Advertisement

ಖಾಸಗಿ ಶಾಲೆಗಳ ನವೀಕರಣ ಸರಳೀಕರಣ ಮಾಡಿ

03:30 PM Jul 13, 2022 | Team Udayavani |

ಬೀದರ: ರಾಜ್ಯ ಸರ್ಕಾರ ಶಾಲೆ ನವೀಕರಣ ಸರಳೀಕರಣ ಸೇರಿದಂತೆ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ರಾಜ್ಯ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ರುಕ್ಸಾ)ದ ಅಧ್ಯಕ್ಷ ಲೋಕೇಶ ತಾಳಿಕೋಟಿ ಎಚ್ಚರಿಕೆ ನೀಡಿದರು.

Advertisement

ಕ.ಕ. ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದಿಂದ ನಗರದ ವಿದ್ಯಾಶ್ರೀ ಪಬ್ಲಿಕ್‌ ಸ್ಕೂಲ್‌ನಲ್ಲಿ ನಡೆದ ಜಿಲ್ಲೆಯ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದಲೇ ರಾಜ್ಯ, ದೇಶದ ಅಭಿವೃದ್ಧಿ ಸಾಧ್ಯವಿದೆ. ಹೀಗಾಗಿ ಸರ್ಕಾರ ಶಾಲೆಗಳ ವಿಚಾರದಲ್ಲಿ ಸರ್ಕಾರಿ, ಖಾಸಗಿ ಎಂದು ಭೇದ ಭಾವ ಮಾಡಬಾರದು. ಸರ್ಕಾರ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿರುವುದರಿಂದ ಕನ್ನಡ ಮಾಧ್ಯಮದ ಶಾಲೆಗಳ ಸ್ಥಿತಿ ಅಧೋಗತಿಯಾಗಿದೆ. ಸರ್ಕಾರ ಯಾವುದೇ ರೀತಿಯ ನೆರವು ನೀಡದ ಕಾರಣ ಸಂಕಷ್ಟದ ಮಧ್ಯೆ ನಡೆಸಿಕೊಂಡು ಬರುತ್ತಿರುವ ಖಾಸಗಿ ಸಂಸ್ಥೆಗಳು ಸೊರಗುತ್ತಿವೆ ಎಂದರು.

ಶಾಲಾ ಅನುಮತಿ, ನವೀಕರಣ ಸರಳೀಕರಿಸಬೇಕು. ಅನುದಾನಿತ ಶಾಲಾ ಕಾಲೇಜುಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಅನುಮತಿ ಕೊಡಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಆರ್‌ಟಿಇ ಮರು ಜಾರಿಗೊಳಿಸಬೇಕು. ಅಗ್ನಿಶಾಮಕ, ಕಟ್ಟಡ ಸುರಕ್ಷತೆ ನಿಯಮಗಳಿಂದ ಶಾಶ್ವತ ವಿನಾಯಿತಿ ನೀಡಬೇಕು. ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಅನುದಾನ ಮೀಸಲಿಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ನೂರೆಂಟು ಷರತ್ತುಗಳನ್ನು ವಿಧಿಸಿರುವುದರಿಂದ ಸದ್ಯ ಖಾಸಗಿ ಶಾಲೆಗಳನ್ನು ನಡೆಸುವುದು ಬಹಳ ಕಷ್ಟಕರವಾಗಿದೆ. 1995ರಿಂದ ಈಚೆಗೆ ಯಾವೊಂದು ಶಿಕ್ಷಣ ಸಂಸ್ಥೆಯನ್ನೂ ಅನುದಾನಕ್ಕೆ ಒಳಪಡಿಸದಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.

ಸಂಘದ ಜಿಲ್ಲಾ ಗೌರವಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಮಾತನಾಡಿದರು. ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಉಮೇಶ, ಸಂಘದ ಕಲಬುರಗಿ ವಿಭಾಗ ಪ್ರಮುಖ ಸುನೀಲ್‌ ಹುಡಗಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮುಜಮಿಲ್‌ ಪಟೇಲ್‌, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಮುಖರಾದ ಡಾ| ಅಬ್ದುಲ್‌ ಖದೀರ್‌, ಮಹಮ್ಮದ್‌ ಆಸಿಫೊದ್ದಿನ್‌, ಗುರುನಾಥ ರೆಡ್ಡಿ, ಮಂಜೂರ್‌ ಇರ್ಫಾನ್‌, ಓಂಕಾರ ಮಠಪತಿ, ಮುಕ್ರಂ ಪಟೇಲ್‌ ಇದ್ದರು. ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಮಣಗೇರಿ ಸ್ವಾಗತಿಸಿದರು. ಬಸವರಾಜ ಬಶೆಟ್ಟಿ ನಿರೂಪಿಸಿದರು. ವೀರೇಶ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next