ಮುಂಬೈ: ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್ ಪಕ್ಷದ ಅಗತ್ಯವಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದು, ಸರಣಿ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಿಷ್ಠವಾಗಲಿ ಎಂಬುದೇ ನನ್ನ ಪ್ರಾಮಾಣಿಕ ಹಾರೈಕೆಯಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಎಸ್‍ಎಸ್ಎಲ್‍ಸಿ ಪರೀಕ್ಷೆ: 4 ತಿಂಗಳ ಹಸುಗೂಸಿನೊಂದಿಗೆ ಪರೀಕ್ಷೆ ಬರೆದ ಮಹಿಳೆ
“ ಕಾಂಗ್ರೆಸ್ ಪಕ್ಷ ಹೆಚ್ಚು ದುರ್ಬಲವಾದಷ್ಟು ಪ್ರಾದೇಶಿಕ ಪಕ್ಷಗಳು ವಿರೋಧಪಕ್ಷದ ಸ್ಥಾನವನ್ನು ಪಡೆಯುತ್ತವೆ, ಇದು ಒಳ್ಳೆಯ ಲಕ್ಷಣವಲ್ಲ” ಎಂದು ಗಡ್ಕರಿ ಹೇಳಿದರು.
ಪ್ರಜಾಪ್ರಭುತ್ವ ಎಂಬುದು ಎರಡು ಚಕ್ರಗಳ ಮೇಲೆ ನಡೆಯುತ್ತದೆ. ಒಂದು ಆಡಳಿತ ಪಕ್ಷ, ಮತ್ತೊಂದು ವಿರೋಧ ಪಕ್ಷ. ಪ್ರಜಾಪ್ರಭುತ್ವಕ್ಕೆ ಬಲಿಷ್ಠವಾದ ವಿರೋಧ ಪಕ್ಷದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಭವಿಷ್ಯದಲ್ಲಿ ಬಲಿಷ್ಠವಾಗಿ ಬೆಳೆಯಲಿ ಎಂಬುದು ನನ್ನ ಪ್ರಾಮಾಣಿಕ ಹಾರೈಕೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಾದೇಶಿಕ ಪಕ್ಷಗಳು ವಿರೋಧ ಪಕ್ಷದ ಸ್ಥಾನ ಪಡೆಯುವುದು ಒಳ್ಳೆಯದಲ್ಲ ಎಂದು ಇತ್ತೀಚೆಗೆ ಲೋಕ್ ಮತ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿನ ಪ್ರಶ್ನೋತ್ತರ ಅವಧಿಯಲ್ಲಿ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ವಿವರಿಸಿದೆ.
ಜವಾಹರಲಾಲ್ ನೆಹರು ಅದಕ್ಕೊಂದು ಉತ್ತಮ ಉದಾಹರಣೆಯಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಸೋತಾಗಲೂ ಜವಾಹರಲಾಲ್ ನೆಹರು ವಾಜಪೇಯಿ ಅವರಿಗೆ ಗೌರವ ನೀಡಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಪಾತ್ರ ತುಂಬಾ ಮುಖ್ಯವಾದದ್ದು ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
ಕಾಂಗ್ರೆಸ್ ಪಕ್ಷ ಮರಳಿ ಬಲಿಷ್ಠವಾಗಲಿ ಎಂಬುದು ನನ್ನ ಮನದಾಳದ ಹಾರೈಕೆಯಾಗಿದೆ. ಯಾರು ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಅನುಸರಿಸುತ್ತಾರೋ ಅವರು ಪಕ್ಷದಲ್ಲಿ ಉಳಿದುಕೊಳ್ಳಲಿ. ಅವರು ಸೋಲಿನಿಂದ ಧೃತಿಗೆಡದೆ ತಮ್ಮ ಕೆಲಸವನ್ನು ಮುಂದುವರಿಸಲಿ. ಒಂದು ವೇಳೆ ಪರಾಜಯಗೊಂಡರೂ, ಮತ್ತೊಂದು ದಿನ ಜಯ ಕೂಡಾ ಸಿಗಲಿದೆ ಎಂಬ ವಿಶ್ವಾಸವಿರಲಿ ಎಂದು ಗಡ್ಕರಿ ತಿಳಿಸಿದ್ದಾರೆ.