ಬೇರೆಯವರ ಮುಂದೆ ಪ್ರತಿಷ್ಠೆ ತೋರಿಸಿಕೊಳ್ಳುವ ಉದ್ದೇಶದಿಂದಲೇ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸುತ್ತೇವೆ. ಎಷ್ಟೇ ಬಾರಿ ಆ ವಸ್ತು ನಮಗೆ ಅಷ್ಟಾಗಿ ಅಗತ್ಯವಿಲ್ಲದಿದ್ದರೂ ಖರೀದಿಸುತ್ತೇವೆ. ಇದರಿಂದ ನಮ್ಮ ಪ್ರತಿಷ್ಠೆ ಖಂಡಿತ ಹೆಚ್ಚಾಗುವುದಿಲ್ಲ. ಆದರೆ ಉಳಿತಾಯ ಆಗಬಹುದಾದ ಹಣವಂತೂ ವಿನಾಕಾರಣ ಖರ್ಚಾಗಿ ಹೋಗಿರುತ್ತದೆ.
ಸಂಪತ್ತು ಎಂದರೆ ಹಣ. ಒಡವೆ, ವಸ್ತ್ರ, ಆಸ್ತಿ ಇವಷ್ಟೇ ಅಲ್ಲ. ಸಂತೋಷವೇ ಸಂಪತ್ತು ಎನ್ನುವುದು ಈಗ ಎಲ್ಲರ ಬಾಯಲ್ಲೂ ಬರುವ ಮಾತು. ಯಾವ ರಾಷ್ಟ್ರ ಸಂತೊಷದ ದೃಷ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ನೋಡಿದರೆ ಫಿನ್ಲಂಡ್‌ಗೆ ಮೊದಲ ಸ್ಥಾನ. ನಮ್ಮ ದೇಶ 133 ನೇ ಸ್ಥಾನದಲ್ಲಿದೆ. ಒಟ್ಟೂ 156 ರಾಷ್ಟ್ರಗಳ ಸಮೀಕ್ಷೆ ನಡೆಸಿ ಈ ಪಟ್ಟಿ ಸಿದ್ದಪಡಿಸಲಾಗಿತ್ತು. ಎಲ್ಲರೂ ಮೊದಲಿಗಿಂತ ಅನುಕೂಲವಂತರಾಗುತ್ತಿದ್ದಾರೆ. ಆದರೆ ಅನುಕೂಲವಂತರಾಗಿರುವ ಜನರೆಲ್ಲ ಮೊದಲಿಗಿಂತ ಸುಖೀಗಳಾ ಎಂದು ಯೋಚಿಸಿದರೆ ಖಂಡಿತಾ ಇಲ್ಲ ಎನ್ನಬೇಕು.
ಉದ್ಯೋಗಸ್ಥ ಮಹಿಳೆಯರ ಒಂದು ಗುಂಪು ಅಲ್ಲಿತ್ತು. ಅವರೆಲ್ಲರೂ ಮೊಬೈಲ್ ನಲ್ಲೇ ಮುಳುಗಿದ್ದರು. ಮೊಬೈಲ್ ಕುರಿತೇ ಚರ್ಚೆ ನಡೆಯುತ್ತಿತ್ತು. ಒಬ್ಬಳು ಹೇಳಿದಳು, ಇದು 15 ಸಾವಿರದ ಮೊಬೈಲ್. ಇನ್ನೊಬ್ಬಳು ಅಂದಳು 22 ಸಾವಿರದ ಮೊಬೈಲ್. ಮತ್ತೂಬ್ಬಳು ಕೇಳಿದಳು: ಇನ್‌ಸ್ಟಾಲ್‌ಮೆಂಟ್ ಎಷ್ಟು ? ಈ ಕಡೆಯ ಮಾತಿನಿಂದ ಗೊತ್ತಾಗಿದ್ದು ಏನೆಂದರೆ ಇವರೆಲ್ಲಾ ಸಾಲ ಮಾಡಿ ಮೊಬೈಲ್ ಕೊಂಡಿದ್ದಾರೆ.
ಪದೇ ಪದೇ ಹೇಳುತ್ತಿರುತ್ತೇನೆ ನಮಗೆ ಅಗತ್ಯ ಮತ್ತು ಅನಗತ್ಯ ಖರ್ಚುಗಳ ಅರಿವು ಇರದಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯವೇ ಇಲ್ಲ. ಅಂಗಡಿಗೆ ಹೋಗುತ್ತಾರೆ. ಕೆಲವರಿಗೆ ಕಂಡಿದ್ದೆಲ್ಲ ಬೇಕು ಅನ್ನಿಸುತ್ತಿರುತ್ತದೆ. ಬೇಕು ನಿಜ, ಆದರೆ ಅದು ಎಷ್ಟರಮಟ್ಟಿಗೆ ಅನಿವಾರ್ಯ? ಒಂದು ಕ್ಷಣ ಯೋಚಿಸಿ ನೋಡಿ. ದುಬಾರಿ ಮೊಬೈಲ್ ನಮ್ಮ ಸಂಪಾದನೆಗೆ, ಗುಣಮಟ್ಟದ ಜೀವನಕ್ಕೆ ಸಹಕಾರಿ ಆಗಬಹುದಾ? ಆಗುವುದಿಲ್ಲ ಎಂದಾದರೆ ಅದನ್ನು ಖರೀದಿಸುವುದು ಯಾಕೆ? ಈಗ ಎಷ್ಟೋ ಜನರು ಬೇರೆಯವರಿಗಾಗಿ, ಅವರೆದುರು ತಾನೇನೂ ಕಡಿಮೆ ಇಲ್ಲ ಎಂದು ತೋರಿಸಿಕೊಳ್ಳುವ ಉದ್ದೇಶದಿಂದಲೇ ದುಬಾರಿ ಬೆಲೆಯ ಮೊಬೈಲ್ ಕೊಳ್ಳುತ್ತಿದ್ದಾರೆ. ಖರ್ಚು ಮಾಡುತ್ತಾರೆ. ವಾಸ್ತವವನ್ನು ತೆರೆದು ತೋರಲಾರರು.
ಹಾಗೆಯೇ ಪಾರದರ್ಶಕವಾಗಿಯೂ ಇವರು ಇರುವುದು ಕಷ್ಟ. ಹೀಗೆ, ತಮಗೆ ತಾವೇ ಸರಳವಾಗಿ ಇರಲು ಆಗದೇ ಅನಗತ್ಯ ಒತ್ತಡ ಅನುಭವಿಸುತ್ತಾರೆ. ಈ ಒತ್ತಡವೇ ಅನೇಕ ರೀತಿಯ ಸಮಸ್ಯೆಗಳಿಗೂ ಕಾರಣ ಆಗುತ್ತದೆ. ಸಂಬಂಧಗಳಿಂದ ಹಿಡಿದು ಆರೋಗ್ಯದ ವರೆಗೆ ಇದು ಒಂದು ಸರಪಳಿಯ ಹಾಗೆ ಪರಿಣಾಮ ಬೀರುತ್ತದೆ. ಒಮ್ಮೆ ನಾವು ಸರಳವಾಗಿ ಬದುಕತೊಡಗಿದರೆ, ಬಾಹ್ಯ ಆಡಂಬರಗಳೆಲ್ಲವೂ ನಿಲ್ಲುತ್ತವೆ. ಸರಳತೆ ಅಂದರೆ ಆಲೋಚನೆಯ ಮೂಲಕವೇ ಹೊರ ಹೊಮ್ಮುವುದು. ಮೊದಲು ಸರಳವಾಗಿ ಆಲೋಚಿಸೋಣ, ಸರಳವಾಗಿ ಬದುಕೋಣ. ಸಂತೋಷ ಆಗ ತನ್ನಿಂದ ತಾನೇ ಬರುತ್ತದೆ. ಸರಳತೆಯ ಉಪ ಉತ್ಪನ್ನದ ಹಾಗೆ ಉಳಿತಾಯ ಇದೆ.