Advertisement
1 ತುಪ್ಪದಲ್ಲಿ ಅಡಗಿದೆ ಅಧರಗಳ ಪೋಷಣೆ
ನಯವಾದ ತುಟಿಗಳನ್ನು ಪಡೆಯಬೇಕೆಂಬ ಆಸೆ ನಿಮಗಿದ್ದರೆ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ತುಪ್ಪವನ್ನು ತುಟಿಗಳಿಗೆ ಹಚ್ಚಿಕೊಂಡು ಐದರಿಂದ ಹತ್ತು ನಿಮಿಷ ಬಿಡಬೇಕು. ಇದರಲ್ಲಿ ಇರುವಂತಹ ಮೊಶ್ಚರೈಸರ್ ಗುಣಗಳು ಗಡಸು ಮತ್ತು ಒಡೆದ ತುಟಿಗಳ ಸಮಸ್ಯೆಯನ್ನು ನಿವಾರಣೆ ಮಾಡುತ್ತವೆ.
2 ಹರಳು ಸಕ್ಕರೆಯಿಂದ
ಒಣಗಿದ ತುಟಿಗಳಿಗೆ ಸತ್ವ
ಹರಳು ಸಕ್ಕರೆಗೆ ತುಟಿಗಳನ್ನು ಮೃದುವಾಗಿಸುವ ಶಕ್ತಿ ಇದ್ದು, ಒಣಗಿದಂತೆ ಕಾಣುವ ತುಟಿಗಳಿಗೆ ಸತ್ವವನ್ನು ತುಂಬುತ್ತದೆ. ಹಾಗಾಗಿ ಅರ್ಧ ಟೀ ಚಮಚದಷ್ಟು ಹರಳು ಸಕ್ಕರೆಗೆ ಒಂದು ಚಮಚದಷ್ಟು ರೋಸ್ ವಾಟರ್ ಹಾಕಿ ಈ ಮಿಶ್ರಣವನ್ನು ತುಟಿಗಳಿಗೆ ಹಚ್ಚಿಕೊಂಡು ಕೆಲವು ನಿಮಿಷ ಬಳಿಕ ನೀರಿನಿಂದ ತೊಳೆಯಿರಿ. ದಿನದಲ್ಲಿ 3-4 ಸಲ ಹೀಗೆ ಮಾಡುವುದರಿಂದ ತುಟಿಗಳು ಮೃದುವಾಗುತ್ತವೆ.
3 ದಾಳಿಂಬೆ ರಸ
ದಾಳಿಂಬೆ ತುಂಬಾ ಆರೋಗ್ಯಕಾರಿ ಎಂದು ಎಲ್ಲರಿಗೂ ತಿಳಿದಿದೆ. ಇದರ ರಸವನ್ನು ಹಚ್ಚಿಕೊಳ್ಳುವುದರಿಂದ ತುಟಿಗಳ ಆರೋಗ್ಯ ಉತ್ತಮವಾಗುವುದರೊಂದಿಗೆ ಅದರಲ್ಲಿರುವ ಮೊಶ್ಚರೈಸರ್ ಗುಣ ನೈಸರ್ಗಿಕವಾಗಿ ತುಟಿಯನ್ನು ಮೃದುವಾಗಿಡುತ್ತದೆ. ಜತೆಗೆ ತುಟಿ ಗುಲಾಬಿ ಬಣ್ಣ ಪಡೆಯುತ್ತದೆ. ಹಾಗಾಗಿ ದಾಳಿಂಬೆ ರಸವನ್ನು ಹತ್ತಿ ಉಂಡೆಯನ್ನು ಅದ್ದಿಕೊಂಡು ಅದನ್ನು ತುಟಿಗಳಿಗೆ ಹಚ್ಚಿ. ಅರ್ಧ ಗಂಟೆ ಕಾಲ ಅದನ್ನು ಹಾಗೇ ಬಿಟ್ಟು ಬಳಿಕ ತಣ್ಣನೆ ನೀರಿನಿಂದ ತೊಳೆಯಿರಿ. ದಿನದಲ್ಲಿ ಒಂದು ಸಲ ಹೀಗೆ ಮಾಡಿದರೆ ಸುಂದರ ತುಟಿಗಳು ನಿಮ್ಮದಾಗುವುವು.
3 ತಣ್ಣಗಿನ ಹಾಲಿನಿಂದ ತುಟಿಗಳಿಗೆ ಪೋಷಕಾಂಶ
ತಣ್ಣಗಿನ ಹಾಲನ್ನು ತುಟಿಗಳಿಗೆ ಲೇಪಿಸಿ 15 ನಿಮಿಷ ಕಾಲ ಬಿಟ್ಟು ತಣ್ಣನೆಯ ನೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ಗಡುಸಾಗಿರುವ ತುಟಿಗಳು ಮೃದುವಾಗುತ್ತವೆ. ಜತೆಗೆ ಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ತುಟಿಯನ್ನು ಸುಂದರವಾಗಿಡುತ್ತವೆ. ಹಾಗಾಗಿ ತುಟಿಗಳು ಗಡುಸಾಗದಂತೆ ತಡೆಯಲು ನೀವು ಪ್ರತಿದಿನ ಈ ಮಾರ್ಗವನ್ನು ಪಾಲಿಸಬಹುದು.
4 ಬೀಟ್ರೂಟ್
ತುಟಿಗಳ ಆರೈಕೆ ಮಾಡುವಂತಹ ನೈಸರ್ಗಿಕ ವಸ್ತುಗಳಲ್ಲಿ ಬೀಟ್‌ರೂಟ್ ತುಂಬಾ ಪರಿಣಾಮಕಾರಿ. ಗಡಸು ತುಟಿಗಳಿಗೆ ಇದು ತುಂಬಾ ಉಪಯುಕ್ತ. ಒಂದು ತುಂಡು ಬೀಟ್ರೂಟ್ ಕತ್ತರಿಸಿ ಅದನ್ನು ತುಟಿಗಳಿಗೆ ಹಚ್ಚಿಕೊಳ್ಳಿ. 5ರಿಂದ 10 ನಿಮಿಷ ಕಾಲ ಬಿಟ್ಟು ಬಳಿಕ ತಣ್ಣನೆಯ ನೀರಿನಿಂದ ತೊಳೆಯಿರಿ. ನಯವಾದ ತುಟಿಗಳನ್ನು ಪಡೆಯಬೇಕು ಎಂದಿದ್ದರೆ ದಿನದಲ್ಲಿ 2-3 ಸಲ ಹೀಗೆ ಮಾಡಿ.