ಗಂಗಾವತಿ: ಇಲ್ಲಿಯ ಹಿರಿಯ ಸಿವಿಲ್ ನ್ಯಾಯಾಲಯದ ಹಿರಿಯಶ್ರೇಣಿ ನ್ಯಾಯಾಧೀಶರಾದ ಅನೀತಾ ಜಿ ಅವರು ಗರ್ಭಕೋಶದ ಶಸ್ತ್ರಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಸರಳತೆ ಮೆರೆದಿದ್ದಾರೆ.
ಸರಕಾರಿ ಹಾಗು ಉನ್ನತ ಹುದ್ದೆಯಲ್ಲಿರುವವರು ಹಾಗು ಬಹುತೇಕರು ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುವುದಿಲ್ಲ ಮತ್ತು ಸರಿಯಾದ ಆರೈಕೆ ಇಲ್ಲ ಎಂಬ ನೆಪದಲ್ಲಿ ಲಕ್ಷಾಂತರ ರೂ.ಗಳ ಖರ್ಚು ಮಾಡಿ ಕಾರ್ಪೊರೇಟ್ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ವಾಡಿಕೆಯಾಗಿದೆ. ನ್ಯಾಯಾಧೀಶರೊಬ್ಬರು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅನುಕೂಲ ಇದ್ದರೂ ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ದಾಖಲಾಗಿರುವುದು ಗಮನಾರ್ಹ ಸಂಗತಿ. ಸಾರ್ವಜನಿಕರಿಗೆ ಸರಕಾರ ಎಲ್ಲಾ ಸೌಕರ್ಯ ಕಲ್ಪಿಸಿದ್ದು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಸರಕಾರದ ಸೌಲಭ್ಯ ಪಡೆಯುವಂತೆ ಸಂದೇಶ ಕೊಟ್ಟಿದ್ದಾರೆ.
ಚಿಕಿತ್ಸೆ ಸೌಕರ್ಯಕ್ಕೆ ಹೆಸರು: ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಅತ್ಯುತ್ತಮ ಚಿಕಿತ್ಸೆ ಹಾಗೂ ಸೌಲಭ್ಯ ನೀಡಲಾಗುತ್ತಿದ್ದು ಕಳೆದ ಮೂರು ವರ್ಷದಲ್ಲಿ ಸಾವಿರಾರು ಸುರಕ್ಷಿತ ಹೆರಿಗೆ ಮಾಡಿಸಲಾಗಿದೆ. ಉದರ ಶಸ್ತ್ರಚಿಕಿತ್ಸೆ ಸೇರಿ ಹಲವು ಚಿಕಿತ್ಸಾ ಸೌಲಭ್ಯಗಳಿಂದ ಸರಕಾರಿ ಆಸ್ಪತ್ರೆ ದೇಶದಲ್ಲಿ ಹೆಸರು ಮಾಡಿದೆ.
ಅತ್ಯುತ್ತಮ ಚಿಕಿತ್ಸೆ: ಸರಕಾರಿ ಆಸ್ಪತ್ರೆಯಲ್ಲಿ ಡಾ. ಈಶ್ವರ ಸವದಿ ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆಯ ತಜ್ಞ ವೈದ್ಯರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ನ್ಯಾಯಾಧೀಶರು ಗರ್ಭಕೋಶದ ತೊಂದರೆಗಾಗಿ ಶಸ್ತ್ರಚಿಕಿತ್ಸೆ ಮಾಡಿಸಲು ಬೆಂಗಳೂರಿನ ಪ್ರತಿಷ್ಠಿತ ಸೂಪರ್ ಸ್ಪೇಶಲಿಟಿ ಆಸ್ಪತ್ರೆಗೆ ದಾಖಲಾಗಿ ಅಲ್ಲಿಯ ವ್ಯವಸ್ಥೆ ಗಮನಿಸಿ ಗಂಗಾವತಿ ಆಸ್ಪತ್ರೆ ಸೂಕ್ತ ಎನ್ನಿಸಿ ಇಲ್ಲಿಗೆ ಆಗಮಿಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ದಾಖಲಾಗಿದ್ದು ಸಾರ್ವಜನಿಕರು ಸಹ ಖಾಸಗಿ ಆಸ್ಪತ್ರೆ ಗೆ ಲಕ್ಷಾಂತರ ರೂ ಖರ್ಚು ಮಾಡದೇ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನೀತಾ ಜಿ ಉದಯವಾಣಿ ಜತೆ ಮಾತನಾಡಿ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಗೆ ಸಕಲ ಸೌಕರ್ಯಗಳಿವೆ: ಸರಕಾರ ಇಲ್ಲಿಯ ಉಪವಿಭಾಗ ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಹಾಗು ಇತರೆ ಚಿಕಿತ್ಸೆಗೆ ಸರಕಾರ ಸಕಲ ಯಂತ್ರೋಪಕರಣಗಳನ್ನು ಪೂರೈಕೆ ಮಾಡಿದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು. ನ್ಯಾಯಾಧೀಶರಾದ ಅನಿತಾ ಜಿ ಗರ್ಭಕೋಶದ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ದಾಖಲಾಗಿರುವುದು ಸಾರ್ವಜನಿಕರಿಗೆ ಸಂದೇಶ ಕೊಡುವುದಾಗಿದ್ದು ಸಾರ್ವಜನಿಕರು ಸರಕಾರಿ ನೌಕರರು ಎಲ್ಲರಿಗೂ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳುವಂತೆ ವೈದ್ಯಾಧಿಕಾರಿ ಡಾ.ಈಶ್ವರ ಸವದಿ ಮನವಿ ಮಾಡಿದ್ದಾರೆ.