Advertisement
ರಾಜ್ಯ ಭೂ ಕಂದಾಯ ಕಾಯ್ದೆ 1964 ಕಲಂ 95 ರಡಿ ಕಲ್ಪಿಸಲಾದ ಅವಕಾಶದಂತೆ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಲು ಇರುವ ಭೂ ಪರಿವರ್ತನಾ ವಿಧಾನವನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಅಸ್ತಿತ್ವಕ್ಕೆ ತಂದಿರುವ ಅಫಿಡೆವಿಟ್ ಬೇಸ್ಡ್ ಕನ್ವರ್ಷನ್ ಎಂಬ ತಂತ್ರಾಂಶವನ್ನು ಸರಿಯಾಗಿ ಬಳಸಬೇಕು ಹಾಗೂ ಅದು ಪರಿಣಾಮಕಾರಿಯಾಗಲು ನಿಗದಿತ ಕಾಲಮಿತಿ ಅಗತ್ಯ ಎಂದು ಸುತ್ತೋಲೆಯಲ್ಲಿ ಅವರು ಸೂಚಿಸಿದ್ದಾರೆ.
Related Articles
Advertisement
ಪ್ರಕರಣಗಳನ್ನು ಸ್ವೀಕರಿಸಿದ 1 ವಾರದೊಳಗಾಗಿ ಸಹಾಯಕ ಆಯುಕ್ತರು ತಮ್ಮ ಅಭಿಪ್ರಾಯವನ್ನು ತಂತ್ರಾಂಶದಲ್ಲಿ ದಾಖಲಿಸುವುದಲ್ಲದೇ ಕಡತವನ್ನು ಭೌತಿಕವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸತಕ್ಕದ್ದು. ನಗರ ಮತ್ತು ಗ್ರಾಮೀಣ ಯೋಜನಾ ಇಲಾಖೆಯಲ್ಲಿ ಅಗತ್ಯ ದಾಖಲೆಗಳು ಪೂರೈಸಿಲ್ಲದ ನಿಮಿತ್ತ ತಿರಸ್ಕರಿಸಿದೆ ಎಂಬ ಅಭಿಪ್ರಾಯವನ್ನು ನಗರಾಭಿವೃದ್ಧಿ ಮತ್ತು ನಗರ, ಗ್ರಾಮೀಣ ಯೋಜನಾ ಇಲಾಖೆಗಳು ದಾಖಲಿಸುತ್ತಿರುವುದು ಕಂಡುಬಂದಿದ್ದು ವಾಸ್ತವಿಕವಾಗಿ ಅನುಮೋದಿತ ಸಿಡಿಪಿ, ಓಡಿಪಿ ಆಧರಿಸಿ ಯೋಜನಾ ಇಲಾಖೆಗಳು ಅಭಿಪ್ರಾಯಗಳನ್ನು ದಾಖಲಿಸತಕ್ಕದ್ದು. ಅಲ್ಲದೇ ಸರ್ಕಾರದ ಸೂಚನೆ ಪ್ರಕಾರ ಪಹಣಿ ಪತ್ರಿಕೆ ಅಥವಾ ನಕಾಶೆ ಅಥವಾ ಮ್ಯುಟೇಶನ ಎಂಟ್ರಿಗಳ ಅಗತ್ಯತೆ ಇದ್ದಲ್ಲಿ ಅದನ್ನು ವೆಬ್‌ಸೈಟ್ನಿಂದ ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ ಇನ್ನು ಮುಂದೆ ಯೋಜನಾ ಇಲಾಖೆಗಳ ಸ್ಪಷ್ಟ ಅಭಿಪ್ರಾಯ 25 ದಿನದೊಳಗಾಗಿ ಹೊಸ ತಂತ್ರಾಂಶದಲ್ಲಿ ಅಳವಡಿಸಲು ಈ ಮೂಲಕ ಸೂಚಿಸಿದೆ. ತಪ್ಪಿದ್ದಲ್ಲಿ, ಭೂಪರಿವರ್ತನೆಗೆ ಇಲಾಖೆಯಿಂದ ಯಾವುದೇ ಆಕ್ಷೇಪಣೆ ಇಲ್ಲವೆಂದು ಪರಿಭಾವಿಸಿ ನಿಯಮನುಸಾರ ಮುಂದಿನ ಕ್ರಮ ಜರುಗಿಸಲಾಗುವುದು.
ಕರಾವಳಿ ನಿಯಂತ್ರಣ ವಲಯ: ಕರಾವಳಿ ತಾಲೂಕುಗಳಿಗೆ ಮತ್ತು ನದಿ ದಂಡೆಯ ಮೇಲೆ ನೆಲಸಿದ ಜಮೀನುಗಳಿಗೆ ಸಂಬಂಧಿಸಿದಂತೆ ಕರಾವಳಿ ನಿಯಂತ್ರಣ ವಲಯದ ಅಭಿಪ್ರಾಯ ತೀರಾ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭೂಪರಿವರ್ತನೆಗೆ ಕೋರಿದ ಜಮೀನು ಕರಾವಳಿ ನಿಯಂತ್ರಣ ವಲಯದ ಯಾವ ವಲಯದಲ್ಲಿ ಬರುತ್ತದೆ ಮತ್ತು ಅಲ್ಲಿ ಭೂ ಪರಿವರ್ತನೆಗೆ ಕೋರಿದ ಉದ್ದೇಶದನ್ವಯ ಜಮೀನು ಅಭಿವೃದ್ಧಿಪಡಿಸಬಹುದೇ? ಎನ್ನುವ ವಿಷಯದಲ್ಲಿ ಪ್ರಾದೇಶಿಕ ನಿರ್ದೇಶಕರು (ಪರಿಸರ) ನಿಖರವಾದ ಅಭಿಪ್ರಾಯವನ್ನು 25 ದಿನದೊಳಗಾಗಿ ತಂತ್ರಾಂಶದಲ್ಲಿ ಅಳವಡಿಸತಕ್ಕದ್ದು. ಕರಾವಳಿ ನಿಯಂತ್ರಣ ವ್ಯಾಪ್ತಿಯಲ್ಲಿ ಭೂಪರಿವರ್ತನೆಗೆ ಅವಕಾಶ ನೀಡುವ ಕುರಿತು ಕೇವಲ ನಿಯಮಾವಳಿಗಳನ್ನು ಉಲ್ಲೇಖೀಸದೇ ಭೂಪರಿವರ್ತನೆ ಕೋರಿಕೆಯ ಕುರಿತು ಇಲಾಖೆಯ ಸ್ಪಷ್ಟ ಹಾಗೂ ನಿಖರ ಅಭಿಪ್ರಾಯ ದಾಖಲಿಸಬೇಕು. ನಿಗದಿತ ಅವಧಿಯಲ್ಲಿ ಅಭಿಪ್ರಾಯ ನೀಡದೇ ಇದ್ದಲ್ಲಿ ಇಲಾಖೆಯಿಂದ ಯಾವುದೇ ಆಕ್ಷೇಪಣೆ ಇಲ್ಲವೆಂದು ಪರಿಭಾವಿಸಿ ನಿಯಮನುಸಾರ ಮುಂದಿನ ಕ್ರಮ ಜರುಗಿಸಲಾಗುವುದು.
ತರೆ ಇಲಾಖೆಗಳು ಈಗಾಗಲೇ ಉಲ್ಲೇಖೀತ ಸರ್ಕಾರದ ಆದೇಶದಲ್ಲಿ ಸೂಚಿಸಿದಂತೆ ಇತರೆ ಇಲಾಖೆಗಳು ಸಹ ಭೂಪರಿವರ್ತನಾ ಕೋರಿಕೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯವನ್ನು 25 ದಿನದೊಳಗಾಗಿ ತಂತ್ರಾಂಶದಲ್ಲಿ ಅಳವಡಿಸತಕ್ಕದ್ದು.
ಸ್ಥಳೀಯ ಸಂಸ್ಥೆಗಳು ಭೂ ಪರಿವರ್ತನೆಗೆ ಕೋರಿದ ಜಮೀನಿಗೆ ತೆರಳಲು ಅಧಿಕೃತ ರಸ್ತೆ, ಚರಂಡಿ ಸೌಲಭ್ಯ ಇದೆಯೇ ಎಂಬುದನ್ನು ಖಚಿತಪಡಿಸಿ ಅಭಿಪ್ರಾಯವನ್ನು 25 ದಿನದೊಳಗಾಗಿ ತಂತ್ರಾಂಶದಲ್ಲಿ ಅಳವಡಿಸತಕ್ಕದ್ದು. ತಪ್ಪಿದ್ದಲ್ಲಿ, ಭೂಪರಿವರ್ತನಾ ಕೋರಿಕೆಗೆ ಸ್ಥಳೀಯ ಸಂಸ್ಥೆಗಳ ಯಾವುದೇ ಆಕ್ಷೇಪಣೆ ಇಲ್ಲವೆಂದು ಪರಿಭಾವಿಸಲಾಗುವುದು.
ಜಿಲ್ಲಾಧಿಕಾರಿಗಳ ಕಚೇರಿ: ಭೂಪರಿವರ್ತನೆ ವಿಷಯ ನಿರ್ವಾಹಕರು ಮತ್ತು ಶಿರಸ್ತೇದಾರರು ಎಲ್ಲಾ ಕೋರಿಕೆಗಳನ್ನು ಪರಿಶೀಲಿಸಿ 3 ದಿನದೊಳಗಾಗಿ ತಂತ್ರಾಂಶದಲ್ಲಿ ಅಭಿಪ್ರಾಯವನ್ನು ಅಳವಡಿಸಿ ಭೌತಿಕ ಕಡತವನ್ನು ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು. ಅಪರ ಜಿಲ್ಲಾಧಿಕಾರಿಗಳಿಗೆ ಅಭಿಪ್ರಾಯವನ್ನು ದಾಖಲಿಸಲು ತಂತ್ರಾಂಶದಲ್ಲಿ 1 ತಿಂಗಳ ಕಾಲಾವಕಾಶ ಮಾತ್ರ ಇರುತ್ತದೆ. ಈ 1 ತಿಂಗಳ ಅವಧಿಯು ಭೂಪರಿವರ್ತನಾ ಕೋರಿಕೆ ಸೃಜಿಸಿದ ದಿನಾಂಕದಿಂದ ಆರಂಭಗೊಳ್ಳುತ್ತದೆ. ಆದ್ದರಿಂದ ನಿಗದಿತ ಅವಧಿಯಲ್ಲಿ ಅಭಿಪ್ರಾಯ ದಾಖಲಿಸಲು ಅಪರ ಜಿಲ್ಲಾಧಿಕಾರಿಗಳು ವೈಯಕ್ತಿಕ ಗಮನ ಹರಿಸತಕ್ಕದ್ದು.
ಪ್ರಸ್ತುತ ತಂತ್ರಾಂಶದಲ್ಲಿ ಪ್ರತಿಯೊಂದು ಹಂತಕ್ಕೆ ಕಾಲಮಿತಿ ನಿಗದಿಪಡಿಸಿರುವುದರಿಂದ ಮತ್ತು ಕೋರಿಕೆಗಳನ್ನು 60 ದಿನದೊಳಗಾಗಿ ಇತ್ಯರ್ಥಪಡಿಸಬೇಕಾಗಿರುವುದರಿಂದ ಎಲ್ಲಾ ಅಧಿಕಾರಿ/ಸಿಬ್ಬಂದಿ ಮರು ವಿಚಾರಣೆಗೆ ಆಸ್ಪದ ನೀಡದಂತೆ ಪ್ರಕರಣಗಳನ್ನು ಪರಿಶೀಲಿಸಿ ಅಭಿಪ್ರಾಯ ವ್ಯಕ್ತಪಡಿಸತಕ್ಕದ್ದು. ನಿಗದಿತ ಅವಧಿಯೊಳಗೆ ಸಂಬಂಧಿತ ಇಲಾಖೆಯು ಅಭಿಪ್ರಾಯ ನೀಡುವುದು ಕಡ್ಡಾಯವಾಗಿದ್ದು, ತಪ್ಪಿದ್ದಲ್ಲಿ ಮುಂದಿನ ಎಲ್ಲಾ ಆಗುಹೋಗುಗಳಿಗೆ ಸಂಬಂಧಿತ ಅಧಿಕಾರಿಯನ್ನೇ ವೈಯುಕ್ತಿಕ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಯವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.