ಬೆಂಗಳೂರು: ಜಾಗತಿಕ ವೈಮಾನಿಕ ಪ್ರದರ್ಶನ “ಏರೋ ಇಂಡಿಯಾ ಶೋ-2019’ರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿರುವ ಪ್ರತಿಷ್ಠಿತ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (ಎಚ್‌ಎಎಲ್), ಇದೇ ಮೊದಲ ಬಾರಿಗೆ ಸೂಪರ್‌ಸಾನಿಕ್ ಓಮ್ನಿ ರೋಲ್ ಟ್ರೈನರ್ (SPORT) ಯುದ್ಧವಿಮಾನ ಸಿಮ್ಯುಲೇಟರ್ ಅನ್ನು ಪ್ರದರ್ಶನ ಮಾಡಲಿದೆ.
ಈ ಸೂಪರ್‌ಸಾನಿಕ್ ಓಮ್ನಿ ರೋಲ್ ಟ್ರೈನರ್ ಯುದ್ಧವಿಮಾನವನ್ನು ದೇಶೀಯವಾಗಿ ಅಭಿವೃದ್ಧಿಪಡಿಸುತ್ತಿರುವ ಎಚ್‌ಎಎಲ್, ಶೀಘ್ರದಲ್ಲೇ ಇದನ್ನು ಲೋಕಾರ್ಪಣೆ ಮಾಡಲಿದೆ. ಅದರ ಮಾದರಿಯನ್ನು ಫೆ. 20ರಿಂದ 24ರವರೆಗೆ ನಡೆಯಲಿರುವ ವೈಮಾನಿಕ ಪ್ರದರ್ಶನದಲ್ಲಿ ಕಾಣಬಹುದು. ಅಷ್ಟೇ ಅಲ್ಲ, ಆ ಸಿಮ್ಯುಲೇಟರ್‌ನಲ್ಲಿ ಕುಳಿತು ಓಡಿಸುವ ಅನುಭವವನ್ನೂ ಪಡೆಯಬಹುದು. ಎಚ್‌ಎಎಲ್ ಪ್ರದರ್ಶನ ಮಳಿಗೆಯಲ್ಲಿ ಇದನ್ನು ಇಡಲಾಗುತ್ತಿದೆ.
ಇದಲ್ಲದೆ, ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧವಿಮಾನ (ಎಲ್‌ಸಿಎ) “ತೇಜಸ್’, ಬೇಸಿಕ್ ಟ್ರೈನರ್ ಯುದ್ಧವಿಮಾನ ಎಚ್‌ಟಿಟಿ-40, ಮೊಟ್ಟ ಮೊದಲ ಮೇಲ್ದರ್ಜೆಗೇರಿಸಿದ ವಿಮಾನ ಹಾಕ್ ಎಂಕೆ-132 (ಈಗ ಅದು ಹಾಕ್-ಐ), ಲಘು ಬಳಕೆಯ ಹೆಲಿಕಾಪ್ಟರ್ (ಎಲ್‌ಯುಎಚ್), ಮುಂದುವರಿದ ಲಘು ಹೆಲಿಕಾಪ್ಟರ್ ರುದ್ರ,
ಲಘು ಯುದ್ಧ ಹೆಲಿಕಾಪ್ಟರ್ ಜತೆಗೆ ಏರೋಬಾಟಿಕ್ ತಂಡಗಳಾದ ಸೂರ್ಯಕಿರಣ್ (ಹಾಕ್ ಏರ್‌ಕ್ರಾಫ್ಟ್) ಹಾಗೂ ಸಾರಂಗ್ (ಎಎಲ್‌ಎಚ್-ದ್ರುವ) ಯಲಹಂಕ ವಾಯುನೆಲೆಯಲ್ಲಿ ಐದು ದಿನಗಳ ಕಾಲ ಪ್ರೇಕ್ಷಕರನ್ನು ರಂಜಿಸಲು ಸನ್ನದ್ಧವಾಗಿವೆ. ಇದರೊಂದಿಗೆ ನೌಕಾ ಸೌಲಭ್ಯಗಳಿಗೆ ಬಳಸಲಾಗುವ ಹೆಲಿಕಾಪ್ಟರ್ (ಎನ್‌ಯುಎಚ್), ಮುಂದುವರಿದ ಲಘು ಹೆಲಿಕಾಪ್ಟರ್ ದ್ರುವ ಪ್ರಮುಖ ಆಕರ್ಷಣೆಗಳಾಗಲಿವೆ ಎಂದು ಎಚ್‌ಎಎಲ್ ತಿಳಿಸಿದೆ.
ಈ ಬಾರಿಯ ಪ್ರದರ್ಶನದಲ್ಲಿ ಎಚ್‌ಎಎಲ್‌ನ ಪರಿಕಲ್ಪನೆ “ಇನ್ನೋವೇಟ್, ಇಂಟಿಗ್ರೇಟ್ ಆಂಡ್ ಲೀಡ್’ (ಆವಿಷ್ಕಾರ, ಸಮಗ್ರತೆ ಮತ್ತು ನಾಯಕತ್ವ) ಆಗಿದೆ. ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನಗಳು, ದೇಶೀಯವಾಗಿ ಅಭಿವೃದ್ಧಿಪಡಿಸಿದ ಉತ್ಪನ್ನಗಳು ಸೇರಿದಂತೆ ಎಚ್‌ಎಎಲ್ ಸಾಮರ್ಥ್ಯಕ್ಕೆ ಇದೊಂದು ವೇದಿಕೆ ಆಗಲಿದೆ ಎಂದು ಸಂಸ್ಥೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ತಿಳಿಸಿದ್ದಾರೆ.
ಇನ್ನೋವೇಟ್ ವಿಭಾಗದಲ್ಲಿ ಹಿಂದೂಸ್ತಾನ್ ಟಬೊ ಫ್ಯಾನ್ ಎಂಜಿನ್ (ಎಚ್‌ಟಿಎಫ್ಇ-25), ಹಿಂದೂಸ್ತಾನ್ ಟಬೊ ಶಾಫ್ಟ್ ಎಂಜಿನ್ (ಎಚ್‌ಟಿಎಸ್-1200) ತಂತ್ರಜ್ಞಾನಗಳ ಪ್ರದರ್ಶನ, ರೋಟರಿ ಮಾನವ ರಹಿತ ವಾಹನಗಳ ಪ್ರದರ್ಶನ ಮಾಡಲಾಗುವುದು.
“ಇಂಟಿಗ್ರೇಟ್’ ವಿಭಾಗದಲ್ಲಿ 228 ಮಿಲಿಟರಿ ಯುದ್ಧವಿಮಾನ, ಸುಖೋಯ್-30ಎಂಕೈ ಮತ್ತಿತರ ವಿಮಾನಗಳ ಪ್ರದರ್ಶನ ನಡೆಯಲಿದೆ. ಗ್ರಾಹಕರ ಬೇಡಿಕೆಗಳನ್ನು ಪೂರೈಸಲಿರುವ ಎಚ್‌ಎಎಲ್ ಈ ಇಡೀ ಪ್ರದರ್ಶನದ “ನಾಯಕತ್ವ’ ವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.