ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆ ಶ್ರೀಸಿದ್ದೇಶ್ವರ ಸಂಸ್ಥೆಯಿಂದ ನಗರ ದೇವತೆ ಸಿದ್ದೇಶ್ವರನ ಪ್ರಸಕ್ತ ಸಾಲಿನ ಸಂಕ್ರಮಣದ ನಮ್ಮೂರ ಜಾತ್ರೆಯನ್ನು ಸರಳವಾಗಿ ಅಚರಿಸಲು ನಿರ್ಧರಿಸಿದೆ. ಆದರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತಗೊಳಿಸಿ, ಜಾತ್ರೆ ಆಚರಿಸಲು ಯೋಜಿಸಿದೆ.
ಮಂಗಳವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಚೇರ್ಮನ್ ಬಸಯ್ಯ ಹಿರೇಮಠ, ಸಿದ್ದೇಶ್ವರ ಶ್ರೀಗಳ ನಿಧನ ಹಿನ್ನೆಲೆಯಲ್ಲಿ ಸಿದ್ದೇಶ್ವರ ಜಾತ್ರಾ ಮಹೋತ್ಸದಲ್ಲಿ ಜಾನುವಾರು ಜಾತ್ರೆ ರದ್ದು ಮಾಡಲಾಗಿದೆ. ಮದ್ದು ಸುಡುವ ಕಾರ್ಯಕ್ರಮ ರದ್ದು ಮಾಡಿದ್ದೇವೆ. ದೇವಸ್ಥಾನದ ಆವರಣದಲ್ಲಿ ಎರಡು ಬದಿಗೆ ಅಂಗಡಿಗಳನ್ನು ಹಾಕುವುದಕ್ಕೂ ಅವಕಾಶ ನೀಡದಿರಲು ನಿರ್ಧರಿಸಿದ್ದೇವೆ ಎಂದರು.
ಜಾತ್ರೆಯಲ್ಲಿ ಪ್ರಮುಖ ಅದ್ದೂರಿ ಕಾರ್ಯಕ್ರಮಗಳನ್ನೆಲ್ಲ ರದ್ದು ಮಾಡಿದ್ದು, ನಂದಿಕೋಲು ಉತ್ಸವ, ಪಲ್ಲಕ್ಕಿ ಉತ್ಸವ, ಭೋಗಿ, ಹೋಮಗಳಂಥ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಸೀಮಿತ ಗೊಳಿಸಲು ನಿರ್ಧರಿಸಿದ್ದೇವೆ ಎಂದರು.
ಇದನ್ನೂ ಓದಿ:ಬಾದಾಮಿಗೆ ಸಿದ್ದರಾಮಯ್ಯ ಉತ್ತರಾಧಿಕಾರಿ ಯಾರು?ಕ್ಷೇತ್ರದಲ್ಲಿದ್ದಾರೆ 12 ಜನ ಆಕಾಂಕ್ಷಿಗಳು
ಜ. 12 ರಂದು ಸಂಜೆ 6ಕ್ಕೆ ಗೋ ಪೂಜೆಯೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ನೀಡಿ, ನಂದಿ ಧ್ವಜಗಳ ಮೆರವಣಿಗೆ ಇರಲಿದೆ. ಜ.13 ರಂದು ಮ.12-30 ಕ್ಕೆ ನಂದಿ ಧ್ವಜಗಳ ಪೂಜೆ ನೆರವೇರಲಿದೆ. ನಗರದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಯಲಿದೆ.
ಜ. 14 ರಂದು ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸಿದ್ದೇಶ್ವರ ಶ್ರೀಗಳ ವೇದಿಕೆಯಲ್ಲಿ ಅಕ್ಷತಾರ್ಪಣೆ, ಭೋಗಿ, ನಂದಿ ಧ್ವಜ ಪೂಜೆ, ಯೋಗ ದಂಡ ಪೂಜೆ ನೆರವೇರಲಿದೆ ಎಂದು ವಿವರಿಸಿದರು.
ಜ.15 ರಂದು ಸಂಕ್ರಾಂತಿ ದಿನ ಮ. 12-30 ಕ್ಕೆ ನಂದಿ ಧ್ವಜ ಪೂಜೆ ಹಾಗೂ ಹೋಮಹವನ ಕಾರ್ಯಕ್ರಮ ನಡೆಯಲಿದೆ. ಬಳಿಕ ಎಳ್ಳುಬೆಲ್ಲ ಕೊಡುವ ಕಾರ್ಯಕ್ರಮ, ನಂದಿ ಧ್ವಜ ಮೆರವಣಿಗೆ ನಡೆಯಲಿದೆ ಎಂದರು.
ಜ.16 ರಂದು ಮಧ್ಯಾಹ್ನ 12-30ಕ್ಕೆ ಸಿದ್ಧೇಶ್ವರನಿಗೆ ಪೂಜೆ, ನಂದಿ ಧ್ವಜ ಮೆರವಣಿಗೆ ನಡೆಯಲಿದೆ. ಅಂದು ನಡೆಯಲಿದ್ದ ಮದ್ದು ಸುಡುವ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದರು.
ಜ.17 ರಂದು ದೇವಸ್ಥಾನ ಆವರಣದಲ್ಲಿ ಭಾರ ಎತ್ತುವ ಸ್ಪರ್ಧೆ, ಜ.18 ರಂದು ಕುಸ್ತಿ ಪಂದ್ಯಗಳು ನಡೆದರೂ ಸರಳ ರೀತಿಯಲ್ಲಿ ಆಯೋಜಿಸಲು ನಿರ್ಧರಿಸಿದ್ದೇವೆ ಎಂದು ವಿವರಿಸಿದರು.
ಜಾತ್ರೆರಯ ನಿಮಿತ್ಯ ಜ.13 ರಿಂದ ನಿತ್ಯವೂ ಸಂಜೆ 6-30 ರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮೊದಲ ದಿನ ಸಿದ್ದೇಶ್ವರ ಶ್ರೀಗಳಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಿದ್ದು, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಮಾತನಾಡಲಿದ್ದಾರೆ. ಉಳಿದಂತೆ ಜ.17 ರ ವರೆಗೆ ನಿತ್ಯವೂ ಸಂಜೆ ಭಕ್ತಿಗೀತೆ, ಭಾವಗೀತೆ, ಭಜನೆಗಳಂಥ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಅಧ್ಯಕ್ಷರೂ ಆದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಸಿದ್ದೇಶ್ವರ ಶ್ರೀಗಳ ಅಗಲಿಕೆಯಿಂದಾಗಿ ಈ ಬಾರಿ ಸರಳವಾಗಿ ಜಾತ್ರೋತ್ಸವ ಆಯೋಜಿಸಲಾಗಿದೆ ಎಂದರು.
ಮುಖಂಡರಾದ ಸಿದ್ರಾಮಪ್ಪ ಉಪ್ಪಿನ, ಸಂ.ಗು.ಸಜ್ಜನ, ರಾಜು ಮಗಿಮಠ, ಎಸ್.ಎಂ.ಕರಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.