾರ, ಗುತ್ತಿಗೆದಾರ ಶಿವಪುತ್ರ ಕರ್ನಾಳ, ಶ್ರೀಕಾಂತ ಹೂಗಾರ, ಮಲ್ಲು ಶಂಭೇವಾಡ, ಪುರಸಭೆ ಸಿಬಂದಿ ಇದ್ದರು.