Advertisement

ರಾಜ್ಯದ ಸೌರ ನೀತಿಯಲ್ಲಿ ಸರಳೀಕರಣ

11:08 PM Sep 06, 2019 | Lakshmi GovindaRaju |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸ್ವ ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ದಾವಣಗೆರೆ ಹಾಗೂ ಚಿತ್ರದುರ್ಗ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ 2032.11 ಕೋಟಿ ರೂ. ಮೊತ್ತದ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಜತೆಗೆ, ಬೆಂಗಳೂರು ಹೊರತುಪಡಿಸಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಹಾಗೂ ನಗರಸಭೆಗಳಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಘನತ್ಯಾಜ್ಯ ವಿಲೇವಾರಿ ಸಂಬಂಧ ಮಾದರಿ ಬೈಲಾಗೂ ಒಪ್ಪಿಗೆ ನೀಡಲಾಗಿದೆ.

Advertisement

ಸಂಪುಟ ಸಭೆಯ ನಂತರ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌, ತುಂಗಭದ್ರಾ ನದಿಯಿಂದ ಶಿಕಾರಿಪುರ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ 850 ಕೋಟಿ ರೂ., ದಾವಣಗೆರೆ ಜಿಲ್ಲೆ ಜಗಳೂರಿನ 53 ಕೆರೆ ತುಂಬಿಸುವ 660 ಕೋಟಿ ರೂ. ಹಾಗೂ ಚಿತ್ರದುರ್ಗದ ಭರಮಸಾಗರದ 38 ಹಾಗೂ ದಾವಣಗೆರೆಯ ಒಂದು ಕೆರೆ ತುಂಬಿಸುವ 522.11 ಕೋಟಿ ರೂ.ಮೊತ್ತದ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಘನತ್ಯಾಜ್ಯ ವಿಲೇವಾರಿ ಸವಾಲಾಗಿದ್ದು, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಒಂದು ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ರಾಜ್ಯದ ಇತರ ಮಹಾನಗರ ಪಾಲಿಕೆ ಹಾಗೂ ನಗರಸಭೆ ವ್ಯಾಪ್ತಿಯಲ್ಲೂ ಸಮರ್ಪಕ ಘನತ್ಯಾಜ್ಯ ವಿಲೇವಾರಿಗಾಗಿ ಮಾದರಿ ಬೈಲಾ ತಂದಿದ್ದು, ಅದಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಹಸಿ ಮತ್ತು ಒಣ ಕಸ ಪ್ರತ್ಯೇಕ ಸಂಗ್ರಹ, ಕಸದಿಂದ ಗೊಬ್ಬರ ಹಾಗೂ ವಿದ್ಯುತ್‌ ತಯಾರಿಕೆ, ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಲ್ಯಾಂಡ್‌ಫಿಲ್‌ ಹೊಂದು ವುದು, ಸೆಸ್‌ ಸಂಗ್ರಹ ಸೇರಿದಂತೆ ಎಲ್ಲ ಅಂಶಗಳು (ಕರ್ನಾಟಕ ಪೌರಸಭೆಗಳ ಮತ್ತು ಮಹಾನಗರ ಪಾಲಿಕೆಗಳ (ಬೆಂಗಳೂರು ಹೊರತುಪಡಿಸಿ)ಮಾದರಿ ಘನತ್ಯಾಜ್ಯ ನಿರ್ವಹಣೆ) ಈ ಮಾದರಿಯ ಬೈಲಾದಲ್ಲಿ ಒಳಗೊಂಡಿದೆ ಎಂದು ಹೇಳಿದರು.

ಸೌರ ನೀತಿ ಸರಳೀಕರಣ: ರಾಜ್ಯದಲ್ಲಿ ಜಾರಿಯಲ್ಲಿರುವ ಸೌರನೀತಿ -2014-21ಕ್ಕೆ ಕೆಲ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ. 100 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಿತಿಯನ್ನು 25 ಮೆಗಾವ್ಯಾಟ್‌ಗೆ ಇಳಿಸಲಾಗಿದೆ. ಜತೆಗೆ, ಸೋಲಾರ್‌ ಪಾರ್ಕ್‌ನಲ್ಲಿ ಉತ್ಪಾದಿಸುವ ವಿದ್ಯುತ್‌ನ್ನು ಸರ್ಕಾರಕ್ಕಷ್ಟೇ ಅಲ್ಲದೆ ಖಾಸಗಿಯವರಿಗೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

Advertisement

100 ಮೆಗಾವ್ಯಾಟ್‌ ಸೌರ ವಿದ್ಯುತ್‌ ಉತ್ಪಾದನೆಗೆ ಕನಿಷ್ಠ 500 ಎಕರೆ ಜಮೀನು ಅಗತ್ಯ. ಜತೆಗೆ, ಅಷ್ಟು ದೊಡ್ಡ ಜಾಗದಲ್ಲಿ ಘಟಕ ಕಾರ್ಯಗತಗೊಳಿಸಲು ಕಾಲಾವಕಾಶವೂ ಜಾಸ್ತಿ ಬೇಕಾಗುತ್ತದೆ. ಹೀಗಾಗಿ, ಮಿತಿಯನ್ನು 25 ಮೆಗಾವ್ಯಾಟ್‌ಗೆ ಇಳಿಸಲಾಗಿದೆ. ಜತೆಗೆ 18 ತಿಂಗಳಲ್ಲಿ ಘಟಕ ಕಾರ್ಯಾರಂಭಕ್ಕೆ ಷರತ್ತು ವಿಧಿಸಲಾಗಿದೆ. ಇದರಿಂದ ಕಡಿಮೆ ಜಮೀನಿನಲ್ಲಿಯೂ ಸೋಲಾರ್‌ ಪಾರ್ಕ್‌ ಮಾಡಲು ಸಹಾಯಕವಾಗಲಿದೆ ಎಂದು ಹೇಳಿದರು. ಉಳಿದಂತೆ ಸೌರ ನೀತಿಯಲ್ಲಿನ ಎಲ್ಲ ಷರತ್ತುಗಳು ಮುಂದುವರಿಯಲಿವೆ. ಸರ್ಕಾರ ಬಯಸಿದಾಗ ಅವರು ವಿದ್ಯುತ್‌ ನೀಡಲೇಬೇಕಾಗುತ್ತದೆ ಎಂದು ತಿಳಿಸಿದರು.

ಸಂಪುಟ ಉಪ ಸಮಿತಿ: ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಕುಸಿತ ಸಂದರ್ಭದಲ್ಲಿ ಬೆಲೆ ನಿಗದಿ ಹಾಗೂ ಸ್ಥಿರೀಕರಣಕ್ಕಾಗಿ ಬೆಂಬಲ ಬೆಲೆ ನಿಗದಿಪಡಿಸಲು ಸಂಪುಟ ಉಪ ಸಮಿತ ರಚನೆಗೆ ಸಂಪುಟ ಒಪ್ಪಿಗೆ ನೀಡಿದ್ದು, ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಉಳಿದಂತೆ, ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ 735 ಕೋಟಿ ರೂ., ಕಾವೇರಿ ನೀರಾವತಿ ನಿಗಮಕ್ಕೆ 250 ಕೋಟಿ ರೂ.ಗಳ ಅವಧಿ ಸಾಲ ಪಡೆಯಲು ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರಿನ ನೃಪತುಂಗ ರಸ್ತೆಯ ಸಿಎಂಎಂ ನ್ಯಾಯಾಲಯದ ಬಹುಮಹಡಿ ವಾಹನ ನಿಲುಗಡೆ ಸೇರಿ ಇತರ ಮೂಲಸೌಕರ್ಯ ಕಾಮಗಾರಿಗೆ 23 ಕೋಟಿ ರೂ. ಒದಗಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಕೆರೆ ತುಂಬಿಸಲು ಆದ್ಯತೆ
ಬೆಂಗಳೂರು: ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಕೆರೆಗಳ ಸಮೀಕ್ಷೆ ನಡೆಸಲಾಗುತ್ತಿದೆ. ಮಳೆಗಾಲದಲ್ಲಿ ಹರಿದು ಹೋಗುವ ಸುಮಾರು 50 ಟಿಎಂಸಿಗಳಷ್ಟು ನೀರನ್ನು ಹಿಡಿದಿಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮಳೆಗಾಲದಲ್ಲಿ ಸಂಗ್ರಹವಾಗುವ ನೀರನ್ನು ನಾವು ಹಿಡಿದಿಟ್ಟುಕೊಳ್ಳುತ್ತಿಲ್ಲ. ಇದರಿಂದ ಬೇಸಿಗೆಯಲ್ಲಿ ತೊಂದರೆ ಉಂಟಾಗುತ್ತಿದೆ.

ಹೀಗಾಗಿ, ಮಳೆಗಾಲದಲ್ಲಿ ಎಷ್ಟೆಷ್ಟು ನೀರು ಅಧಿಕವಾಗಿ ಸಮುದ್ರಕ್ಕೆ ಹರಿದು ಹೋಗುತ್ತಿದೆ ಅಥವಾ ನೆರೆ ರಾಜ್ಯಗಳ ಪಾಲಾಗುತ್ತಿದೆ ಎಂಬುದರ ಅಧ್ಯಯನ ನಡೆಸಲಾಗುವುದು. ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ ಕೆರೆಗಳಿಗೆ ನೀರು ತುಂಬಿಸುವುದು. ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆ ತುಂಬಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ಸರ್ಕಾರ ಕೆರೆಗಳ ಅಧ್ಯಯನ ನಡೆಸಿ, ಮಳೆ ನೀರು ತುಂಬಿಸಲು ಯೋಜನೆ ರೂಪಿಸುತ್ತಿದೆ ಎಂದು ಹೇಳಿದರು.

ಪೊಲೀಸರ ವೇತನ ಪರಿಷ್ಕರಣೆ ಸಂಬಂಧ ಆರನೇ ವೇತನ ಆಯೋಗ ಹಾಗೂ ಔರಾದ್‌ಕರ್‌ ಸಮಿತಿ ವರದಿ ಜಾರಿ ಸಂಬಂಧದ ತೀರ್ಮಾನಕ್ಕೆ ಸಂಪುಟ ಅನುಮೋದನೆ ನೀಡಿದೆ. ಆಗಸ್ಟ್‌ 1ರಿಂದ ಜಾರಿಗೆ ಬರುವಂತೆ ಪೊಲೀಸ್‌ ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಇದೀಗ ಸಂಪುಟದ ಅನುಮೋದನೆ ಪಡೆಯಲಾಗಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ 383.62 ಕೋಟಿ ರೂ.ಹೊರೆಯಾಗಲಿದೆ.
-ಜೆ.ಸಿ.ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next