ಸಿಂದಗಿ: ಕಾಲುವೆಗಳಿಗೆ ನೀರು ಬಿಡಬೇಕು ಎಂದು ಆಗ್ರಹಿಸಿ ರೈತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಬಸವರಾಜ ಕಡಕಬಾವಿ ಮೂಲಕ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ನೀರಾವರಿ ಸಚಿವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ನೇತೃತ್ವ ವಹಿಸಿದ್ದ ರೈತ ಮುಖಂಡ ಚಂದ್ರಶೇಖರ ದೇವರಡ್ಡಿ ಮಾತನಾಡಿ, ಪ್ರತಿ ಸಲ ಯುಕೆಪಿ ಸಲಹಾ ಸಮಿತಿ ಸಭೆ ಆಲಮಟ್ಟಿಯಲ್ಲಿ ಜರುಗುತ್ತಿತ್ತು. ಆದರೆ ಈ ಸಲ ಸಭೆಯನ್ನು ಜು. 20ರಂದು ಬೆಂಗಳೂರಿನಲ್ಲಿ ನಡೆಸುತ್ತಿರುವದು ಸೂಕ್ತವಲ್ಲ. ಸಕಾಲಕ್ಕೆ ಮಳೆ ಬರದೆ ಇರುವುದರಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಹೊಸ ನೀರು ಕೂಡಾ ಹರಿದು ಬರುತ್ತಿದೆ.
ನಾರಾಯಣಪುರ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಆದ್ದರಿಂದ ಸಿಂದಗಿ, ಇಂಡಿ, ಸುರಪುರ ತಾಲೂಕುಗಳಿಗೆ ಜಾಕ್‌ವೆಲ್ ಹಾಗೂ ಕಾಲುವೆಗಳ ಮೂಲಕ ನೀರು ಹರಿಸಲು ಸರಕಾರಕ್ಕೆ ಅವರು ಕ್ರಮ ಕೈಗೊಳ್ಳಬೇಕು. ಇಲ್ಲದ ಪಕ್ಷದಲ್ಲಿ ಜು. 23ರಂದು ತಾಲೂಕಿನ ರಾಂಪುರ ಗ್ರಾಮದಲ್ಲಿನ ಯುಕೆಪಿ ವಿಭಾಗೀಯ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಚಂದ್ರಗೌಡ ಪಾಟೀಲ ಮಾತನಾಡಿ, ಜಲಾಶಯಗಳಲ್ಲಿ ಸಂಗ್ರಹವಾದ ನೀರನ್ನು ರೈತರ ಅನಕೂಲಕ್ಕೆ ಆದ್ಯತೆ ನೀಡಬೇಕು. ಕೆಂಭಾವಿಯಿಂದ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಬಿಡಲು 4 ಮೋಟಾರ್ ಪಂಪ್‌ಗ್ಳಿವೆ. ಕಾಲುವೆಯಿಂದ ಸಿಂದಗಿ ತಾಲೂಕಿನಲ್ಲಿನ ಕಾಲುವೆಗಳಿಗೆ ನೀರು ಬರಬೇಕಾದರೆ ಕನಿಷ್ಠ 3 ಮೋಟಾರ್ ಪಂಪ್‌ಗ್ಳು ಪ್ರಾರಂಭಿಸಬೇಕು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದೇ ಮೋಟರ್ ಪ್ರಾರಂಭಿಸಿದ್ದಾರೆ. ಇದರಿಂದ ನೀರು ಲಿಫ್ಟ್ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ತಾಲೂಕಿನಲ್ಲಿನ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿದು ಬರುವುದಿಲ್ಲ. ಆದ್ದರಿಂದ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಕನಿಷ್ಠ 3 ಮೋಟಾರ್ ಪಂಪ್‌ಗ್ಳು ಪ್ರಾರಂಭಿಸಿ ನೀರು ಬಿಡಬೇಕು ಎಂದು ಸೂಚನೆ ನೀಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.
ರೈತರಾದ ಸಿದ್ದನಗೌಡ ದೇವರೆಡ್ಡಿ, ಶ್ರೀಶೈಲ ಯಳಮೇಲಿ, ಅಶೋಕ ಹಣಮಶೆಟ್ಟಿ, ಶಾಂತು ರಾಣಾಗೋಳ, ಶಂಕರಲಿಂಗ ಚಿನಮಳಿ, ಬಿ.ಎಸ್. ಬೂದಿಹಾಳ, ಸಂಗಾರೆಡ್ಡಿ ಬೋರಗಿ, ಬಿ.ಕೆ. ಪೂಜಾರಿ, ಪ್ರಭು ಬೋರಗಿ, ಎಸ್.ಬಿ. ಪೂಜಾರಿ, ಬೀರಪ್ಪ ಹಚ್ಯಾಳ, ಲಕ್ಷ್ಮಣ ಹಚ್ಯಾಳ, ಜಿ.ಬಿ. ಮಣೂರ, ಕೇಶವರಾಯ ಕಡಣಿ, ಬಿ.ಬಿ. ಬಡಿಗೇರ, ಎಸ್.ಎಸ್. ಬಡಿಗೇರ, ಮಲ್ಲಪ್ಪ ಬಾಸಗಿ, ಕಾಶೀನಾಥ ಬಮ್ಮನಹಳ್ಳಿ, ಯಲ್ಲಪ್ಪ ಭಾಸಗಿ, ಮಲಕಣ್ಣ ಬಿರಾದಾರ ಸೇರಿದಂತೆ ಸಿಂದಗಿ, ಇಂಡಿ ತಾಲೂಕಿನ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.