Advertisement

ತೊಗರಿ ಬೇಳೆ ಪಡಿತರ ಸ್ಥಗಿತ

10:33 AM Aug 01, 2019 | Naveen |

ಸಿಂದಗಿ: ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಜಾರಿಗೆ ಬಂದ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿದ್ದ ತೊಗರಿ ಬೇಳೆ ವಿತರಣೆ ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದೆ. ಸದ್ಯ ಪಡಿತರ ಫಲಾನುಭವಿಗಳಿಗೆ ಅಕ್ಕಿ ಮಾತ್ರ ಲಭ್ಯವಾಗುತ್ತಿದ್ದು ಸರ್ಕಾರದ ವಿರುದ್ಧ ಪಡಿತರ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

Advertisement

ಜೂನ್‌ ಹಾಗೂ ಜುಲೈ ತಿಂಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಅಕ್ಕಿ ಮಾತ್ರ ವಿತರಣೆ ಮಾಡಲಾಗಿದ್ದು ಬೇಳೆ ವಿತರಣೆಯಾಗಿಲ್ಲ. ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಧ್ಯೇಯದೊಂದಿಗೆ ಅನುಷ್ಠಾನಕ್ಕೆ ಬಂದ ಅನ್ನಭಾಗ್ಯ ಯೋಜನೆ ಇದೀಗ ಅಕ್ಕಿ ವಿತರಣೆಗೆ ಮಾತ್ರ ಸೀಮಿತಗೊಂಡಿದೆ.

2015ರಿಂದ ಪಡಿತರ ಕುಟುಂಬಕ್ಕೆ ಪ್ರತಿ ತಿಂಗಳು ಅಕ್ಕಿಯೊಂದಿಗೆ 1 ಲೀಟರ್‌ ತಾಳೆ ಎಣ್ಣೆ, 1 ಕೆಜಿ ಅಯೋಡಿನ್‌ ಉಪ್ಪು, 2 ಕೆಜಿ ಗೋಧಿ, 1 ಕೆಜಿ ತೊಗರಿ ಬೇಳೆಯನ್ನು ರಿಯಾಯತಿ ದರದಲ್ಲಿ ವಿತರಣೆ ಮಾಡಲಾಗುತ್ತಿತ್ತು. ಆದರೆ 2017ರಿಂದ ಗೋಧಿ, ತಾಳೆ ಎಣ್ಣೆ ಮತ್ತು ಅಯೋಡಿನ್‌ ಉಪ್ಪು ಸ್ಥಗಿತಗೊಳಿಸಲಾಗಿದೆ.

2017ರಿಂದ ನಿರಂತರ ಪಡಿತರ ಕುಟುಂಬಕ್ಕೆ ಅಕ್ಕಿಯೊಂದಿಗೆ ತಲಾ ಒಂದು ಕೆಜಿ ತೊಗರಿ ಬೇಳೆ ವಿತರಿಸಲು ಆದೇಶ ಮುಂದುವರಿದಿದ್ದು ಕಳೆದ ಎರಡು ತಿಂಗಳಿನಿಂದ ಬೇಳೆ ವಿತರಣೆ ಕೂಡ ಸ್ಥಗಿತಗೊಂಡಿದೆ. ಇದರಿಂದ ಸರ್ಕಾರ ಖಜಾನೆ ಖಾಲಿಯಾಗಿದೆಯೆ ಎಂಬ ಅನುಮಾನ ಪಡಿತರ ಫಲಾನುಭವಿಗಳಿಗೆ ಕಾಡುವಂತೆ ಮಾಡಿದೆ.

ಫಲಾನುಭವಿಗಳ ವಿವರ: ಅಂತ್ಯೋದಯ ಅನ್ನ ಯೋಜನೆ ಅಡಿಯಲ್ಲಿ 6,784 ಕುಟುಂಬಗಳಲ್ಲಿ 22,635 ಫಲಾನುಭವಿಗಳಿದ್ದಾರೆ. ಎಪಿಎಲ್ ಯೋಜನೆ ಅಡಿಯಲ್ಲಿ 7,931 ಕುಟುಂಬಗಳಲ್ಲಿ 13,413 ಫಲಾನುಭವಿಗಳಿದ್ದಾರೆ. ಬಿಪಿಎಲ್ ಯೋಜನೆ ಅಡಿಯಲ್ಲಿ 92,114 ಕುಟುಂಬಗಳಲ್ಲಿ 2,90,706 ಫಲಾನುಭವಿಗಳಿದ್ದಾರೆ. ಒಟ್ಟು 1,06,829 ಕುಟುಂಬಗಳಲ್ಲಿ 3,26,754 ಫಲಾನುಭವಿಗಳಿದ್ದಾರೆ. ಈ ಎಲ್ಲ ಪಡಿತರ ಫಲಾನುಭವಿಗಳು ಕಳೆದ ಎರಡು ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಅಡಿ ವಿತರಿಸಲಾಗುತ್ತಿದ್ದ ತೊಗರಿ ಬೇಳೆ ಯಿಂದ ವಂಚಿತರಾಗಿದ್ದಾರೆ.

Advertisement

ಟೆಂಡರ್‌ ಸಮಸ್ಯೆ: ಕಳೆದ ಎರಡು ತಿಂಗಳ ಹಿಂದೆ ನಾಫೇಡ್‌ ಸಂಸ್ಥೆಯಿಂದ ಬೇಳೆ ಕಾಳು ವಿತರಣೆ ಮಾಡಲಾಗುತ್ತಿತ್ತು. ನಂತರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಟೆಂಡರ್‌ ಕರೆಯಲಾಗಿತ್ತು. ಕಡಿಮೆ ದರ ಇರುವ ಹಿನ್ನೆಲೆಯಲ್ಲಿ ದಾಲ್ಮಿಲ್ಗಳ ಮಾಲಿಕರು ಟೆಂಡರ್‌ನಲ್ಲಿ ಭಾಗವಹಿಸದ ಕಾರಣ ಸರಬರಾಜು ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೇಳೆ ಕಾಳು ವಿತರಣೆ ಮಾಡಲು ಕರೆದಿರುವ ಟೆಂಡರ್‌ ಪೂರ್ಣಗೊಂಡು ಮುಂದಿನ ಆಗಸ್ಟ್‌ ತಿಂಗಳಿಂದ ಬೇಳೆ ಕಾಳು ವಿತರಣೆ ಆಗುವಂತಾಗಲಿ ಎಂದು ಪತ್ರಿಕೆ ಬಯಸುತ್ತದೆ.

ಎರಡು ತಿಂಗಳಿಂದ ತೊಗರಿ ಬೇಳೆ ದಾಸ್ತಾನು ಬಂದಿಲ್ಲ. ಕೇವಲ ಸಿಂದಗಿ ತಾಲೂಕಿಗೆ ಅಲ್ಲ. ರಾಜ್ಯದಲ್ಲಿನ ಎಲ್ಲ ಪಡಿತರಿಗೆ ಬೇಳೆ ಕಾಳು ವಿತರಣೆಯಾಗಿಲ್ಲ. ರಾಜ್ಯದ ಎಲ್ಲ ಕಡೆ ಸಮಸ್ಯೆಯಾಗಿದೆ.
ಕೆ.ವಿ. ಜಾಡರಆಹಾರ ಶಿರಸ್ತೇದಾರ್‌,

ಸಿಂದಗಿ ಬರಗಾಲ ಬಿದ್ದೈತಿ. ಇಂಥದರಾಗ ಹಸಿವು ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಹಳಿದ ಸರಕಾರ ಎರಡು ತಿಂಗಳಿನಿಂದ ತೊಗರಿ ಬೇಳೆಕಾಳು ಕೊಡುತ್ತಿಲ್ಲ. ಕೇವಲ ಅಕ್ಕಿ ಕೊಟ್ಟರೆ ಸಾಲದು ಜೊತೆಗೆ ತೊಗರಿ ಬೇಳೆ ಕಾಳು ನೀಡಬೇಕು.
ಮುತ್ತುರಾಜ ಆಲಮೇಲ
ಬಿಪಿಎಲ್ ಪಡಿತರ ಫಲಾನುಭವಿ, ಸಿಂದಗಿ

Advertisement

Udayavani is now on Telegram. Click here to join our channel and stay updated with the latest news.

Next