Advertisement

ಏಕತಾರಿಯಲ್ಲಿ ಅಡಗಿದೆ ಗ್ರಾಮೀಣ ಸೊಗಡು

05:36 PM Sep 09, 2019 | Naveen |

ಸಿಂದಗಿ: ಸಾಹಿತಿ ಕಟ್ಟಿ ಅವರ ಕಥೆಗಳಲ್ಲಿ ಗ್ರಾಮೀಣದ ಸೊಗಡು ಅಡಗಿದ್ದರೂ ಆಧುನಿಕತೆಯಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ| ಬಾಳಾಸಾಹೇಬ ಲೋಕಾಪುರ ಹೇಳಿದರು.

Advertisement

ರವಿವಾರ ಪಟ್ಟಣದ ಮಾಂಗಲ್ಯ ಭವನದಲ್ಲಿ ಚನ್ನಪಟ್ಟಣದ ಪಲ್ಲವ ಪ್ರಕಾಶನ ಹಾಗೂ ಸ್ಥಳೀಯ ನೆಲೆ ಪ್ರಕಾಶನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಡಾ| ಚನ್ನಪ್ಪ ಕಟ್ಟಿ ಅವರ ಏಕತಾರಿ ಕಥಾ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಡಾ| ಚನ್ನಪ್ಪ ಕಟ್ಟಿ ಅವರು ರಚಿಸಿದ ಕಥೆ-ಕವನಗಳಲ್ಲಿ ಜನ-ಜೀವನದ ಬದುಕು, ಗ್ರಾಮೀಣ-ನಗರದ ಸೊಗಡು, ಜೀವನದ ಮೌಲ್ಯ ಅಡಗಿವೆ. ಅವರ ನಿರಂತರ ಕನ್ನಡದ ಅಧ್ಯಯನದಿಂದ ವಾಸ್ತವದ ಅಂಶಗಳನ್ನು ಹಾಗೂ ಇಂಗ್ಲಿಷ್‌ ಅಧ್ಯಯನದಿಂದ ಜಾಗತಿಕ ಅಂಶಗಳನ್ನು ತಮ್ಮ ಕಥೆಗಳಲ್ಲಿ ಕಟ್ಟಿ ಹಾಕುತ್ತಾರೆ. ಅವರು ಒಬ್ಬ ಕಾದಂಬರಿಕಾರರಾಗಿ ಹೊರ ಹೊಮ್ಮಬೇಕಾಗಿದೆ ಎಂದು ಹೇಳಿದರು.

ಕಟ್ಟಿಯವರ ಆರಂಭಿಕ ಕಥೆಗಳಾದ ಚರಗ, ಪಾಳು, ಕಥೆಗಳಿಗಿಂದ ಏಕತಾರಿಯಲ್ಲಿನ ಕಥೆಗಳು ವೈಚವಾರಿಕ ನೆಲೆಯಲ್ಲಿವೆ. ಲೌಕಿಕ ಬದುಕನ್ನು ಅಲೌಕಿಕದೆಡೆಗೆ ಸಾಗಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಶೋಧಕ, ಜಾನಪದ ವಿದ್ವಾಂಸಕ ಡಾ| ಎಂ.ಎಂ. ಪಡಶೆಟ್ಟಿ ಮಾತನಾಡಿ, ಡಾ| ಚನ್ನಪ್ಪ ಕಟ್ಟಿ ಅವರು ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಂಡವರು. ಅವರ ಬದುಕಿನಂತೆ ಅವರ ಬರಹವಿದೆ. ಅವರು ಒಬ್ಬ ಸಂಶೋಧಕನಾಗಿ, ಅನುವಾದಕರಾಗಿ, ಕವಿಯಾಗಿ, ಕಥೆಗಾರನಾಗಿ ಹೀಗೆ ಅವರು ಬಹುಮುಖ ಪ್ರಭುತ್ವ ಹೊಂದಿದ್ದಾರೆ. ಅವರ ಒಡನಾಟ ನಮ್ಮೇಲ್ಲರ ಭಾಗ್ಯ ಎಂದು ಹೇಳಿದರು.

Advertisement

ಸಾನ್ನಿಧ್ಯ ವಹಿಸಿದ್ದ ಸಾರಂಗಮಠ-ಗಚ್ಚಿನಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಕಥೆಗಾರ ಡಾ| ಚನ್ನಪ್ಪ ಕಟ್ಟಿ ತಮ್ಮ ಸರಳ ಜೀವನ, ಸಂಯಮ, ಶಿಸ್ತು, ಶ್ರಮ, ಸತತ ಅಧ್ಯಯನದ ಫಲವಾಗಿ ಕನ್ನಡ ಸಾರಸತ್ವ ಲೋಕದ ಶಿಖೀರದವರೆಗೆ ಬೆಳೆದಿದ್ದಾರೆ. ಅವರ ಸಾಹಿತ್ಯ ಸೇವೆ ನಿರಂತರ ನಡೆಯಲಿ. ಕನ್ನಡ ಸಾಹಿತ್ಯ ಶ್ರೀಮಂತಿಕೆಯಲ್ಲಿ ಅವರ ಶ್ರಮ ಅಡಗಲಿ ಎಂದರು.

ಕರ್ನಾಟಕ ಕೇಂದ್ರಿಯ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ವಿಕ್ರಮ ವಿನಾಜಿ ಅವರು ಡಾ| ಚನ್ನಪ್ಪ ಕಟ್ಟಿ ಅವರ ಏಕತಾರಿ ಕಥಾ ಸಂಕಲನ ಪರಿಚಯಿಸುತ್ತ, ಕಟ್ಟಿ ಅವರು ಮಾಸ್ತಿ ಅವರ ನವೋದಯ ಶೈಲಿಯ ಗ್ರಾಮೀಣ ಸೊಗಡು ತುಂಬಿದ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

ಏಕತಾರಿ ಕಥೆಗಳಲ್ಲಿ ಮಣ್ಣಿನ ವಾಸನೆ ನೆಲದ ಸೆಳೆತವಿದೆ. ಗ್ರಾಮದ ಮತ್ತು ನಗರದ ಬದುಕಿನ ನಡುವೆ ಚಲಿಸುವಿಕೆಯ ಹೋಯ್ದಾಟವಿದೆ. ಮಾಗಿದ ಪಕ್ವತೆಯ ಮನಸ್ಸಿನಿಂದ ಮೂಡಿದ ಕಥೆಗಳಲ್ಲಿ ನಿರಾಡಂಬರವಿದೆ. ಇಲ್ಲಿರುವ 9 ಕಥೆಗಳು ವಿಶೇಷವಾಗಿವೆ ಎಂದು ಹೇಳಿದರು.

ಅಕ್ಕ ಮಹಾದೇವಿ ಮಹಿಳಾ ವಿವಿ ಕಲಾ ನಿಕಾಯದ ಡೀನ್‌ ಡಾ| ನಾಮದೇವ ಗೌಡ ಮಾತನಾಡಿ, ಹಿಂದಿಯಲ್ಲಿ ಪ್ರೇಮಚಂದ್‌ ಹಾಗೂ ಫಣಿಶ್ವರ ರೇಣು ಅವರು ಚಿತ್ರಿಸಿದ ಗ್ರಾಮೀಣ ಬದುಕನ್ನು ಬೇರೆ ಯಾರಿಂದಲೂ ಕಟ್ಟಿಕೊಡಲು ಆಗಿಲ್ಲ. ಆದರೆ ಡಾ| ಚನ್ನಪ್ಪ ಕಟ್ಟಿ ಅವರು ತಮ್ಮ ಏಕತಾರಿ ಕಥಾ ಸಂಕಲನದಿಂದ ಸಾಧಿಸಿ ತೋರಿಸಿದ್ದಾರೆ. ಏಕತಾರಿ ಕಥಾ ಸಂಕಲನದ 9 ಕಥೆಗಳನ್ನು ಹಿಂದಿ ಭಾಷೆಗೆ ಅನುವಾದ ಮಾಡಿ ಪ್ರಕಟಿಸುವುದಾಗಿ ಭರವಸೆ ನೀಡಿದರು.

ಲೇಖಕ ಡಾ| ಚನ್ನಪ್ಪ ಕಟ್ಟಿ, ಚನ್ನಪಟ್ಟಣದ ಪ್ರಕಾಶಕ ಪಲ್ಲವ ವೆಂಕಟೇಶ್‌ ಮಾತನಾಡಿದರು.

ಶಹಾಪುರದ ಚಂದ್ರಕಾಂತ ಕರದಳ್ಳಿ, ಧಾರವಾಡದ ಲಲಿತಾ ಪಾಟೀಲ, ಬಾದಾಮಿಯ ವಿ.ಟಿ. ಪೂಜಾರಿ, ಡಾ| ಜಿ.ಎಂ. ವಾರಿ, ಮಕ್ಕಳ ಸಾಹಿತಿ ಹ.ಮ. ಪೂಜಾರ, ವಿ.ಡಿ. ವಸ್ತ್ರದ, ಎಂ.ಎಸ್‌. ಹಯ್ನಾಳಕರ, ಡಾ| ಎಂ.ಎಸ್‌. ಮಧುಬಾವಿ, ಶರಣಪ್ಪ ವಾರದ, ಅಶೋಕ ವಾರದ, ಮಹಾಂತೇಶ ಪಟ್ಟಣಶೆಟ್ಟಿ, ಶಿವಣ್ಣ ಗೋಸಾನಿ, ಬಸವರಾಜ ಗೋಡಕಿಂಡಿಮಠ, ಡಾ| ರಮೇಶ ಕತ್ತಿ, ಗುರುನಾಥ ಅರಳಗುಂಡಗಿ ಇದ್ದರು.

ದೇವು ಮಾಕೊಂಡ ಸ್ವಾಗತಿಸಿದರು. ಮನು ಪತ್ತಾರ ನಿರೂಪಿಸಿದರು. ಚಂದ್ರಶೇಖರ ಚೌರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next