Advertisement

ಕೆಬಿಜೆಎನ್ನೆಲ್ ಕಚೇರಿಗೆ ಬೀಗ ಜಡಿದು ರೈತರ ಪ್ರತಿಭಟನೆ

03:03 PM Aug 03, 2019 | Naveen |

ಸಿಂದಗಿ: ಕೆಂಭಾವಿಯಿಂದ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಯಿಂದ 4 ಮೋಟಾರ್‌ ಪಂಪ್‌ಗ್ಳು ಪ್ರಾರಂಭಿಸಿ ಕಾಲುವೆಗೆ ನೀರು ಬಿಡಲಾಗಿದೆ. ಆದರೆ ನೀರು ಕೊನೆವರೆಗೂ ಬಂದು ತಲುಪಿಲ್ಲ ಎಂದು ರೈತರು ಶುಕ್ರವಾರ ತಾಲೂಕಿನ ರಾಂಪುರ ಪಿಎ ಗ್ರಾಮದಲ್ಲಿರುವ ಕೆಬಿಜೆಎನ್ನೆಲ್ ಮುಖ್ಯ ಎಂಜಿನಿಯರ್‌ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ, ಹಾಲಿ ಶಾಸಕ ಎಂ.ಸಿ. ಮನಗೂಳಿ ಮಾತನಾಡಿ, ದೇವೇಗೌಡರು ಪ್ರಧಾನಿಯಿದ್ದ ಸಂದರ್ಭದಲ್ಲಿ ನಾನು ರಾಜ್ಯ ಸರಕಾರದಲ್ಲಿ ಮಂತ್ರಿಯಿದ್ದೆ. ಆ ಸಂದರ್ಭದಲ್ಲಿ ಕ್ಷೇತ್ರವನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಲು ಕ್ಷೇತ್ರ ನೀರಾವರಿಯಾಗುವವರೆಗೂ ಬರಿಗಾಲಲ್ಲೆ ತಿರುಗಾಲು ಶಪಥ ಮಾಡಿದೇನು. ಅದರಂತೆ ಹೋರಾಡಿ ಕ್ಷೇತ್ರಕ್ಕೆ ಗುತ್ತಿಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿದೆ. ಅಂದಿನಿಂದ ಕ್ಷೇತ್ರದ ಬಹು ಭಾಗ ನೀರಾವರಿ ಕ್ಷೇತ್ರವಾಗಿದೆ. ಈಗ ಕಾಲುವೆಗಳು ದುರಸ್ತಿ ಮಾಡುವ ಕಾರ್ಯ, ಕೊನೆವರೆಗೂ ನೀರು ಹರಿಬಿಡುವ ಕಾರ್ಯ ಶೀಘ್ರದಲ್ಲಿ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ‌ ಜಿಲ್ಲಾ ರೈತ ಮುಖಂಡ ಚಂದ್ರಶೇಖರ ದೇವರೆಡ್ಡಿ ಮಾತನಾಡಿ, ತಾಲೂಕಿನ ಗೋಲಗೇರಿ ಮತ್ತು ಹೊನ್ನಳ್ಳಿ ಮಧ್ಯ ಭಾಗದಲ್ಲಿ ಬರುವ ವಿತರಣಾ ಕಾಲುವೆ ಡಿಸ್ಟ್ರಿಬ್ಯೂಟರ್‌ ನಂ. 19ರಲ್ಲಿ ಮುಂದೆ ಕಾಲುವೆ ಒಡೆದಿದೆ ಎಂದು ಹೇಳಿ ಕಾಲುವೆ ಮಧ್ಯದಲ್ಲಿ ಕಲ್ಲು ಅಡ್ಡಗಟ್ಟಿ ನೀರು ತಡೆಗಟ್ಟಿದ್ದಾರೆ. ಹೀಗಾಗಿ ಕಾಲುವೆಗೆ ಬಂದ ನೀರು ನಿಂತು ಹೆಚ್ಚಾಗಿ ಪಕ್ಕದಲ್ಲಿನ ಜಮೀನುಗಳಿಗೆ ನೀರು ಹರಿದು ಹೋಗಿ ಜಲಾವೃತವಾಗಿ ಅಲ್ಲಿ ಬೆಳದ ಬೆಳೆ ಹಾನಿಯಾಗಿದೆ ಎಂದು ಹೇಳಿದರು.

ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಯಾವ ಭಾಗದಲ್ಲಿಯೂ ಕಾಲುವೆ ಒಡೆದಿಲ್ಲ. ಹೀಗಾಗಿ ಕಾಲುವೆ ಕೊನೆವರೆಗೂ ನೀರು ಹರಿದು ಬರಲು ಅಡ್ಡವಾಗಿರುವ ಕಲ್ಲುಗಳನ್ನು ತೆರವುಗೊಳಿಸಬೇಕು. ಕೊನೆವರೆಗೂ ನೀರು ಬರುವಂತೆ ಮಾಡಬೇಕು ಎಂದು ಜು. 23 ಮತ್ತು 29ರಂದು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ದೇವೇಗೌಡರು ಪ್ರಧಾನಿಯಿದ್ದ ಸಂದರ್ಭದಲ್ಲಿ ಎಂ.ಸಿ. ಮನಗೂಳಿ ಅವರು ಕ್ಷೇತ್ರದ ಶಾಸಕರಾಗಿದ್ದರು. ಅವರ ಹೋರಾಟದ ಶ್ರಮದಿಂದ ಈ ಭಾಗದಲ್ಲಿ ಗುತ್ತಿ ಬಸವಣ್ಣ ಏತ ನೀರಾವರಿ ಪ್ರಾರಂಭವಾಗಿದೆ. ಈ ನೀರಾವರಿ ಯೋಜನೆಯಿಂದ ನಾವು ಬದುಕು ಸಾಗಿಸುತ್ತಿದ್ದೇವೆ. ಈಗ ಈ ಕಾಲುವೆಗಳು ಶಿಥಿಲಾವಸ್ಥೆಯಲ್ಲಿವೆ. ಕೂಡಲೆ ಶಿಥಿಲಗೊಂಡ ಕಾಲುವೆಗಳನ್ನು ದುರಸ್ತಿ ಮಾಡಬೇಕು. ನೀರು ಹರಿದು ಬರಲು ಅಡ್ಡವಾಗಿರುವ ಕಲ್ಲುಗಳನ್ನು ತೆರವುಗೊಳಿಸಬೇಕು. ಆಗ ನೀರು ಕೊನೆವರೆಗೆ ಹೋಗುತ್ತದೆ ಎಂದರು. ತಾಪಂ ಮಾಜಿ ಸದಸ್ಯ ಅರ್ಜುನ ಮಾಲಗಾರ ಮಾತನಾಡಿ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕಾಲುವೆಗೆ ನೀರುವ ಹರಿಬಿಡುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಸೆಕ್ಷೇನ್‌ ಆಫೀಸರ್‌ಗಳ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ರೈತ ಮುಖಂಡ ಸದಾಶಿವ ಕರ್ಜಗಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಈ ತೆರನಾಗಿ ನಡೆಯುತ್ತಿದೆ. ಸರಿಯಾಗಿ ಕಾಲುವೆಗೆ ನೀರು ಹರಿದು ಬರುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಲಾಭ ರೈತರಿಗೆ ತಲುಪುತ್ತಿಲ್ಲ. ಇನ್ನಾದರು ಅಧಿಕಾರಿಗಳು ಎಚ್ಚೆತ್ತು ಕಾಲುವೆ ಕೊನೆವೆರೆಗ ನೀರು ಹರಿದು ಬರುವ ಹಾಗೆ ಮಾಡಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

ಕೆಬಿಜೆಎನ್ನೆಲ್ ಮುಖ್ಯ ಎಂಜಿನಿಯರ್‌ ಕಾರ್ಯಾಲಯದ ಅಧೀಕ್ಷಕ ಅಭಿಯಂತ ಮಾತನಾಡಿ, ರೈತರ ಸಂಕಟ ನನಗೆ ಅರ್ಥವಾಗುತ್ತದೆ. ಕಾಲುವೆ ಮಧ್ಯದಲ್ಲಿ ಕಲ್ಲು ಅಡ್ಡಗಟ್ಟಿ ನೀರು ತಡೆಗಟ್ಟಿದ ಕಲ್ಲುಗಳನ್ನು ತೆರವು ಗೊಳಿಸಲಾಗುವುದು. ಗಿಡ-ಕಂಟಿಗಳನ್ನು ಕಟಾವು ಮಾಡಲಾಗುವದು. ನೀರಿಗೆ ಕಲ್ಲುಗಳಿಂದ ಅಡ್ಡಗಟ್ಟಿದವರ ಮೇಲೆ ಪೊಲೀಸರಿಗೆ ದೂರು ನೀಡಲಾಗುವುದು. ಅಂಥವರ ಪರವಾಗಿ ಜನ ಪ್ರತಿನಿಧಿಗಳು ಬರಬಾರದು. 5 ಮೋಟಾರ್‌ಗಳನ್ನು ಪ್ರಾರಂಭಿಸಿ ಕಾಲುವೆಗೆ ನೀರು ಹರಿಬಿಟ್ಟು ಕೊನೆವರೆಗೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದರು.

ರೈತರಾದ ಸಿದ್ದನಗೌಡ ದೇವರೆಡ್ಡಿ, ಕೂಡ್ಲಪ್ಪ ಚೂರಿ, ಶಾಂತಪ್ಪ ಚೂರಿ, ಶಾಂತಪ್ಪ ಶಂಬೇವಾಡಿ, ಬಸವರಾಜ ದೇವರೆಡ್ಡಿ, ಬಸವರಾಜ ಬಡಿಗೇರ, ಚೆನ್ನಪ್ಪ ಹೂಗಾರ, ಮಲ್ಲನಗೌಡ ವಡ್ಡೋಡಗಿ, ಸಂತೋಷ ಮಾಲಗಾರ, ಶಿವಶಂಕರ ಸಿನ್ನೂರ, ಹಣಮಂತ ಮಸರಕಲ್ಲ, ಭೀಮಪ್ಪ ಮಣೂರ, ಕಾಂತು ಕಡಗಂಚಿ ಸೇರಿದಂತೆ ತಾಲೂಕಿನ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next