ರಮೇಶ ಪೂಜಾರ/ಅವಧೂತ ಬಂಡಗಾರ
ಸಿಂದಗಿ/ಆಲಮೇಲ: ಭೀಮಾ ಏತ ನೀರಾವರಿ ಹಿನ್ನೀರಿನಿಂದ ತಾಲೂಕಿನ ತಾರಾಪುರ ಗ್ರಾಮ ಜಲಾವೃತಗೊಂಡು ಮುಳುಗಡೆಯಾಗಿದೆ. ಅಲ್ಲಿನ ಜನರ ಜೀವನ ಅತಂತ್ರ ಸ್ಥಿತಿಯಲ್ಲಿದೆ. ಪ್ರವಾಹ ಬಂದ ವರ್ಷ ಗ್ರಾಮಸ್ಥರಿಗೆ ಅತಂತ್ರ ಸ್ಥಿತಿ ತಪ್ಪಿದ್ದಲ್ಲ.
ದಶಕಗಳು ಕಳೆದರು ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರ ಗ್ರಾಮ ಸ್ಥಳಾಂತರಗೊಂಡಿಲ್ಲ.
ಗ್ರಾಮ ಸ್ಥಳಾಂತರಕ್ಕೆ ಸುರಕ್ಷಿತ ಜಾಗ ನಿಗದಿಪಡಿಸಿ ಅಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ನಿವೇಶನಗಳು ಸಿದ್ಧವಾಗಿವೆ. ಆದರೆ ನಿವೇಶನ ವಿತರಣೆಯಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸಿದ್ದಾರೆ ಎಂದು ಆರೋಪದ ಹಿನ್ನೆಲೆಯಲ್ಲಿ ನಿವೇಶನಗಳು ಸಂತ್ರಸ್ತರಿಗೆ ಹಂಚಿಕೆಯಾಗಿಲ್ಲ. ಹೀಗಾಗಿ ತಾರಾಪುರ ಗ್ರಾಮ ಸ್ಥಳಾಂತಗೊಂಡಿಲ್ಲ. ಎಲ್ಲ ಕುಟುಂಬಗಳಿಗೆ ಸರಿಯಾಗಿ ಪ್ಲಾಟ್‌ಗಳು ಹಂಚಿಕೆ ಮಾಡಿದರೆ ಮಾತ್ರ ಈ ಮುಳಗಡೆ ಗ್ರಾಮ ಬಿಟ್ಟು ಹೊಸ ಗ್ರಾಮಕ್ಕೆ ಹೋಗುತ್ತೇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಸಿಂದಗಿ ಮತಕ್ಷೇತ್ರದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾರಾಪುರ ಗ್ರಾಮ ಸ್ಥಳಾಂತರವಾಗುತ್ತಿಲ್ಲ. ಹಿಂದಿನ ಶಾಸಕರು ಈ ಕಾರ್ಯ ಮಾಡಲಿಲ್ಲ. ಹಾಲಿ ಶಾಸಕ ಎಂ.ಸಿ. ಮನಗೂಳಿ ಅವರು ಮಾಡುತ್ತಾರೆ ಎಂಬ ಗ್ರಾಮಸ್ಥರ ನಿರೀಕ್ಷೆ ಹುಸಿಯಾಗಿ ಸಮಸ್ಯೆ ಜೀವಂತವಾಗಿ ಉಳಿದಿದೆ. ಈ ಸಮಸ್ಯೆ ಯಾರು ಪರಿಹರಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಜಿಲ್ಲೆಯಲ್ಲಿ ಬರವಿದ್ದರೂ ಮಹಾಪೂರದ ಪರಿಣಾಮ ತಾಲೂಕಿನ ತಾರಾಪುರ ಗ್ರಾಮಸ್ಥರ ಜೀವನ ಅಸ್ಥವ್ಯಸ್ಥವಾಗಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಅಪಾರ ಪ್ರಮಾಣದ ಮಳೆಯಾಗುತ್ತಿದ್ದರಿಂದ ಅಲ್ಲಿನ ಉಜನಿ ಜಲಾಶಯದಿಂದ ಏಕಾ ಏಕಿ ನೀರು ಬಿಟ್ಟಿದ್ದರಿಂದ ಭೀಮಾ ನದಿ ಸಂಪೂರ್ಣ ತುಂಬಿ ಹರಿಯುತ್ತಿದೆ. ನದಿ ದಡದ ಗ್ರಾಮಗಳು, ಜಮಿನುಗಳು ನೀರಲ್ಲಿ ಮುಳಗಿಕೊಂಡಿವೆ. ಅಲ್ಲಿಯ ಜನ-ಜಾನುವಾಗುರಗಳ ಗೋಳು ದೇವರೆ ಕೇಳಬೇಕಾದ ಸ್ಥಿತಿ ಬಂದಿದೆ.
ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಮಹಾಪೂರದಿಂದ ಮುಳಗಡೆಯಾಗುವ ಗ್ರಾಮಗಳ ಸುರಕ್ಷತೆಗಾಗಿ ಕಾರ್ಯ ನಿರ್ವಹಿಸಬೇಕಾಗಿದೆ.